ಹೊನ್ನಾವರ: ತಾಲೂಕು ತಹಸೀಲ್ದಾರ್ ಕಚೇರಿಯ ಮೇಲೆ ಮಂಗಳೂರಿನಿಂದ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳ ವಿಶೇಷ ತಂಡ ಆ.18ರ ಮಂಗಳವಾರ ದಿಢೀರ್ ದಾಳಿ ನಡೆಸಿದೆ.
ನಾಲ್ವರು ಅಧಿಕಾರಿಗಳನ್ನೊಳಗೊಂಡ ಈ ತಂಡ ಕಚೇರಿಯ ಮಹತ್ವದ ಕಡತಗಳು ಹಾಗೂ ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ.
ತಪಾಸಣೆಯ ವೇಳೆ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಇತರ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹೊರಗುತ್ತಿಗೆ ನೌಕರರ ಮೊಬೈಲ್ ಫೋನ್‌ಗಳನ್ನು ಲೋಕಾಯುಕ್ತ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಭಟ್ಕಳದಲ್ಲಿ ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿರುವ ಹೊನ್ನಾವರ ತಹಸೀಲ್ದಾರ್ ಅವರ ಮೊಬೈಲ್ ಮೂಲಕವೂ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಅಧಿಕಾರಿಗಳ ತಂಡ ಕಾರ್ಯಾಚರಣೆಗೆ ಆಗಮಿಸಿತ್ತು. ಮುಖ್ಯವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಳಸುತ್ತಿದ್ದ ಫೋನ್‌ಪೇ ಮತ್ತು ಗೂಗಲ್‌ಪೇ ಮುಂತಾದ ಆನ್‌ಲೈನ್ ಹಣ ವರ್ಗಾವಣೆ ವಿವರಗಳ ಪರಿಶೀಲನೆ ನಡೆಸಿದ್ದಲ್ಲದೆ, ಕಚೇರಿಯ ಕಡತ ವಿಲೇವಾರಿ, ಸಂಗ್ರಹಿಸಿದ ಶುಲ್ಕದ ವಿವರ ಹಾಗೂ ಬಾಕಿ ಇರುವ ಕಡತಗಳ ಮಾಹಿತಿಯನ್ನೂ ಕಲೆಹಾಕಿದ್ದಾರೆ.
ಕಚೇರಿಗೆ ಆಗಮಿಸಿದ ಸಾರ್ವಜನಿಕರಿಗೆ ಒಳಗಡೆ ಪ್ರವೇಶ ಕಲ್ಪಿಸಲಾಗಿದ್ದರಿಂದ ಜನಸಾಮಾನ್ಯರ ದೈನಂದಿನ ಕಚೇರಿ ಕೆಲಸಗಳಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗಲಿಲ್ಲ. ರಾತ್ರಿಯವರೆಗೂ ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ತನಿಖೆ ಸಂಪೂರ್ಣಗೊಂಡ ಬಳಿಕವೇ ದಾಳಿಯ ನಿಖರ ಮಾಹಿತಿ ಹೊರಬರಲಿದೆ.

