ಬಂಗಾರಪೇಟೆ(ಕೋಲಾರ): ಹೊಸ ಯೋಜನೆಗಳನ್ನು ಘೋಷಿಸುವುದೇ ಆಡಳಿತದ ಸಾಧನೆಯಲ್ಲ. ಘೋಷಿಸಿದ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂಬುದಕ್ಕೂ ಸರ್ಕಾರದಿಂದ ಉತ್ತರ ಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನುಡಿದರು.
ಪಟ್ಟಣದಲ್ಲಿ ಎಪಿಎಂಸಿ ಆವರಣದ ದನಕರುಗಳ ಸಂತೆಯಲ್ಲಿ ಶುಕ್ರವಾರ ಆಯೋಜಿಸಿದ್ದ 'ರೈತ ಸ್ವಾಭಿಮಾನ ಯಾತ್ರೆ' ಮತ್ತು ರೈತರೊಂದಿಗಿನ ಸಂವಾದದಲ್ಲಿ ಮಾತನಾಡಿ, ರೈತರು ಬರದಿಂದ ಕಂಗಾಲಾಗಿದ್ದರೂ ಪರಿಹಾರ ನೀಡಿಲ್ಲ.
ಇತ್ತ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂಬ ಆರೋಪದ ನಡುವೆ ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆಯೇ ಪ್ರಶ್ನಾರ್ಹವಾಗಿದೆ ಎಂದರು.
ಎಸ್‌ಐಆರ್ ಫಾರಂ-7 ಬಳಸಿ ಅಹಿಂದ ಮತದಾರರ ಕೈಬಿಡಲು ಸಂಚು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಧರಣಿ ನಡೆಸಿದ ಕುರಿತು ಪ್ರತಿಕ್ರಿಯಿಸಿ, ಎಸ್‌ಐಆರ್‌ಗೆ ಸಂಬಂಧಿಸಿ 3 ರಾಜಕೀಯ ಪಕ್ಷಗಳಿಗೂ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿತ್ತು. ಕಾಲಾವಕಾಶವಿದ್ದಾಗಲೇ ಲೋಪಗಳನ್ನು ಪರಿಶೀಲಿಸಿ ಆಕ್ಷೇಪ ಸಲ್ಲಿಸಬೇಕಿತ್ತು. ಪ್ರಕ್ರಿಯೆ ಮುಗಿದ ಬಳಿಕ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದರು.
ರೈತರ ಬದುಕು ಬೀದಿಗೆ ಬಿದ್ದಿದ್ದರೂ ಆಡಳಿತಕ್ಕೆ ಕಾಳಜಿಯಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದ ಎಪಿಎಂಸಿ ಆವರಣದ ದನಕರುಗಳ ಸಂತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ''ರೈತ ಸ್ವಾಭಿಮಾನ ಯಾತ್ರೆ'' ಮತ್ತು ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬರ ನಿರ್ವಹಣೆ, ಆರ್ಥಿಕ ಪರಿಸ್ಥಿತಿ, ನೀರಾವರಿ ಯೋಜನೆಗಳು ಹಾಗೂ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಖಜಾನೆಯಲ್ಲಿ ಹಣವಿಲ್ಲ, ಶಾಸಕರಿಗೆ ಅನುದಾನವಿಲ್ಲ!
ರಾಜ್ಯ ಸರ್ಕಾರ 21 ಸಾವಿರ ಕೋಟಿಗೂ ಅಧಿಕ ಕೊರತೆ ಎದುರಿಸುತ್ತಿದೆ ಎಂದು ಆರೋಪಿಸಿದ ನಿಖಿಲ್,ರಸ್ತೆ, ಚರಂಡಿ, ಕೆರೆ-ಕಟ್ಟೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗದೆ ಆಡಳಿತ ಪಕ್ಷದ ಶಾಸಕರೇ ತಮ್ಮ ಕ್ಷೇತ್ರಗಳಲ್ಲಿ ಜನರಿಗೆ ಉತ್ತರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಸರ್ಕಾರದ ಆರ್ಥಿಕ ನಿರ್ವಹಣೆಯ ಪರಿಣಾಮ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳ ಮೇಲೆ ಬೀಳುತ್ತಿದೆ. ರೈತರು, ಬಡವರು ಹಾಗೂ ಗ್ರಾಮೀಣ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾದ ಆಡಳಿತವೇ ಅನುದಾನದ ಕೊರತೆಯಿಂದ ಹಿಂದೆ ಸರಿಯುತ್ತಿದೆ ಎಂಬುದು ಅವರ ಆರೋಪವಾಗಿತ್ತು.
2,500 ಪರಿಹಾರದಿಂದ ರೈತರ ಬದುಕು ಉಳಿಯುತ್ತದೆಯೇ?
ಬರದಿಂದ ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ಘೋಷಿಸಿರುವ ಎಕರೆಗೆ 2,500 ಪರಿಹಾರ ಮೊತ್ತ ಸಾಕಾಗುವುದಿಲ್ಲ. ಬಿತ್ತನೆ, ಬೀಜ, ಗೊಬ್ಬರ, ಉಳುಮೆ ಹಾಗೂ ಕೂಲಿ ಸೇರಿ ರೈತರು ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಇಷ್ಟೆಲ್ಲ ವೆಚ್ಚ ಮಾಡಿದ ರೈತನಿಗೆ ಬೆಳೆ ಕೈಕೊಟ್ಟಾಗ ಅಲ್ಪ ಪರಿಹಾರ ನೀಡಿದರೆ ನಷ್ಟ ತುಂಬಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಎಕರೆಗೆ ಕನಿಷ್ಠ 25 ಸಾವಿರ ಪರಿಹಾರ ನೀಡಬೇಕು. ಬರಪೀಡಿತ ಪ್ರದೇಶಗಳಲ್ಲಿ ರೈತರಿಗೆ ತುರ್ತು ನೆರವು ಕಲ್ಪಿಸುವುದರ ಜತೆಗೆ ಬೆಳೆಹಾನಿ, ಸಾಲದ ಹೊರೆ ಮತ್ತು ಜಾನುವಾರುಗಳ ನಿರ್ವಹಣೆಗೆ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಂಗಾರಪೇಟೆ ಎಪಿಎಂಸಿ ದನಕರುಗಳ ಸಂತೆಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿದ ನಿಖಿಲ್, ಮೇವು ಮತ್ತು ನೀರಿನ ಕೊರತೆಯಿಂದ ಜಾನುವಾರುಗಳನ್ನು ಸಾಕುವುದೇ ಹೊರೆಯಾಗಿರುವ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಹೈನುಗಾರಿಕೆ ಹಾಗೂ ಕೃಷಿಯನ್ನೇ ನಂಬಿಕೊಂಡಿರುವ ಕುಟುಂಬಗಳು ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿಗೆ ಸಿಲುಕಿರುವುದು ಗ್ರಾಮೀಣ ಆರ್ಥಿಕತೆಯ ಸಂಕಷ್ಟವನ್ನು ತೋರಿಸುತ್ತದೆ ಎಂದರು.
ರೈತರಿಗೆ ಉಚಿತ ಕೊಡುಗೆಗಳನ್ನು ನೀಡುವುದಕ್ಕಿಂತ ಕೃಷಿಯಿಂದ ಗೌರವಯುತವಾಗಿ ಬದುಕಲು ಅಗತ್ಯವಾದ ನೀರು, ವಿದ್ಯುತ್, ಬೆಂಬಲ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ರೈತ ಸ್ವಾವಲಂಬಿಯಾಗಿ ಬದುಕುವ ವಾತಾವರಣ ನಿರ್ಮಿಸುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.
ಕೃಷ್ಣಾ ನದಿ ಮೂಲದಿಂದ ಕೋಲಾರ ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಾಧ್ಯತೆಗಳ ಬಗ್ಗೆಯೂ ಕೇಂದ್ರ ಸರ್ಕಾರ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ರಾಜಕೀಯ ಭರವಸೆಗಳಿಗಿಂತ ಕಾರ್ಯಗತ ಯೋಜನೆಗಳು ಮುಖ್ಯ ಎಂದು ಪ್ರತಿಪಾದಿಸಿದರು.
ರೈತರ ಪಂಪ್‌ಸೆಟ್‌ಗಳಿಗೆ ಕನಿಷ್ಠ ಎಂಟು ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಸಬೇಕು. ಅಘೋಷಿತ ವಿದ್ಯುತ್ ಕಡಿತದಿಂದ ಬೆಳೆಗಳಿಗೆ ನೀರುಣಿಸಲು ತೊಂದರೆಯಾಗುತ್ತಿದೆ. ಮಳೆ ಕೈಕೊಟ್ಟಿರುವ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯೂ ಸಮರ್ಪಕವಾಗದಿದ್ದರೆ ರೈತರು ಬೆಳೆಯನ್ನು ಉಳಿಸಿಕೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕೋಲಾರ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾಡಾನೆ ಮತ್ತು ಚಿರತೆಗಳ ಹಾವಳಿಯಿಂದ ರೈತರು ಹಾಗೂ ಸಾರ್ವಜನಿಕರು ಆತಂಕದಲ್ಲಿ ಬದುಕುತ್ತಿದ್ದಾರೆ. ಕಾಡಿನಲ್ಲಿ ನೀರು ಮತ್ತು ಆಹಾರದ ಕೊರತೆಯಿಂದ ಕಾಡುಪ್ರಾಣಿಗಳು ನಾಡಿನತ್ತ ಬರುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಸೇರಿದಂತೆ ವೈಜ್ಞಾನಿಕ ಕ್ರಮಗಳನ್ನು ಕೈಗೊಂಡು ಮಾನವ-ಪ್ರಾಣಿ ಸಂಘರ್ಷ ತಡೆಯಬೇಕು ಎಂದು ಒತ್ತಾಯಿಸಿದರು.
"ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ ರೈತರ ಸಮಸ್ಯೆಗಳ ವಿಚಾರದಲ್ಲಿ ಎದೆಗುಂದುವುದಿಲ್ಲ. ಅಧಿಕಾರದಲ್ಲಿದ್ದಾಗ ಮಾತ್ರ ರೈತರ ಪರ ನಿಲ್ಲುವುದಲ್ಲ; ವಿರೋಧ ಪಕ್ಷದಲ್ಲಿದ್ದರೂ ಅವರ ಪರವಾಗಿ ಬೀದಿಗಿಳಿದು ಹೋರಾಡುತ್ತೇನೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿಯಲ್ಲೇ ರೈತರ ಧ್ವನಿಯಾಗುವ ಉದ್ದೇಶದಿಂದ ಈ ಯಾತ್ರೆ ಕೈಗೊಂಡಿದ್ದೇನೆ" ಎಂದು ನಿಖಿಲ್ ಹೇಳಿದರು.

