ಹೆಬ್ರಿ: ನಕ್ಸಲ್ ಚಟುವಟಿಕೆಗಳಿಂದ ಹಲವು ವರ್ಷಗಳ ಕಾಲ ಸುದ್ದಿಯಲ್ಲಿದ್ದ ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮ ಈಗ ಕಸ್ತೂರಿ ರಂಗನ್ ವರದಿ ಜಾರಿಯ ನೆರಳಿನಲ್ಲಿದೆ.
ನಕ್ಸಲ್ ಭಯ ಮಾಸುವ ಮೊದಲೇ ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾದೀತೇ ಎಂಬ ಕಳವಳ ಗ್ರಾಮಸ್ಥರದು.
ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಬ್ಬಿನಾಲೆಯ ಸುತ್ತಮುತ್ತ ಪ್ರದೇಶ ಹಾಗೂ ಹೆಬ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದುರ್ಗಾ, ಸಾಂತೊಳ್ಳಿ ಸುತ್ತಮುತ್ತ ಪ್ರದೇಶಗಳು ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿವೆ.
ನಕ್ಸಲ್ ಆತಂಕ ಮರೆಯುವ ಮೊದಲೇ...
ನಕ್ಸಲ್ ಚಟುವಟಿಕೆ ಕೇಂದ್ರವಾದ ಹಾಗೂ ನಕ್ಸಲ್ ರಾಜ್ಯ ನಾಯಕ ವಿಕ್ರಂ ಗೌಡ ಇದ್ದ ಈ ಪರಿಸರದಲ್ಲಿ ಜನ ಆಗ ಆತಂಕದಲ್ಲಿ ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ವಿಕ್ರಂ ಗೌಡನ ಎನ್‌ಕೌಂಟರ್ ಆದ ಬಳಿಕ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡತೊಡಗಿದ್ದರು. ಈಗ ಕಸ್ತೂರಿ ರಂಗನ್ ವರದಿಯ ನರಳು ಆವರಿಸಿದೆ.
ಅಭಿವೃದ್ಧಿ ಕನಸು ಮರೀಚಿಕೆ
ಕಬ್ಬಿನಾಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ, ಸೇತುವೆ, ಕುಡಿಯುವ ನೀರು, ಮೊಬೈಲ್ ಸಂಪರ್ಕ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯಗಳ ಬೇಡಿಕೆ ಇದೆ. ಯಾವುದೇ ಹೊಸ ಯೋಜನೆಗಳಿಗೆ ಪರಿಸರ ಅನುಮತಿ ಕಡ್ಡಾಯವಾದರೆ ಅಭಿವೃದ್ಧಿಯ ವೇಗ ಮತ್ತಷ್ಟು ಕುಂಠಿತವಾಗುವ ಸಾಧ್ಯತೆ ಇದೆ.
ಶೇ.90ಕ್ಕೂ ಹೆಚ್ಚು ಜನರಿಗೆ ಭೂ ದಾಖಲೆ ಇಲ್ಲ
ಕಬ್ಬಿನಾಲೆ ಪ್ರದೇಶದಲ್ಲಿ ಮಲೆಕುಡಿಯ ಸಮುದಾಯ ಸಹಿತ ಅರಣ್ಯದ ಅಂಚಿನ ಅನೇಕ ಕುಟುಂಬಗಳು ಇನ್ನೂ ಭೂಮಿ ಹಕ್ಕುಪತ್ರಕ್ಕಾಗಿ ಕಾಯುತ್ತಿವೆ. ಶೇ. 90ಕ್ಕೂ ಹೆಚ್ಚು ಜನರಿಗೆ ಸಂಪೂರ್ಣ ಭೂ ದಾಖಲೆ ಸಿಕ್ಕಿಲ್ಲ. ಹೀಗಾಗಿ ಪರಿಸರ ನಿಯಮಗಳ ಜತೆಗೆ ಭೂ ಹಕ್ಕಿನ ಅನಿಶ್ಚಿತತೆ ಕಾಡುತ್ತಿದೆ. ಒಂದು ವೇಳೆ ವರದಿ ಜಾರಿಯಾದರೆ ಭೂಮಿ ಹಕ್ಕು ಪತ್ರ ಕನಸಾಗಿ ಉಳಿಯುವುದೇ ಎಂದು ಜನರು ಪ್ರಶ್ನಿಸುತ್ತಾರೆ.
ಮತ್ತಾವು ಸೇತುವೆಯ ಕನಸು
ನಕ್ಸಲ್ ಬಾಂಬ್ ಪ್ರಕರಣದ ಪ್ರದೇಶವಾದ ಮತ್ತಾವು ಪರಿಸರ ಸಮಸ್ಯೆಗೆ ಇಂದಿಗೂ ಮುಕ್ತಿ ಸಿಕ್ಕಿಲ್ಲ. ನದಿಯ ಇನ್ನೊಂದು ಭಾಗದಲ್ಲಿ ಸುಮಾರು 15ಕ್ಕೂ ಮಿಕ್ಕಿ ಕುಟುಂಬಗಳು ಇಂದಿಗೂ ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹರಿಯುವ ನದಿಗೆ ಕಾಲು ಸಂಕವನ್ನು ಜನರೇ ನಿರ್ಮಿಸಿ ಸಂಚರಿಸುತ್ತಿದ್ದಾರೆ. ಹಲವಾರು ಬಾರಿ ಮಲೆಕುಡಿಯ ಸಮುದಾಯ ಹಾಗೂ ಗ್ರಾಮಸ್ಥರು ಹೋರಾಟ ಮಾಡಿ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾದರೂ ಅರಣ್ಯ ಇಲಾಖೆಯ ಅಡ್ಡಿಯಿಂದ ಕಾಮಗಾರಿ ಆರಂಭಗೊಂಡಿಲ್ಲ. ಇನ್ನು ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮತ್ತಾವು ಸೇತುವೆ ನಿರ್ಮಾಣ ಕನಸಾಗಿಯೇ ಉಳಿಯಬಹುದೇ ಎಂಬ ಪ್ರಶ್ನೆ ಈ ಭಾಗದ ಜನರದ್ದು.
ಪ್ರವಾಸಿಗರ ಸ್ವರ್ಗಕ್ಕೆ ಪ್ರವೇಶಕ್ಕೆ ಅಡ್ಡಿ
ಮಲೆನಾಡಿನ ಕಬ್ಬಿನಾಲೆ ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರ ಸ್ವರ್ಗ ಎಂದೇ ಹೆಸರಾಗಿದ್ದು, ಮಳೆಗಾಲದಲ್ಲಿ ಹುಟ್ಟಿ ಹರಿಯುವ ಹಲವಾರು ಜಲಪಾತಗಳು ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುತ್ತವೆ. ಆದರೆ ಪರಿಸರ ಸೂಕ್ಷ್ಮ ಪ್ರದೇಶದ ನಿಯಮಗಳು ಜಾರಿಯಾದರೆ ಜಲಪಾತಗಳ ವೀಕ್ಷಣೆಗೆ ಹೇಗೆ ಎಂಬುದು ಪ್ರಶ್ನೆ.
ಅಭಿವೃದ್ಧಿಗೆ ಹಿನ್ನಡೆ
ನಕ್ಸಲ್ ಚಟುವಟಿಕೆಯಿಂದ ಕಬ್ಬಿನಾಲೆ ಗ್ರಾಮ ಅಭಿವೃದ್ಧಿಯಲ್ಲಿ ಸಂಪೂರ್ಣ ಹಿನ್ನಡೆ ಯನ್ನು ಕಂಡಿದ್ದು, ಸಮರ್ಪಕವಾದ ರಸ್ತೆ, ದಾರಿದೀಪ, ಕುಡಿಯುವ ನೀರು, ಬಸ್ ಹಾಗೂ ಸೇತುವೆಗಳು ಇಲ್ಲ. ವರದಿ ಜಾರಿಯಾದರೆ ರಸ್ತೆ, ಪ್ರವಾಸೋದ್ಯಮ ಹಾಗೂ ಹೊಸ ಮೂಲಸೌಕರ್ಯ ಯೋಜನೆಗಳಿಗೆ ಕಟ್ಟುನಿಟ್ಟಿನ ಅನುಮತಿ ಪ್ರಕ್ರಿಯೆ ಎದುರಾಗಬಹುದು ಎಂಬ ತಳಮಳ ಸ್ಥಳೀಯರದ್ದು.
ಜನರ ಅಭಿಪ್ರಾಯ ಸಂಗ್ರಹಿಸಿ
ಗ್ರಾಮಸಭೆಯನ್ನು ನಡೆಸಿ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಜನ ಜೀವನಕ್ಕೆ ಧಕ್ಕೆ ಆಗದಂತೆ ವರದಿಯನ್ನು ಜಾರಿಗೊಳಿಸಿದರೆ ನಮ್ಮ ಅಭ್ಯಂತರವಿಲ್ಲ. ಈ ಭಾಗದ ಮೂಲ ಸೌಲಭ್ಯಗಳ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಬಳಿಕ ವರದಿ ಬಗ್ಗೆ ಸರಕಾರ ಯೋಚಿಸಬೇಕು. ಇಲ್ಲಿನ ಗ್ರಾಮಗಳ ಜನಜೀವನಕ್ಕೆ ಧಕ್ಕೆಯಾಗದಂತೆ ಕೇಂದ್ರ ಸರಕಾರ ವರದಿಯನ್ನು ಪರಿಷ್ಕರಣೆ ಮಾಡಬೇಕೆಂಬ ಅಭಿಪ್ರಾಯ ಗ್ರಾಮಸ್ಥರದು.
ಇನ್ನು ಕೃಷಿ ಹೇಗೋ?
ಕಾಡುಪ್ರಾಣಿಗಳ ಹಾವಳಿಯಿಂದ ಭತ್ತದ ಕೃಷಿ ಕೂಡ ಮಾಡುವಂತಿಲ್ಲ. ಅಡಿಕೆ ಕೃಷಿಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳು ಈಗ ವರದಿ ಜಾರಿಯಾದರೆ ಹೇಗೋ ಎನ್ನುತ್ತಿವೆ. ಪರಿಸರ ಸಂರಕ್ಷಣೆ ಆಗಬೇಕು. ಆದರೆ ತಲೆಮಾರುಗಳಿಂದ ಇಲ್ಲೇ ಬದುಕುತ್ತಿರುವ ಜನರ ಬದುಕು, ಭೂ ಹಕ್ಕು ಮತ್ತು ಅಭಿವೃದ್ಧಿಯ ಹಕ್ಕಿಗೂ ಸಮಾನ ಆದ್ಯತೆ ಸಿಗಬೇಕು. ಜೀವಮಾನವಿಡಿ ನಕ್ಸಲ್ ಭಯದಲ್ಲಿ ಬದುಕಿದ ಗ್ರಾಮಕ್ಕೆ ಈಗ ಕಸ್ತೂರಿರಂಗನ್ ವರದಿಯ ಆತಂಕ ಯಾಕೆ? ಈ ಬಗ್ಗೆ ಸರಕಾರ ಗಮನ ಹರಿಸಿ ಜನರ ಮೂಲ ಸೌಲಭ್ಯಗಳ ಬಗ್ಗೆ ಹಾಗೂ ಭೂಮಿ ಹಕ್ಕಿನ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.
ಒಕ್ಕೊರಲ ದನಿ
ಕೇಂದ್ರ ಸರಕಾರವು ಪರಿಸರ ಸೂಕ್ಷ್ಮ ವಲಯವನ್ನು ನಿಗದಿಪಡಿಸಿ ಏಳನೇ ಬಾರಿಗೆ ಕರಡು ಅಧಿಸೂಚನೆ ಪ್ರಕಟಿಸಿದೆ. ಈ ಹಿಂದೆ 2024ರಲ್ಲಿ ಪ್ರಕಟ ಆಗಿದ್ದ ಕರಡು ಅಧಿಸೂಚನೆಯಲ್ಲಿದ್ದ ಬಹುತೇಕ ಅಂಶಗಳೇ ಈ ಬಾರಿಯ ಕರಡಿನಲ್ಲೂ ಇವೆ. ಆದುದರಿಂದ ರಾಜ್ಯ ಸರಕಾರವು ಜನರ ಆತಂಕ ನಿವಾರಿಸುವ ಉದ್ದೇಶದಿಂದ ಭೌತಿಕ ಸರ್ವೇಯನ್ನು ನಡೆಸಿ ಜನವಸತಿ ಪ್ರದೇಶಗಳನ್ನು ವಿರಹಿತಗೊಳಿಸಿ ಕೃಷಿ, ತೋಟಗಾರಿಕೆ ಚಟುವಟಿಕೆಗಳು, ಜೀವನೋಪಾಯ, ಮೂಲ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು.
ಮಲೆಕುಡಿಯ ಸಮುದಾಯದ ಸುಮಾರು 90ಕ್ಕೂ ಮಿಕ್ಕಿ ಜನರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಮನೆಗೆ ಹೋಗಲು ಸರಿಯಾದ ದಾರಿ ಇಲ್ಲ. ಮತ್ತಾವು ಸೇತುವೆ ನಿರ್ಮಾಣದ ಕನಸು ಇನ್ನೂ ಈಡೇರಿಲ್ಲ. ಮಾನವನಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ಪ್ರಾಣಿಗಳನ್ನು ಉಳಿಸಬೇಕು ಎಂದು ಮಾನವ ಜೀವನಕ್ಕೆ ತೊಂದರೆ ಮಾಡಿದರೆ ಪರಿಸರ ಉಳಿಯಲು ಸಾಧ್ಯವೇ? - ಗಂಗಾಧರ ಗೌಡ ಜಿಲ್ಲಾಧ್ಯಕ್ಷರು, ಮಲೆಕುಡಿಯ ಸಂಘ
ಈ ಹಿಂದೆ ಹಲವಾರು ಬಾರಿ ವರದಿ ಜಾರಿಯಾಗುತ್ತದೆ, ಹುಲಿ ಯೋಜನೆ ಜಾರಿ ಆಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಜನರನ್ನು ಭಯಪಡಿಸುವ ಬದಲು ವರದಿ ಜಾರಿಯ ಪೂರ್ಣ ಮಾಹಿತಿ ಒದಗಿಸಿ. ಜತೆಗೆ ಹಕ್ಕು ಪತ್ರ ಇಲ್ಲದೆ ಬದುಕುತ್ತಿರುವ ಕಬ್ಬಿನಾಲೆಯ ಗ್ರಾಮಸ್ಥರಿಗೆ ಮೊದಲು ಹಕ್ಕುಪತ್ರ ನೀಡುವ ಯೋಜನೆಯನ್ನು ರೂಪಿಸಿ. - ಶ್ರೀಕರ್ ಭಾರದ್ವಾಜ್, ಕಬ್ಬಿನಾಲೆ
ಅಡಿಕೆ ಕೃಷಿಗೆ ಕೀಟನಾಶಕವನ್ನು ಸಿಂಪಡಿಸಿದರೆ ಮಾತ್ರ ಉತ್ತಮ ಬೆಳೆ ಪಡೆಯಲು ಸಾಧ್ಯ. ಒಂದು ವೇಳೆ ವರದಿ ಜಾರಿಯಾದರೆ ಕೀಟನಾಶಕಗಳ ಸಿಂಪಡಣೆಗೆ ನಿಷೇಧ ಇರುವುದರಿಂದ ಕೃಷಿಕರ ಬದುಕು ಬೀದಿಗೆ ಬರಲಿದೆ. - ಸುಬ್ರಹ್ಮಣ್ಯ ಕಂಗಿನಾಯ, ಕಬ್ಬಿನಾಲೆ
- ಹೆಬ್ರಿ ಉದಯಕುಮಾರ್ ಶೆಟ್ಟಿ

