ಬೆಂಗಳೂರು: ಪಂಚ ಗ್ಯಾರಂಟಿಗಳಲ್ಲಿ ಒಂದಾದ "ಗೃಹ ಜ್ಯೋತಿ' ಯೋಜನೆ ಫಲಾನುಭವಿಗಳ ಮಾಹಿತಿ ಪರಿಶೀಲನೆ ವೇಳೆ ಜಾತಿ ವಿವರ ನೀಡುವುದು ಕಡ್ಡಾಯವಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸ್ಪಷ್ಟಪಡಿಸಿದೆ.
ರಾಜ್ಯವ್ಯಾಪಿ ಫಲಾನುಭವಿಗಳ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಆರಂಭಗೊಂಡಿದೆ.
ಬೆಸ್ಕಾಂ ಸಿಬಂದಿ, ಮೀಟರ್‌ರೀಡರ್‌ಗಳು ಸೇವಾ ಸಿಂಧು ಮೊಬೈಲ್ ಅಪ್ಲಿಕೇಷನ್ ಮತ್ತು ಮುದ್ರಿತ ಘೋಷಣಾ ಪತ್ರದ ಮೂಲಕ ವಿವರ ಕಲೆ ಹಾಕುತ್ತಿದ್ದಾರೆ. ಈ ವೇಳೆ ಫಲಾನುಭವಿಯ ಪ್ರವರ್ಗ (ಜಾತಿ ಪ್ರಮಾಣಪತ್ರ) ಹಾಗೂ ಉಪಜಾತಿಯ ವಿವರ ಕಡ್ಡಾಯವಾಗಿ ಕೇಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಕುರಿತು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೆ ಸ್ಪಷ್ಟನೆ ನೀಡಿರುವ ಬೆಸ್ಕಾಂ, ಗೃಹಜ್ಯೋತಿ ಫಲಾನುಭವಿಗಳ ಪ್ರವರ್ಗಕ್ಕೆ (ಜಾತಿ) ಸಂಬಂಧಿಸಿದ ಮಾಹಿತಿಯು ಕಡ್ಡಾಯವಲ್ಲ, ಅದು ಕೇವಲ ಐಚ್ಛಿಕ ಆಗಿದೆ. ಇಂತಹ ಸಂದರ್ಭದಲ್ಲಿ ಮೊಬೈಲ್ ಅಪ್ಲಿಕೇಶನ್‌ನಲ್ಲಿರುವ ಮಾಹಿತಿ ನೀಡಲು ನಿರಾಕರಣೆ ಎಂಬ ಆಯ್ಕೆ ನಮೂದಿಸಲು ಸಿಬಂದಿಗೆ ಸೂಚನೆ ನೀಡಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.

