Dailyhunt Logo
  • Light mode
    Follow system
    Dark mode
    • Play Story
    • App Story
ಹೆಣ್ಣುಮಕ್ಕಳ ರಕ್ಷಣೆಗೆ ಬೇಕಿದೆ ಕಠಿನ ಕಾನೂನು ಇಚ್ಛಾಶಕ್ತಿ

ಹೆಣ್ಣುಮಕ್ಕಳ ರಕ್ಷಣೆಗೆ ಬೇಕಿದೆ ಕಠಿನ ಕಾನೂನು ಇಚ್ಛಾಶಕ್ತಿ

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಮತ್ತೊಮ್ಮೆ "ನಿರ್ಭಯಾ' ಪ್ರಕರಣದ ಭೀಕರ ನೆನಪುಗಳು ಮರುಕಳಿಸಿವೆ. ಗ್ರೇಟರ್‌ ನೋಯ್ಡಾದಿಂದ ದಿಲ್ಲಿಗೆ ಬರುತ್ತಿದ್ದ ಸ್ಲೀಪರ್‌ ಬಸ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ಚಾಲಕ ಮತ್ತು ನಿರ್ವಾಹಕ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

ಮನೆಯಲ್ಲಿ ಸಣ್ಣಪುಟ್ಟ ಜಗಳಕ್ಕೆ ಮನನೊಂದು ಹೊರಟಿದ್ದ ಬಾಲಕಿಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು, ಸಂಚರಿಸುವ ಬಸ್‌ನಲ್ಲೇ 47 ಕಿಲೋ ಮೀಟರ್‌ಗಳಷ್ಟು ದೂರ ಪ್ರಯಾಣಿಸುತ್ತಿರುವಾಗಲೇ ಈ ಕೃತ್ಯ ಎಸಗಿರುವುದು ರಾಕ್ಷಸೀ ಪ್ರವೃತ್ತಿಯ ಪರಮಾವಧಿಯಾಗಿದೆ.

ಕಠಿನ ಕಾನೂನುಗಳು, ಪೋಕ್ಸೊ ಕಾಯ್ದೆಗಳು, ಸಮಾಜದಲ್ಲಿ ಜಾಗೃತಿ ಅಭಿ ಯಾ ನಗಳು ಮತ್ತು ಸ್ತ್ರೀ ಸಶಕ್ತೀಕರಣದ ಮಾತುಗಳು ಎಷ್ಟೇ ಮೊಳಗಿದರೂ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ನಿರಂತರವಾಗಿ ಮುಂದುವರಿದಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ.

ಹೈದರಾಬಾದ್‌, ಕೋಲ್ಕತಾ ಸಹಿತ ದೇಶದ ನಾನಾ ಭಾಗಗಳಲ್ಲಿ ಮತ್ತೆ ಮತ್ತೆ ಇಂತಹ ಪಾಶವೀ ಘಟನೆಗಳು ನಡೆದಿವೆ. ದಿಲ್ಲಿಯಲ್ಲಿ ನಡೆದಿರುವುದು ಅಂಥದೇ ಇನ್ನೊಂದು ನಿರ್ಲಜ್ಜ, ಹೇಯ ಘಟನೆ. ಸಮಾಜದಲ್ಲಿ ಅಂತಃಪ್ರಜ್ಞೆ ಇಲ್ಲವಾಗಿದೆಯೇ ಎಂಬ ಪ್ರಶ್ನೆಯನ್ನು ಇಂತಹ ಘಟನೆ ಹುಟ್ಟು ಹಾಕುತ್ತದೆ. ಸಾರ್ವಜನಿಕ ಸಾರಿಗೆ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷೆ ಎಂಬುದು ಇಂದಿಗೂ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಅತ್ಯಾಚಾರ ಎನ್ನುವುದು ಇದರ ಪರಾಕಾಷ್ಠೆಯಾದರೆ ಬಾಲಕಿಯರ ಸಹಿತ ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಕೆಲಸದ ಸ್ಥಳಗಳಲ್ಲಿ ಕಿರುಕುಳ ಇತ್ಯಾದಿ ಹತ್ತು ಹಲವು ರೂಪಗಳಲ್ಲಿ ಇದು ದಿನಂಪ್ರತಿ, ಸರ್ವತ್ರ ಕಂಡುಬರುತ್ತಲೇ ಇದೆ. ಕೆಲವು ಕಡೆ ಸಂತ್ರಸ್ತೆಯರು ದೂರು ನೀಡಲು ಪೊಲೀಸ್‌ ಠಾಣೆಗೆ ತೆರಳಿದಾಗ ಅವರಿಗೆ ಸರಿಯಾದ ಸ್ಪಂದನೆ ದೊರೆಯದಿರುವ ಆರೋಪವೂ ಇದೆ.

ಈ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಗೆ ನ್ಯಾಯ ಒದಗಿಸಲು ಪೊಲೀಸರು ತ್ವರಿತವಾಗಿ ಸ್ಪಂದಿಸಿ ಆರೋಪಿಗಳಾದ ಕುಲ್ದೀಪ್‌ ಮತ್ತು ಸಂದೀಪ್‌ ಅವರನ್ನು ಪೊಕೊà ಕಾಯ್ದೆಯಡಿ ಬಂಧಿಸಿರುವುದು ಸಮಾಧಾನಕರ ಸಂಗತಿ. ಆದರೆ ಕೇವಲ ಬಂಧನದಿಂದ ಇಂತಹ ಹೇಯ ಕೃತ್ಯಗಳಿಗೆ ಅಂತ್ಯ ಹಾಡಲು ಸಾಧ್ಯವಿಲ್ಲ. ಇಂತಹ ವಿಕೃತಿ ಮೆರೆಯುವ ಕಾಮುಕರಿಗೆ ತ್ವರಿತ ನ್ಯಾಯಾಲಯಗಳ ಮೂಲಕ ಅತ್ಯಂತ ಕಠಿನ ಶಿಕ್ಷೆಯಾಗಬೇಕು. ಆಗ ಮಾತ್ರ ಸಮಾಜದಲ್ಲಿ ಇಂತಹ ಅಪರಾಧಗಳನ್ನು ಎಸಗಲು ಯೋಚಿಸುವವರಿಗೂ ಒಂದು ಸ್ಪಷ್ಟ ಹಾಗೂ ಕಠಿನ ಸಂದೇಶ ರವಾನೆಯಾಗಲು ಸಾಧ್ಯವಾಗುತ್ತದೆ.

ಕೇವಲ ಸರಕಾರದ ಅಥವಾ ಆಡಳಿತದ ಜವಾಬ್ದಾರಿಯಷ್ಟೇ ಅಲ್ಲದೆ, ಇಂತಹ ಕೃತ್ಯಗಳನ್ನು ತಡೆಯಲು ಸಮಾಜದ ಪ್ರತಿಯೊಬ್ಬರೂ ಒಟ್ಟಾಗಿ ಎಚ್ಚೆತ್ತುಕೊಳ್ಳಬೇಕು. ಎಲ್ಲ ಸಾರ್ವಜನಿಕ ಸ್ಥಳ, ಸಾರಿಗೆ ಬಸ್‌ಗಳಲ್ಲಿ ಜಿಪಿಎಸ್‌ ವ್ಯವಸ್ಥೆ, ಪ್ಯಾನಿಕ್‌ ಬಟನ್‌, ಕೆಮರಾ ಕಣ್ಗಾವಲು ಕಡ್ಡಾಯಗೊಳಿಸುವುದು, ಒಳಭಾಗದಲ್ಲಿ ಸಿಸಿಟಿವಿ ಕೆಮರಾಗಳ ಬಳಕೆ ಮತ್ತು ಕಿಟಕಿಗಳಿಗೆ ಪರದೆ ಹಾಕುವುದರ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬಹಳ ಮುಖ್ಯವಾಗಿ ಮಕ್ಕಳಿಗೆ ಸಂಸ್ಕಾರದ ಪಾಠ ಎಳವೆಯಿಂದಲೇ ಒದಗಬೇಕು. ಹೆಣ್ಣನ್ನು ಭೋಗವಸ್ತುವಾಗಿ ಕಾಣುವ ಸಂಸ್ಕೃತಿ ಎಲ್ಲ ರೂಪಗಳಲ್ಲಿ ತೊಲಗಬೇಕು.

ಹೆಣ್ಣು ಮಕ್ಕಳಿಗೆ ಸುರಕ್ಷಿತ ಮತ್ತು ಭಯಮುಕ್ತ ವಾತಾವರಣ ಕಲ್ಪಿಸದ ವಿನಾಃ ದೇಶದ ಯಾವುದೇ ಅಭಿವೃದ್ಧಿಯೂ ಅರ್ಥಹೀನವಾಗುತ್ತದೆ. ಇನ್ನು ಮುಂದೆ ಇಂತಹ ಯಾವುದೇ ಅಘಾತಕಾರಿ ಘಟನೆಗಳು ಎಲ್ಲೂ ಮರುಕಳಿಸದಂತೆ ಸರಕಾರ, ಕಾನೂನು ಜಾರಿ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಒಟ್ಟಾಗಿ ಸಮಗ್ರ, ಕಟ್ಟುನಿಟ್ಟಾದ ಮತ್ತು ದೃಢವಾದ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani