Dailyhunt
'ಗ್ಯಾರಂಟಿ' ಹಣ ಬಿಡುಗಡೆಗೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಣೆ

'ಗ್ಯಾರಂಟಿ' ಹಣ ಬಿಡುಗಡೆಗೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಣೆ

ಬೆಂಗಳೂರು: ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮುಗಿಯವ ತನಕ ಗ್ಯಾರಂಟಿ ಯೋಜನೆಗಳಿಗೆ ಹಣ ಬಿಡುಗಡೆಗೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಈ ನಿಟ್ಟಿನಲ್ಲಿ ನ್ಯಾಯಾಲಯ ಮಾಡುವ ಯಾವುದೇ ಆದೇಶವು ಅಂತಿಮವಾಗಿ ದುರ್ಬಲ ಮತ್ತು ತುಳಿತಕ್ಕೊಳಗಾದ ಸಮುದಾಯಗಳಿಗೆ ಹಾನಿ ಮಾಡಲಿದೆ.

ರಾಜ್ಯ ಸರ್ಕಾರ ನೀತಿ ಜಾರಿಗೊಳಿಸಿದ್ದು, ಅದನ್ನು ಮುಂದುವರಿಸುತ್ತಿದೆ ಎಂದು ಕೋರ್ಟ್‌ ಹೇಳಿದೆ.

ಕಳೆದ 6-7 ತಿಂಗಳಿಂದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ನಗದು ಬಿಡುಗಡೆ ತಡೆಹಿಡಿಯಲಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಏಕಕಾಲಕ್ಕೆ ಬಾಕಿ ಹಣ ಬಿಡುಗಡೆ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಆದ್ದರಿಂದ ಉಪ ಚುನಾವಣೆ ಮುಗಿಯುವ ತನಕ ಗೃಹಲಕ್ಷ್ಮಿ, ಯುವನಿಧಿ, ಗೃಹ ಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳ ಹಣ ಬಿಡುಗಡೆಗೆ ತಡೆ ನೀಡಬೇಕು ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿರುವ ಗೌತಮ್‌ ಕುಮಾರ್‌ ಜೈನ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ, ಈ ಅರ್ಜಿಯು ವಿಚಾರಣೆಗೆ ಅರ್ಹವಲ್ಲ. 6 ತಿಂಗಳಿಂದ ಗ್ಯಾರಂಟಿ ಯೋಜನೆಗಳ ಹಣ ನೀಡಲಾಗಿಲ್ಲ ಎಂಬುದಕ್ಕೆ ಅರ್ಜಿದಾರರು ದಾಖಲೆ ಸಲ್ಲಿಸಬೇಕು. ಫೆಬ್ರವರಿವರೆಗೆ ಎಲ್ಲವನ್ನೂ ವಿತರಿಸಿರುವುದಕ್ಕೆ ದಾಖಲೆ ಸಲ್ಲಿಸುತ್ತೇನೆ ಎಂದರು.

ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ವಾದ ಮಂಡಿಸಿ,'ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳನ್ನು ಸರ್ಕಾರ ಸರಿಯಾಗಿ ಜಾರಿಗೊಳಿಸಿಲ್ಲ. 6 ತಿಂಗಳಿಂದ ಅನ್ನಭಾಗ್ಯ ನೀಡಲಾಗಿಲ್ಲ. ನೀತಿ ಸಂಹಿತೆ ಜಾರಿಯಾದ ಮೇಲೆ ಹಣ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಹಣ ಬಿಡುಗಡೆಗೂ ಮುನ್ನ ಸರ್ಕಾರವು ಆಯೋಗದಿಂದ ಅನುಮತಿ ಪಡೆದಿಲ್ಲ. ಚುನಾವಣೆ ಮುಗಿಯುವವರೆಗೆ ಹಣ ಬಿಡುಗಡೆ ಮಾಡಬಾರದು ಎಂಬುದು ನಮ್ಮ ಕೋರಿಕೆ. ಉಚಿತ ಉಡುಗೊರೆಗಳು ದೇಶದ ಬೆಳವಣಿಗೆಗೆ ಮಾರಕ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ ಎಂದರು.

ಅದನ್ನು ನಾವು ತೋರಿಸಿದರೆ ಅರ್ಜಿದಾರರಿಗೆ ದಂಡ ಹಾಕಬೇಕು, ಫೆಬ್ರವರಿವರೆಗೆ ಎಲ್ಲವನ್ನೂ ವಿತರಿಸಿರುವುದಕ್ಕೆ ದಾಖಲೆ ಸಲ್ಲಿಸುತ್ತೇನೆ. 1-2 ತಿಂಗಳು ವಿಳಂಬವಾಗಿರಬಹುದು ಬಿಟ್ಟರೆ ಫಲಾನುಭವಿಗಳಿಗೆ ನಿಯಮಿತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.

Dailyhunt
Disclaimer: This content has not been generated, created or edited by Dailyhunt. Publisher: Udayavani