Dailyhunt Logo
  • Light mode
    Follow system
    Dark mode
    • Play Story
    • App Story
ಹೊರ ರಾಜ್ಯದವರಿಗೆ ಕನ್ನಡ ಕಲಿಯಲು ಅವಕಾಶ ಕೊಡಿ

ಹೊರ ರಾಜ್ಯದವರಿಗೆ ಕನ್ನಡ ಕಲಿಯಲು ಅವಕಾಶ ಕೊಡಿ

ಪಡುಬಿದ್ರಿ: ನಮ್ಮಲ್ಲಿ ಹೊರರಾಜ್ಯದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಕನ್ನಡ ಕಲಿಯುವ ವಾತಾವರಣವನ್ನೇ ನಾವು ಸೃಷ್ಟಿಸುತ್ತಿಲ್ಲ. ನಾವೇ ಮೊದಲು ಅವರ ಭಾಷೆಯಲ್ಲಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ಆಗ ಮಾತ್ರ ಉಳಿದವರು ಕನ್ನಡ ಮಾತನಾಡುವ ವಾತಾವರಣ ಸೃಷ್ಟಿಯಾಗುತ್ತದೆ: ಇದು ಹಿರಿಯ ಜಾನಪದ ವಿದ್ವಾಂಸ, ವೈದ್ಯರಾದ ಡಾ| ವೈ.ಎನ್.

ಶೆಟ್ಟಿ ಅವರ ಸ್ಪಷ್ಟ ಅಭಿಪ್ರಾಯ.

ಅಕ್ಟೋಬರ್ 2, 3ರಂದು ನಡೆಯಲಿರುವ ಕಾಪು ತಾಲೂಕು 8ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜಿತರಾಗಿರುವ ಡಾ| ಶೆಟ್ಟಿ ಅವರು "ಉದಯವಾಣಿ" ಜೊತೆ ಮುಕ್ತವಾಗಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಸಮ್ಮೇಳನ ಮತ್ತು ವೈದ್ಯಕೀಯದಲ್ಲಿ ಸಾಹಿತ್ಯದ ಕುರಿತಂತೆ ಅನಿಸಿಕೆ ಹಂಚಿಕೊಂಡರು.

ಪ್ರಶ್ನೆ: ನೀವು ತುಳು ಜಾನಪದ ವಿದ್ವಾಂಸರು. ತುಳುನಾಡಿನಲ್ಲಿ ಕನ್ನಡದ ಸ್ಥಾನಮಾನದ ಬಗ್ಗೆ ಏನು ಹೇಳುತ್ತೀರಿ?
ಉತ್ತರ: ಹೆಚ್ಚಿನವರ ಮನೆಭಾಷೆ, ಮಾತೃಭಾಷೆ ತುಳು. ಆದರೂ ಆಡಳಿತ ಭಾಷೆಯಾಗಿ ಕನ್ನಡಕ್ಕೆ ಅದರದ್ದೇ ಆದ ಮಹತ್ವವಿದೆ. ಶ್ರೀಮಂತ ಜನಪದ ಪರಂಪರೆಯ ತುಳು ಭಾಷೆ ಮತ್ತು ಭವ್ಯ ಪರಂಪರೆ ಹೊಂದಿರುವ ಕನ್ನಡ ಭಾಷೆ ಎರಡನ್ನೂ ನಾವು ಅತ್ಯಂತ ಗೌರವದಿಂದ ನೋಡುತ್ತೇವೆ. ಭಾಷಾ ಶುದ್ಧತೆಯನ್ನು ಕಾಯ್ದುಕೊಂಡಿರುವುದೇ ಇದಕ್ಕೆ ಸ್ಪಷ್ಟ ನಿದರ್ಶನ.

ಪ್ರಶ್ನೆ: ಕನ್ನಡ ಭಾಷೆ ಶಾಲಾ ಹಂತದಲ್ಲಿ ಕಣ್ಮರೆಯಾಗುವ ಆತಂಕ ಮೂಡಿದೆ. ಕನ್ನಡ ಶಾಲೆ, ಮಾಧ್ಯಮ ಜನರಿಂದ ದೂರವಾಗುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ?
ಉತ್ತರ: ಕರಾವಳಿಯ ಕನ್ನಡ ಶಾಲೆಗಳಲ್ಲಿ ಒಂದು ಕಾಲದಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕುತ್ತಿದ್ದರು. ಈಗ ಹೆಚ್ಚಿನವರು ಆಂಗ್ಲ ಮಾಧ್ಯಮದ ಕಡೆಗೆ ಆಸಕ್ತರು. ಪಟ್ಟಣಗಳಲ್ಲಿ ಕನ್ನಡ ಶಾಲೆಗಳೆಂದರೆ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರ ಮಕ್ಕಳಿಗೆ ಸೀಮಿತ ಎಂಬಂತಾಗಿದೆ. ಎಲ್ಲರೂ ಆಂಗ್ಲ ಪ್ರಭಾವದಲ್ಲಿದ್ದಾರೆ. ಆದರೆ ಆ ಕಾರಣಕ್ಕಾಗಿ ಮಕ್ಕಳನ್ನು ಕನ್ನಡದ ಸೊಗಡಿನಿಂದ ದೂರವಿಡಬೇಕಾಗಿಲ್ಲ.

ಪ್ರಶ್ನೆ: ಈಗ ಸಾಹಿತ್ಯಕ ಓದಿನ ಅಭಿರುಚಿ, ಮನನ ಹೇಗಿದೆ? ಜನರ ಕಥೆ, ಕಾದಂಬರಿ, ವಿಮರ್ಶೆ, ಕಾವ್ಯ ಓದುತ್ತಿದ್ದಾರೆ ಎಂದು ಅನಿಸುತ್ತಿದೆಯೇ?
ಉತ್ತರ: ಸಾಹಿತ್ಯದ ಬಗೆಗೆ ಹಿಂದೆ ಇದ್ದ ಒಲವು ಈಗ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅನಾಸಕ್ತಿ ಜಾಸ್ತಿ ಆಗಿದೆ. ಕಿರಿಯರು ಮಾತ್ರವಲ್ಲದೇ ಹಿರಿಯರಲ್ಲೂ ಓದುವ ಹವ್ಯಾಸ ಕಡಿಮೆಯಾಗಿದೆ. ಇದು ಕೇವಲ ಕನ್ನಡವಷ್ಟೇ ಅಲ್ಲ. ಎಲ್ಲ ಭಾಷೆಗಳಿಗೂ ಕುತ್ತಾಗಿದೆ.

ಪ್ರಶ್ನೆ: ಕನ್ನಡ ಸಾಹಿತ್ಯ ಸಮ್ಮೇಳನಗಳು ಸಾಹಿತ್ಯಾಸಕ್ತಿ ಮೂಡಿಸಲು ಸಮರ್ಥವೇ?
ಉತ್ತರ: ಸಾಹಿತ್ಯ ಸಮ್ಮೇಳನಗಳು ಕನ್ನಡದ ಬಗ್ಗೆ ಜಾಗೃತಿಯನ್ನು ಬೆಳೆಸುತ್ತವೆ. ಕನ್ನಡದ ವಿಚಾರದಲ್ಲಿ ಸಮ್ಮೇಳನಗಳ ಪಾತ್ರ ಖಂಡಿತಾ ಇದೆ.

ಪ್ರಶ್ನೆ: ವೈದ್ಯಕೀಯ ರಂಗದಲ್ಲಿದ್ದು ಸಾಹಿತ್ಯಾಸಕ್ತಿ ಹೇಗೆ?
ಉತ್ತರ: ನನ್ನ ಮೊದಲ ಕಥೆ ಮೂಲ್ಕಿ ವಿಜಯಾ ಕಾಲೇಜಿನ ಭಿತ್ತಿಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಲ್ಲಿಂದಲೇ ಸಾಹಿತ್ಯದ ನಡಿಗೆ ಆರಂಭ. ಆಯುರ್ವೇದ ವೈದ್ಯಶಾಸ್ತ್ರ ಪದ್ಧತಿಯಲ್ಲಿ ಉಪಮೆಗಳನ್ನು ಕೊಟ್ಟು ರೋಗ ವಿಚಾರಗಳನ್ನು ತಿಳಿಸುವ ಸಾಹಿತ್ಯಿಕ ನುಡಿಗಟ್ಟುಗಳು ಬಹಳಷ್ಟು ಇವೆ. ಸಮಾಜದ ಆಳ-ವಿಸ್ತಾರ ಅರಿಯಲು ನನಗೆ ಸಾಹಿತ್ಯ ತುಂಬಾ ಸಹಾಯ ಮಾಡಿದೆ. ಹೀಗಾಗಿ ತುಳು ಜಾನಪದ ಅಧ್ಯಯನ ಮಾಡಲೂ ಸಾಧ್ಯವಾಯಿತು.

ಸಾಹಿತ್ಯದ ಒಲವಿನ ಡಾಕ್ಟರ್
ಡಾ| ವೈ.ಎನ್. ಶೆಟ್ಟಿ ಅವರು ಆಯುರ್ವೇದ ವೈದ್ಯರು. ಉಡುಪಿಯ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾಗಿ, ಎನ್‌ಐಟಿಕೆ ಆರೋಗ್ಯ ಕೇಂದ್ರದಲ್ಲಿ ಸಂದರ್ಶಕ ವೈದ್ಯರಾಗಿ ಸೇವೆ ಸಲ್ಲಿಸಿದವರು. ಕಥೆ, ಸಂಶೋಧನಾ ಲೇಖನ, ತುಳು ಜಾನಪದ ಅಧ್ಯಯನದಲ್ಲಿ ದೊಡ್ಡ ಹೆಸರು. ಪ್ರಸ್ತುತ ಪಡುಬಿದ್ರಿಯಲ್ಲಿ ಚಿಕಿತ್ಸಾಲಯ ನಡೆಸುತ್ತಿದ್ದಾರೆ. ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ. ತುಳು ಜಾನಪದ ಲೋಕದ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.

ಪ್ರಶ್ನೆ: ಕನ್ನಡ ಉಳಿಸಿ ಬೆಳೆಸಲು ನಾವು ಮಾಡಬೇಕಾದ್ದೇನು?
ಉತ್ತರ: ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನಗಳಾಗಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಬೇಕು. ಅನ್ಯ ರಾಜ್ಯದವರ ಜೊತೆಗೆ ಕನ್ನಡದಲ್ಲಿ ವ್ಯವಹರಿಸಬೇಕು, ಅವರಿಗೂ ಕನ್ನಡ ಕಲಿಸಬೇಕು.

Dailyhunt
Disclaimer: This content has not been generated, created or edited by Dailyhunt. Publisher: Udayavani