ಹೆಬ್ರಿ: ತಾಲೂಕು ಕೇಂದ್ರವಾಗಿರುವ ಹೆಬ್ರಿಯಲ್ಲಿ ಸಂತೆ ಮಾರುಕಟ್ಟೆಗೆ ಶಾಶ್ವತ ಸ್ಥಳವಿಲ್ಲದೆ ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ. ಮೊದಲು ಹೆಬ್ರಿ ಪೇಟೆ ರಸ್ತೆ ಬದಿಯಲ್ಲಿದ್ದ ಸಂತೆ ಮಾರುಕಟ್ಟೆ ಪ್ರಸ್ತುತ ಹೆಬ್ರಿ ಸರ್ಕಾರಿ ಹಾಸ್ಟೆಲ್ ಎದುರು ತಾತ್ಕಾಲಿಕ ಟೆಂಟ್ ಅಳವಡಿಸಿ ನಡೆಯುತ್ತಿದ್ದು, ಮಳೆ ಬಂದರೆ ವ್ಯಾಪಾರವೂ ಅಸ್ತವ್ಯಸ್ತವಾಗುತ್ತದೆ.
ಹೆಬ್ರಿ ಸುತ್ತಮುತ್ತಲಿನ ಗ್ರಾಮಗಳ ರೈತರು, ಸಣ್ಣ ವ್ಯಾಪಾರಿಗಳು ಹಾಗೂ ನೂರಾರು ಗ್ರಾಹಕರು ಪ್ರತೀ ಬುಧವಾರ ನಡೆಯುವ ಸಂತೆಗೆ ಬರುತ್ತಾರೆ. ಆದರೆ ತಾತ್ಕಾಲಿಕ ಟೆಂಟ್, ಕೆಸರು ತುಂಬಿದ ನೆಲ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯ ಕೊರತೆಯಿಂದ ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ.
ಮಳೆ ಬಂದರೆ ವ್ಯಾಪಾರ ನಷ್ಟ
ಸಂತೆಯಲ್ಲಿ ವ್ಯಾಪಾರ ನಡೆಸಲು ಸಮರ್ಪಕವಾದ ಕಟ್ಟಡದ ಕೊರತೆ ಇದ್ದು ತಾತ್ಕಾಲಿಕ ಟೆಂಟ್ ಅಳವಡಿಸಿ ವ್ಯಾಪಾರ ಮಾಡಬೇಕಾಗುತ್ತದೆ. ಟೆಂಟ್ ಒಳಗೆ ನೀರು ಸೋರಿಕೆಯಾಗುವುದು, ನೆಲ ಕೆಸರಿನಿಂದ ತುಂಬುವುದು, ತರಕಾರಿ ಹಾಗೂ ಕೃಷಿ ಉತ್ಪನ್ನಗಳು ಹಾಳಾಗುವುದು ಸಾಮಾನ್ಯ ದೃಶ್ಯ. ಒಂದು ವೇಳೆ ಬೆಳಗಿನಿಂದಲೇ ಧಾರಾಕಾರ ಮಳೆ ಸುರಿಯುತ್ತಿದ್ದರೆ ಗ್ರಾಹಕರು ಸಂತೆ ಮಾರುಕಟ್ಟೆ ಹತ್ತಿರ ಬರದೆ ಅಥವಾ ಬಂದರೂ ಖರೀದಿ ಕಷ್ಟಕರವಾಗಿ ವ್ಯಾಪಾರ ನಷ್ಟವಾಗುತ್ತದೆ ಎನ್ನುವುದು ವ್ಯಾಪಾರಿಗಳ ಅಳಲು.
ಸರಿಯಾಗಿ ನಿರ್ವಹಣೆ ಮಾಡಿ
ವ್ಯಾಪಾರಿಗಳಿಂದ ಸುಂಕವನ್ನು ಪಡೆದು ಸಂತೆ ಮಾರುಕಟ್ಟೆಯನ್ನು ನಿರ್ವಹಣೆ ಮಾಡುವ ಹೆಬ್ರಿ ಗ್ರಾಮ ಪಂಚಾಯತ್ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಶಾಶ್ವತ ಸಂತೆ ಮಾರುಕಟ್ಟೆ ನಿರ್ಮಿಸಬೇಕು. ಮಾರುಕಟ್ಟೆ ಕಟ್ಟಡ, ಕುಡಿಯುವ ನೀರು, ಶೌಚಾಲಯ, ತ್ಯಾಜ್ಯ ನಿರ್ವಹಣೆ ಹಾಗೂ ಸಮರ್ಪಕ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು ಎಂದು ಹರೀಶ್ ಶೆಟ್ಟಿ ನಾಡ್ಪಾಲು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸಮಸ್ಯೆ
ಹಾಸ್ಟೆಲ್ ಎದುರೇ ಸಂತೆ ಮಾರುಕಟ್ಟೆ ಇರುವುದರಿಂದ ವಿದ್ಯಾರ್ಥಿಗಳ ಗಮನ ಬೇರೆ ಕಡೆ ಹರಿದು ಕಲಿಕೆಗೆ ಸಮಸ್ಯೆಯಾಗುತ್ತದೆ. ಕೆಲವೊಮ್ಮೆ ಕೊಳೆತ ಹಣ್ಣು ಹಾಗೂ ತರಕಾರಿಗಳನ್ನು ಅಲ್ಲೇ ಬಿಟ್ಟು ಹೋಗುವುದರಿಂದ ಕೊಳೆತ ವಾಸನೆ ಕಾಡುತ್ತದೆ. ಗ್ರಾ.ಪಂ.ನವರು ಬೆಳಿಗ್ಗೆ ತ್ಯಾಜ್ಯ ಸಂಗ್ರಹಣೆಗೆ ಬರುವ ಹೊತ್ತಿಗೆ ನಾಯಿ, ಹಸುಕರುಗಳು ಎಲ್ಲೆಡೆ ಚೆಲ್ಲಾಡಿರುತ್ತವೆ. ಇದರಿಂದ ಸೊಳ್ಳೆ ಉತ್ಪತ್ತಿಗೊಂಡು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
- ಹೆಬ್ರಿ ಉದಯ್ ಕುಮಾರ್ ಶೆಟ್ಟಿ

