Wednesday, 21 Oct, 1.13 pm ಉದಯವಾಣಿ

ರಾಜ್ಯ
ಹಸಿದವರಿಗೆ ಅನ್ನವಿತ್ತವರಿಗೆ ಸಿಗಲಿಲ್ಲ ಕೊನೇ ತುತ್ತು: ಎಎಸ್‌ಐ ಜೀವನ ದುಃಖಾಂತ್ಯ

ಬೆಂಗಳೂರು: ಕೋವಿಡ್-19 ಲಾಕ್‌ಡೌನ್‌ ಸಂದರ್ಭದಲ್ಲಿ ನಲವತ್ತರಿಂದ ಐವತ್ತು ಮಂದಿಯ ಹೊಟ್ಟೆ ತುಂಬಿ ದೇವರಾದರು! ಆದರೆ.. “ಹೊಟ್ಟೆ ಹಸಿಯುತ್ತಿದೆ, ಊಟ ಕೊಡಿ’ ಎಂದು ಅಂಗಲಾಚಿದ ಅದೇ ದೇವರಿಗೆ ಕೊನೆ ಉಸಿರಿನ ಸಂದರ್ಭದಲ್ಲಿ ಊಟ ನೀಡಲಾಗಲೇ ಇಲ್ಲ!

ಇದು ಡಿ.ಜೆ. ಹಳ್ಳಿ ಗಲಭೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯ ಮುಂಚೂಣಿಯಲ್ಲಿದ್ದ, ಬಳಿಕ ಕೋವಿಡ್ ದೃಢಪಟ್ಟು “ಹುತಾತ್ಮ’ರಾದ ಮಹಾಲಕ್ಷ್ಮಿ ಬಡಾವಣೆ ಪೊಲೀಸ್‌ ಠಾಣೆಯ ಸಹಾಯಕ ‌ಸಬ್‌ಇನ್ಸ್‌ಪೆಕ್ಟರ್‌ (ಎಎಸ್‌ಐ) ಆಗಿದ್ದ ಪರಮೇಶ್ವರಯ್ಯ ಅವರ ಪರಿಸ್ಥಿತಿ. ಈ ಬಗ್ಗೆ ಕಣ್ಣಾಲಿಗಳನ್ನು ತುಂಬಿಕೊಂಡು ವಿವರಿಸಿದವರು ಅವರ ಪುತ್ರ ಅನಿಲ್‌ಕುಮಾರ್‌.. “ಕೋವಿಡ್ ಹುತಾತ್ಮ ‘ಪೊಲೀಸರಿಗೆ “ಉದಯವಾಣಿ‘ ‌ಯಿಂದ “ಸೆಲ್ಯೂಟ್‌’ ನೀಡುವ ಸಂದರ್ಭದಲ್ಲಿ ಮಾತನಾಡಿದ ಅವರು, ಹೇಳಿದ್ದು ಹೀಗೆ…

ಲಾಕ್‌ಡೌನ್‌ ಸಂದರ್ಭದಲ್ಲಿ 40-50 ಮಂದಿ ಬಡ ಆಟೋ ಚಾಲಕರಿಗೆ ನಮ್ಮ ತಂದೆ ತಲಾ 25 ಕೆ.ಜಿ.ಅಕ್ಕಿ ಚೀಲವನ್ನು ನೀಡಿ ಧೈರ್ಯ ತುಂಬಿದ್ದಾರೆ. ಅವರೊಂದಿಗೆ ನಾನು ಕೂಡ ವಿತರಿಸಲು ಹೋಗುತ್ತಿದ್ದೆ. ಅವರ ಸಹಾಯಕ್ಕೆ ಆಟೋ ಚಾಲಕರು ಕೈಮುಗಿದು ಕಣ್ಣಿರು ತುಂಬಿಕೊಳ್ಳುತ್ತಿದ್ದರು. ಹತ್ತಾರು ಮಂದಿಗೆ ಹೊಟ್ಟೆ ತುಂಬಿಸಿದ ನಮ್ಮ ತಂದೆ ಕೊನೆ ದಿನಗಳಲ್ಲಿ ಅನ್ನ ಇಲ್ಲದೇ ಪ್ರಾಣ ಬಿಟ್ಟಿದ್ದು ದೊಡ್ಡ ದುರಂತ. ಕೊನೆಯ ಒಂದೆರಡು ದಿನಗಳಲ್ಲಿ “ಹೊಟ್ಟೆ ಹಸಿಯುತ್ತಿದೆ ಊಟ ಕೊಡಲು ಹೇಳು,’ ಎಂದು ನನ್ನ ಮತ್ತು ನನ್ನ ತಾಯಿ ಬಳಿ ಅಂಗಲಾಚುತ್ತಿದ್ದರು. ‌ª ಆದರೆ, ವೈದ್ಯರು ಊಟ ಕೊಟ್ಟರೆ ಚಿಕಿತ್ಸೆಗೆ ತೊಂದರೆ ಆಗುತ್ತದೆ ಎಂದರು! ಈ ಕಾರಣಕ್ಕೆ ಇರಬಹುದು ತಂದೆಯನ್ನು ನಾವು ಕಳೆದು ಕೊಂಡಿದ್ದೇವೆ ಎಂದನಿಸುತ್ತಿದೆ..

ಅರ್.ಆರ್.ನಗರ ಉಪ'ಸಮರ': ಕೈ ಕಾರ್ಯಕರ್ತರ ಮೇಲೆ ಮುನಿರತ್ನ ಬೆಂಬಲಿಗರಿಂದ ಹಲ್ಲೆ, ಪ್ರತಿಭಟನೆ

ಸ್ವಂತ ಮನೆಯಾಸೆ!: ಪೊಲೀಸ್‌ ಇಲಾಖೆಯಲ್ಲಿ ಹತ್ತಾರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಪರಮೇಶ್ವರಯ್ಯ ಅವರಿಗೆ ಬೆಂಗಳೂರಿನಲ್ಲಿ ಮನೆ ಕಟ್ಟಬೇಕೆಂಬ ಮಹದಾಸೆ ಇತ್ತು. ಈ ಬಗ್ಗೆ ನೋವಿನಿಂದಲೇ ಹೇಳುವ ಅವರ ಪುತ್ರ ಅದನ್ನು ಅವರ ಹಣದಿಂದಲೇ ಈಡೇರಿಸುತ್ತೇವೆ. ಅವರ “ಕನಸಿನ ಮನೆ’ಯನ್ನು’ ನಿರ್ಮಿಸಿಯೇ ತಿರುತ್ತೇವೆ’ “ತುಮಕೂರಿನ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಪಡೆದ ನಮ್ಮ ತಂದೆ ಬಹಳಷ್ಟು ಶ್ರಮಪಟ್ಟು ಪೊಲೀಸ್‌ ಇಲಾಖೆಗೆ ಸೇರಿದರು. ಅಂದಿನಿಂದ ಪ್ರಮಾಣಿಕವಾಗಿ ದುಡಿದು ಎಎಸ್‌ಐ ಹಂತದವರೆಗೆ ಕರ್ತವ್ಯ ನಿರ್ವಹಿಸಿದ್ದಾರೆ. ಈ ಬಗ್ಗೆ ನಮ್ಮ ಕುಟುಂಬಕ್ಕೆ ಹೆಮ್ಮೆಯಿದೆ. ಪತ್ನಿ, ಮಕ್ಕಳು ಮತ್ತು ಮೊಮ್ಮಗಳನ್ನು ಕಂಡರೆ ತುಂಬ ಪ್ರೀತಿ. ನಮ್ಮ ತಂದೆ ನಮ್ಮಗಾಗಿ ಬಿಟ್ಟು ಹೋದ ಆಸ್ತಿ ಎಂದರೆ ವಿದ್ಯೆ. ಇಬ್ಬರಿಗೂ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಅದೇ ನಮಗೆ ಜೀವನಾಧಾರ.

ಈಗ ಬಾಡಿಗೆ ಮನೆ!: ಈ ಮೊದಲು ಮಾಗಡಿ ರಸ್ತೆಯ ಪೊಲೀಸ್‌ ಕ್ವಾಟ್ರಸ್‌ ನಲ್ಲಿ ವಾಸವಾಗಿದ್ದೆವು. ಈಗ ರಾಜಾಜಿನಗರದ 6ನೇ ಬ್ಲಾಕ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ನಾನು ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್‌ ಆಗಿದ್ದೆ. ಸಹೋದರ ಸುನೀಲ್‌ ಕುಮಾರ್‌ ಇಂಟಿರಿಯಲ್‌ ಡಿಸೈನರ್‌ ಆಗಿದ್ದಾನೆ ಎನ್ನುತ್ತಾರೆ ಅನಿಲ್‌ ಕುಮಾರ್.

ಅಂತರ್ಜಾತಿ ಮದುವೆಯಾದ ಯುವತಿ ನಿಗೂಢ ನಾಪತ್ತೆ: 5 ವರ್ಷದ ಬಳಿಕ ಪೋಷಕರಿಂದ ದೂರು ದಾಖಲು

ಪರಮೇಶ್ವರಯ್ಯ ಅವರಿಗೆ ಎರಡು ವರ್ಷಗಳ ಹಿಂದೆ ಸಕ್ಕರೆ ಕಾಯಿಲೆ ಇತ್ತು. ಈ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದರು. ಕೋವಿಡ್ ಆರಂಭದ ಬಳಿಕ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಬಾರದು. ಠಾಣೆಯಲ್ಲೇ ಇರಿಸಬೇಕು ಎಂದು ಹಿರಿಯ ಅಧಿಕಾರಿಗಳು ಸೂಚಿಸಿದ್ದರು. ಆದರೆ, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಾಟೆ ಸಂದರ್ಭದಲ್ಲಿ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ನಮ್ಮ ತಂದೆ ಕರ್ತವ್ಯಕ್ಕೆ ತೆರಳಿದ್ದರು. ಅನಂತರ ಕೋವಿಡ್ ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್‌ ಬಂದಿತ್ತು. ಕೆಲ ದಿನಗಳ ಬಳಿಕ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಬಳಿಕ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡು ಮನೆಗೆ ಹಿಂದಿರುಗಿದರು.

ಅನಂತರ ಮತ್ತೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೆವು. ಆಗ ಕೋವಿಡ್ ದೃಢಪಟ್ಟಿತು. ಈ ವೇಳೆ ತಂದೆಯನ್ನು ನೋಡಿಕೊಳ್ಳುವ ಸಲುವಾಗಿ ಅನಿವಾರ್ಯವಾಗಿ ಕೆಲಸ ಬಿಟ್ಟೆ. ಇದೀಗ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಸಹೋದರನ ಸಹಾಯ ಇದೆ’ ಎಂದು ಭಾವುಕರಾದರು ಅನಿಲ್‌ ಕುಮಾರ್‌.

ಮೋಹನ್ ಭದ್ರಾವತಿ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top