ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವತೆಗಳ ಅವಮಾನ ಮಾಡಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಕ್ರಮ ಕೈಗೊಳ್ಳಲು ದೆಹಲಿ ಹೈಕೋರ್ಟ್ ಕರೆ ಬುಧವಾರ ಸೂಚನೆ ನೀಡಿದೆ.
ವಕೀಲೆ ಅಮಿತಾ ಸಚ್‌ದೇವಾ ಅವರು ಟ್ವೀಟ್‌ಗಳು ಅವಹೇಳನಕಾರಿ, ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮವಾಗಿವೆ ಎಂದು ಆರೋಪಿಸಿ ಅವುಗಳನ್ನು ಅಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ಅರ್ಜಿಯ ಕುರಿತು ನೋಟಿಸ್ ಜಾರಿ ಮಾಡಿದ ನ್ಯಾಯಾಲಯವು ಕೇಂದ್ರಾಡಳಿತ ಪ್ರದೇಶ ದೆಹಲಿ ಸರಕಾರಕ್ಕೆ, ಎಕ್ಸ್ ಕಾರ್ಪ್, ದೆಹಲಿ ಪೊಲೀಸರು ಮತ್ತು ಅಯ್ಯೂಬ್ ಅವರಿಗೆ ನಾಳೆಯೊಳಗೆ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.
ಅಮಿತಾ ಸಚ್‌ದೇವಾ ಅವರು ಈ ಹಿಂದೆ ಅಯ್ಯೂಬ್ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಸಾಕೇತ್ ನ್ಯಾಯಾಲಯದ ಮೊರೆ ಹೋಗಿದ್ದರು. ತಮ್ಮ ದೂರಿನಲ್ಲಿ, 2013 ಮತ್ತು 2017 ರ ನಡುವೆ ಅಯ್ಯೂಬ್ ಅವರು ಹಿಂದೂ ದೇವತೆಗಳಾದ ಭಗವಾನ್ ರಾಮ ಮತ್ತು ಮಾತಾ ಸೀತಾ ಮತ್ತು ವಿ.ಡಿ.ಸಾವರ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಆರು ಪೋಸ್ಟ್‌ಗಳನ್ನು ಉಲ್ಲೇಖಿಸಿದ್ದರು.
ಕೋರ್ಟ್ ರಾಣಾ ಅಯ್ಯೂಬ್ ಮಾಡಿರುವ ಪೋಸ್ಟ್ ಗಳು ಅತ್ಯಂತ ಅವಹೇಳನಕಾರಿ, ಪ್ರಚೋದನಕಾರಿ ಮತ್ತು ಕೋಮುವಾದಿ ಮನಸ್ಥಿತಿಯದ್ದು ಎಂದು ಕೋರ್ಟ್ ಹೇಳಿದೆ.

