ಸೇಂಟ್ ಲೂಯಿಸ್: ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಗುರುವಾರ ಇತಿಹಾಸ ನಿರ್ಮಿಸಿದ್ದಾರೆ. ಗ್ರ್ಯಾಂಡ್ ಚೆಸ್ ಟೂರ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಫ್ಯಾಬಿಯಾನೊ ಕರುವಾನಾ ವಿರುದ್ಧ ಅದ್ಭುತ ಪುನರಾಗಮನ ಸಾಧಿಸಿದ ಚೆನ್ನೈ ಮೂಲದ ಗ್ರ್ಯಾಂಡ್‌ಮಾಸ್ಟರ್, 2026ರ ತಮ್ಮ ಅತ್ಯುತ್ತಮ ಅಭಿಯಾನಕ್ಕೆ ಮತ್ತೊಂದು ಮಹತ್ವದ ಪ್ರಶಸ್ತಿಯನ್ನು ಸೇರಿಸಿಕೊಂಡರು.
ಕ್ಲಾಸಿಕಲ್ ಪಂದ್ಯಗಳ ಬಳಿಕ ಪ್ರಜ್ಞಾನಂದ ಅವರು ಕರುವಾನಾಗಿಂತ ಆರು ಅಂಕಗಳಷ್ಟು ಹಿಂದುಳಿದಿದ್ದರು. 3-9ರ ಹಿನ್ನಡೆಯೊಂದಿಗೆ ಅಂತಿಮ ದಿನಕ್ಕೆ ಕಾಲಿಟ್ಟಿದ್ದ ಅವರು, ಬಳಿಕ ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದುಕೊಂಡರು.
ಸೇಂಟ್ ಲೂಯಿಸ್‌ನಲ್ಲಿ ಪುನರಾಗಮನ ಪೂರ್ಣಗೊಳಿಸಿದ ಬಳಿಕ ಮಾತನಾಡಿದ ಪ್ರಜ್ಞಾನಂದ, ದಿನದ ಆರಂಭದಲ್ಲಿ ಗೆಲುವಿನ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ ಎಂದು ಒಪ್ಪಿಕೊಂಡರು."ನಿಜ ಹೇಳಬೇಕೆಂದರೆ, ಇಂದು ನನಗೆ ಹೆಚ್ಚಿನ ಅವಕಾಶವಿದೆ ಎಂದು ನಾನು ಅಂದುಕೊಂಡಿರಲಿಲ್ಲ. ಆರು ಅಂಕಗಳ ಹಿನ್ನಡೆ ದೊಡ್ಡದಾಗಿತ್ತು. ನಾನು ಮಾಡಿದ ರೀತಿಯಲ್ಲೇ ಆಡಬೇಕಾಗಿತ್ತು" ಎಂದು ನಗುತ್ತಾ ಹೇಳಿದರು.
"ಇದು ಸುಲಭದ ಕೆಲಸವಲ್ಲ. ಫ್ಯಾಬಿ ವಿರುದ್ಧ ಒಂದು ಗೆಲುವು ಸಾಧಿಸುವುದೇ ಪ್ರತಿದಿನ ಸಾಧ್ಯವಾಗುವುದಿಲ್ಲ. ಆದರೆ ರ‍್ಯಾಪಿಡ್‌ನಲ್ಲಿ ಅವರ ವಿರುದ್ಧ ಎರಡು ಪಂದ್ಯಗಳನ್ನು ಗೆದ್ದಿದ್ದು ನಿರ್ಣಾಯಕವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನನ್ನ ರ‍್ಯಾಪಿಡ್ ಮತ್ತು ಬ್ಲಿಟ್ಜ್ ಆಟದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಈ ಮಾದರಿಯ ಟೂರ್ನಿಯಲ್ಲಿ ಅದು ದೊಡ್ಡ ಬದಲಾವಣೆಯನ್ನು ತಂದಿದೆ" ಎಂದರು.
ಎರಡೂ ರ‍್ಯಾಪಿಡ್ ಪಂದ್ಯಗಳನ್ನು ಗೆದ್ದ ಪ್ರಜ್ಞಾನಂದ, 11-9ರ ಮುನ್ನಡೆ ಸಾಧಿಸುವ ಮೂಲಕ ಸ್ಪರ್ಧೆಯ ಚಿತ್ರಣವನ್ನೇ ಬದಲಿಸಿದರು. ಬಳಿಕ ಮೊದಲ ಬ್ಲಿಟ್ಜ್ ಪಂದ್ಯ ಡ್ರಾಗೊಂಡರೆ, ಎರಡನೇ ಬ್ಲಿಟ್ಜ್ ಪಂದ್ಯವನ್ನು ಕರುವಾನಾ ಗೆದ್ದು 12-12ರಲ್ಲಿ ಸಮಬಲ ಸಾಧಿಸಿದರು. ಆದರೆ ಮೂರನೇ ಬ್ಲಿಟ್ಜ್ ಪಂದ್ಯದಲ್ಲಿ ಪ್ರಜ್ಞಾನಂದ ಗೆದ್ದು ಮತ್ತೆ ಮುನ್ನಡೆ ಸಾಧಿಸಿದರು.
ಅಂತಿಮ ಪಂದ್ಯದಲ್ಲಿ ಡ್ರಾ ಸಾಧಿಸಿದರೆ ಸಾಕಾಗಿದ್ದ ಪ್ರಜ್ಞಾನಂದ, ಗೆಲ್ಲುವ ಸ್ಥಿತಿಯಲ್ಲಿದ್ದರೂ ಮೂರು ಬಾರಿ ಒಂದೇ ಸ್ಥಾನ ಪುನರಾವರ್ತನೆಯಾಗುವ 'ಥ್ರೀಫೋಲ್ಡ್ ರಿಪಿಟಿಷನ್' ಮೂಲಕ ಅಗತ್ಯ ಫಲಿತಾಂಶವನ್ನು ಪಡೆದುಕೊಂಡರು.ಇಬ್ಬರು ಫೈನಲಿಸ್ಟ್‌ಗಳ ನಡುವಿನ ಒಟ್ಟು ಆರು ಪಂದ್ಯಗಳಲ್ಲಿ ಪ್ರಜ್ಞಾನಂದ ಮೂರು ಪಂದ್ಯಗಳನ್ನು ಗೆದ್ದರೆ, ಎರಡು ಪಂದ್ಯಗಳು ಡ್ರಾಗೊಂಡವು. ಒಂದು ಪಂದ್ಯದಲ್ಲಿ ಅವರು ಸೋಲು ಕಂಡರು.
ಅದ್ಭುತ 2026ರ ಅಭಿಯಾನ
ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿ, 2026ರಲ್ಲಿ ಪ್ರಜ್ಞಾನಂದ ಅವರು ವಿಶ್ವದ ಅಗ್ರಮಾನ್ಯ ಆಟಗಾರರ ವಿರುದ್ಧ ನೀಡುತ್ತಿರುವ ಸತತ ಅತ್ಯುತ್ತಮ ಪ್ರದರ್ಶನಕ್ಕೆ ಮತ್ತೊಂದು ಸಾಧನೆಯಾಗಿದೆ. ವರ್ಷದ ಆರಂಭದಲ್ಲಿ ನಡೆದ 2026ರ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಎರಡನೇ ಬಾರಿ ಭಾಗವಹಿಸಿದ್ದ ಅವರು ನಿರಾಸೆ ಅನುಭವಿಸಿದ್ದರು. ಆದರೆ ಅದಾದ ಬಳಿಕ ಭರ್ಜರಿ ಪ್ರದರ್ಶನ ನೀಡಿದ ಪ್ರಜ್ಞಾನಂದ, ನಾರ್ವೆ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರು. ಈ ವೇಳೆ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಎರಡು ಬಾರಿ ಸೋಲಿಸಿದ್ದರು.
ಇದಾದ ಬಳಿಕ ಸೇಂಟ್ ಲೂಯಿಸ್ ರ‍್ಯಾಪಿಡ್ ಆಯಂಡ್ ಬ್ಲಿಟ್ಜ್ ಟೂರ್ನಿಯಲ್ಲೂ ಪ್ರಶಸ್ತಿ ಗೆದ್ದ ಅವರು, ಸಿನ್‌ಕ್ವೆಫೀಲ್ಡ್ ಕಪ್‌ನಲ್ಲಿ ಜಂಟಿ ಮೊದಲ ಸ್ಥಾನ ಪಡೆದಿದ್ದರು.ಇತ್ತೀಚಿನ ಈ ಗೆಲುವು ವೇಗದ ಚೆಸ್ ಮಾದರಿಗಳಾದ ರ‍್ಯಾಪಿಡ್ ಮತ್ತು ಬ್ಲಿಟ್ಜ್‌ನಲ್ಲಿ ಅವರು ಸಾಧಿಸಿರುವ ಗಮನಾರ್ಹ ಪ್ರಗತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

