Dailyhunt Logo
  • Light mode
    Follow system
    Dark mode
    • Play Story
    • App Story
ಹಾರಾಡಿ ಹೊಳೆ ಸೇತುವೆ ನಿರ್ಮಾಣಕ್ಕೆ ಬೇಡಿಕೆ

ಹಾರಾಡಿ ಹೊಳೆ ಸೇತುವೆ ನಿರ್ಮಾಣಕ್ಕೆ ಬೇಡಿಕೆ

ಕಾರ್ಕಳ: ಶಿರ್ಲಾಲು ಗ್ರಾಮದ ಹಾರಾಡಿ ನದಿಗೆ ಶಾಶ್ವತ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದು, ಸೇತುವೆ ಇಲ್ಲದಿರುವುದರಿಂದ 16 ಕುಟುಂಬಗಳ ಸುಮಾರು 80 ಮಂದಿ ಹಲವು ವರ್ಷಗಳಿಂದ ಸಂಚಾರದ ಸಮಸ್ಯೆ ಎದುರಿಸುತ್ತಿದ್ದಾರೆ. ಜೂನ್, ಜುಲೈನಿಂದ ಮಳೆಗಾಲದ ತೀವ್ರತೆ ಕಡಿಮೆಯಾಗುವವರೆಗೆ ಇಲ್ಲಿನ ನದಿ ನೀರಿನ ರಭಸ ಹೆಚ್ಚಿರುತ್ತದೆ.

ಕೊಂಚ ಎಚ್ಚರ ತಪ್ಪಿದರೂ ಆಪತ್ತು ಸಂಭವಿಸುವ ಅಪಾಯವಿದೆ.

ಕುದುರೆಮುಖ ವನ್ಯಜೀವಿ ವಿಭಾಗದ ಗಡಿಯಂಚಿನಲ್ಲಿರುವ ಈ ಪ್ರದೇಶದ ಜನರು ಮುಖ್ಯಪೇಟೆ, ಶಾಲೆ, ಆರೋಗ್ಯ ಸೇವೆ ಹಾಗೂ ಇತರ ಅಗತ್ಯ ಕೆಲಸಗಳಿಗೆ ತೆರಳಲು ನದಿಯನ್ನು ದಾಟಬೇಕಾಗಿದೆ. ಮಳೆಗಾಲದಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುವುದರಿಂದ ಸಂಚಾರ ಮತ್ತಷ್ಟು ಕಷ್ಟವಾಗುತ್ತದೆ. ನದಿ ದಾಟಲು ಸಾಧ್ಯವಾಗದ ಸಂದರ್ಭಗಳಲ್ಲಿ ಸುತ್ತು ಬಳಸಿ ಕಾಲ್ನಡಿಗೆಯಲ್ಲಿ ತೆರಳಬೇಕಾದ ಪರಿಸ್ಥಿತಿಯಿದೆ.

ಪ್ರಸ್ತುತ 100 ಮೀ. ಅಂತರದಲ್ಲಿ ಸಣ್ಣ ಕಾಲು ಸೇತುವೆಯಿದ್ದರೂ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಹಾರಾಡಿ ಭಾಗದ ಮನೆಗಳಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದರೂ, ನದಿಗೆ ಸೂಕ್ತ ದೊಡ್ಡ ಸೇತುವೆ ಇಲ್ಲದಿರುವುದರಿಂದ ರಸ್ತೆಯ ಸಂಪೂರ್ಣ ಪ್ರಯೋಜನ ಜನರಿಗೆ ದೊರೆಯುತ್ತಿಲ್ಲ.

ಈ ಪ್ರದೇಶದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಸುಮಾರು 10 ಮಕ್ಕಳಿದ್ದು, ಶಾಲೆಗೆ ತೆರಳಲು ದೂರದ ಪ್ರದೇಶಗಳನ್ನು ಅವಲಂಬಿಸಬೇಕಾಗಿದೆ. ಮಳೆಗಾಲದಲ್ಲಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಕೆಲವು ಕುಟುಂಬಗಳು ಶಾಲೆಗಳ ಸಮೀಪ ಬಾಡಿಗೆ ಮನೆ ಮಾಡಿಕೊಂಡು ಮಕ್ಕಳನ್ನು ಇರಿಸುವ ಪರಿಸ್ಥಿತಿಯೂ ಇದೆ. ಮನೆ ನಿರ್ಮಾಣ ಸೇರಿದಂತೆ ಅಗತ್ಯ ವಸ್ತುಗಳನ್ನು ಸಹ ಇದೇ ಕಷ್ಟಕರ ಮಾರ್ಗದಲ್ಲಿ ಸಾಗಿಸಬೇಕಾಗಿದೆ.

ಕುದುರೆಮುಖ ಅರಣ್ಯ ಪ್ರದೇಶ ಸಮೀಪದಲ್ಲಿರುವುದರಿಂದ ಕಾಡುಪ್ರಾಣಿಗಳ ಹಾವಳಿಯ ಆತಂಕವೂ ಜನರಿಗಿದೆ. ಆನೆಗಳು ತೋಟಗಳಿಗೆ ದಾಳಿ ನಡೆಸಿರುವ ಘಟನೆಗಳಿದ್ದು, ರಾತ್ರಿ ವೇಳೆ ಸಂಚಾರ ನಡೆಸಲು ಜನರು ಭಯಪಡುತ್ತಿದ್ದಾರೆ. ರಸ್ತೆಯಲ್ಲಿ ಬೀದಿದೀಪಗಳ ಕೊರತೆಯೂ ಸಮಸ್ಯೆಯನ್ನು ಹೆಚ್ಚಿಸಿದೆ. ಇತ್ತೀಚೆಗೆ ಶಾಸಕ ಸುನಿಲ್ ಕುಮಾರ್ ಅವರು ಈ ಭಾಗಕ್ಕೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿ ಸೇತುವೆ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸೇತುವೆ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.

ಸೇತುವೆಯಾದರೆ ಹಲವು ಅನುಕೂಲ
ಸೇತುವೆ ನಿರ್ಮಾಣವಾದರೆ ಹಲವು ವರ್ಷಗಳಿಂದ ಸಂಚಾರದ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಅನುಕೂಲವಾಗುವುದರ ಜೊತೆಗೆ ಮಕ್ಕಳ ಶಿಕ್ಷಣ, ಆರೋಗ್ಯ ಸೇವೆ ಹಾಗೂ ದಿನನಿತ್ಯದ ಅಗತ್ಯಗಳಿಗೆ ಸುಗಮ ಸಂಪರ್ಕ ದೊರೆಯಲಿದೆ. ಶಾಲೆಗೆ, ಉದ್ಯೋಗಕ್ಕೆ, ಆಸ್ಪತ್ರೆಗೆ, ಪಡಿತರಕ್ಕೆ ಓಡಾಡುವ ಸಾಕಷ್ಟು ಅನುಕೂಲವಾಗಲಿದೆ. ಮಳೆಗಾಲ ಸಂದರ್ಭ ಸಾಕಷ್ಟು ಅಪಾಯಕಾರಿಯಾಗಿದ್ದು, ಇದರಿಂದ ಮುಕ್ತಿ ದೊರೆಯಲಿದೆ ಎಂದು ಸ್ಥಳೀಯರ ಅಭಿಪ್ರಾಯ.

3.5 ಕೋಟಿ ರೂ. ವೆಚ್ಚ ಸೇತುವೆಗೆ ಪ್ರಸ್ತಾವನೆ
ಗ್ರಾಮೀಣ ಭಾಗದ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗುತ್ತಿದ್ದು, ಹಂತ ಹಂತವಾಗಿ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗುತ್ತಿದೆ. ಹಾರಾಡಿ ನದಿಗೆ ಸೇತುವೆ ನಿರ್ಮಾಣಕ್ಕೆ ಈಗಾಗಲೇ 3.5 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
- ವಿ. ಸುನೀಲ್ ಕುಮಾರ್, ಶಾಸಕ, ಕಾರ್ಕಳ

Dailyhunt
Disclaimer: This content has not been generated, created or edited by Dailyhunt. Publisher: Udayavani