ಲಂಡನ್: ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದ ಊಟದ ವಿರಾಮದ ವೇಳೆ ಇಮ್ರಾನ್ ಖಾನ್ ಅವರ ಪುತ್ರರ ಸಂದರ್ಶನ ಪ್ರಸಾರವಾದ ಹಿನ್ನೆಲೆಯಲ್ಲಿ ಪಾಕಿಸ್ಥಾನ ಕ್ರಿಕೆಟ್ ಮಂಡಳಿ (PCB) ಸ್ಕೈ ಸ್ಪೋರ್ಟ್ಸ್ ವಿರುದ್ಧ ಅಧಿಕೃತ ದೂರು ದಾಖಲಿಸಿದೆ.
ಕ್ರಿಕ್‌ಇನ್‌ಫೋ ವರದಿ ಪ್ರಕಾರ, ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಿಂದ ತನ್ನ ತಂಡವನ್ನು ಹಿಂಪಡೆಯುವ ಬಗ್ಗೆಯೂ ಪಿಸಿಬಿ ಚಿಂತಿಸಿತ್ತು. ಮೊದಲ ದಿನ ಸ್ಕೈ ಸ್ಪೋರ್ಟ್ಸ್, ಇಂಗ್ಲೆಂಡ್‌ನ ಮಾಜಿ ನಾಯಕ ಮೈಕ್ ಅಥರ್ಟನ್ ಅವರು ಜೈಲಿನಲ್ಲಿರುವ ಮಾಜಿ ಪಾಕಿಸ್ತಾನ ನಾಯಕ ಹಾಗೂ ಪ್ರಧಾನಿ ಇಮ್ರಾನ್ ಖಾನ್ ಅವರ ಪುತ್ರರಾದ ಕಾಸಿಂ ಮತ್ತು ಸುಲೈಮಾನ್ ಖಾನ್ ಅವರೊಂದಿಗೆ ನಡೆಸಿದ್ದ ಪೂರ್ವದಾಖಲಿತ ಸಂದರ್ಶನವನ್ನು ಪ್ರಸಾರ ಮಾಡಿದ್ದೇ ವಿವಾದಕ್ಕೆ ಕಾರಣವಾಯಿತು.
ಬುಧವಾರ ಪಂದ್ಯ ನಡೆದ ಸ್ಥಳದಲ್ಲೇ ಚಿತ್ರೀಕರಿಸಲಾಗಿದ್ದ ಈ ಸಂದರ್ಶನದಲ್ಲಿ, ಇಮ್ರಾನ್ ಖಾನ್ ಅವರ ಆರೋಗ್ಯ ಮತ್ತು ದೃಷ್ಟಿ ಕ್ಷೀಣಿಸುತ್ತಿರುವ ಬಗ್ಗೆ ಅವರ ಪುತ್ರರು ಗಂಭೀರ ಆತಂಕ ವ್ಯಕ್ತಪಡಿಸಿದ್ದರು.
ನೇರ ಪಂದ್ಯದ ಪ್ರಸಾರದಲ್ಲಿ ರಾಜಕೀಯ ವಿಚಾರಗಳನ್ನು ಸೇರಿಸಿರುವುದಕ್ಕೆ ಪಿಸಿಬಿ ಆಕ್ಷೇಪ ವ್ಯಕ್ತಪಡಿಸಿತು. ಸಂದರ್ಶನ ಪ್ರಸಾರವಾದರೆ ಮಧ್ಯಾಹ್ನದ ಅವಧಿಯಲ್ಲಿ ತನ್ನ ಆಟಗಾರರನ್ನು ಡ್ರೆಸ್ಸಿಂಗ್ ರೂಮ್‌ನಲ್ಲೇ ಇರಿಸುವುದಾಗಿ ಪಿಸಿಬಿ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.
ಸ್ಕೈ ಸ್ಪೋರ್ಟ್ಸ್ ಸಂದರ್ಶನದ ಪ್ರಸಾರವನ್ನು ಮುಂದೂಡಿ, ಬಳಿಕ ಊಟದ ವಿರಾಮದ ವೇಳೆ ಪ್ರಸಾರ ಮಾಡಿತು. ಇದರ ಬೆನ್ನಲ್ಲೇ ಪಿಸಿಬಿ ಅಧಿಕೃತ ದೂರು ದಾಖಲಿಸಿತು. ಆದರೆ ಅಂತಿಮವಾಗಿ ತನ್ನ ಬೆದರಿಕೆಯಿಂದ ಹಿಂದೆ ಸರಿದ ಪಾಕಿಸ್ಥಾನ ತಂಡ ಮಧ್ಯಾಹ್ನದ ಅವಧಿಯಲ್ಲಿ ಮೈದಾನಕ್ಕಿಳಿಯಿತು. ಈ ದೂರು ಕುರಿತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ)ಗೂ ಮಾಹಿತಿ ನೀಡಲಾಗಿತ್ತು ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ. ಟೆಸ್ಟ್ ಸರಣಿಯ ಪಾಕಿಸ್ಥಾನದ ಪ್ರಸಾರ ವಾಹಿನಿಯಲ್ಲಿ ಈ ಸಂದರ್ಶನ ಪ್ರಸಾರವಾಗಲಿಲ್ಲ ಎನ್ನಲಾಗಿದೆ.
73 ವರ್ಷದ ಇಮ್ರಾನ್ ಖಾನ್ ಅವರು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ 2023ರ ಆಗಸ್ಟ್‌ನಿಂದ ಜೈಲಿನಲ್ಲಿದ್ದಾರೆ. ಈ ಪೈಕಿ ಒಂದು ಪ್ರಕರಣದಲ್ಲಿ ಅವರು ದೋಷಿ ಎಂದು ತೀರ್ಪು ನೀಡಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ನಿರಾಕರಿಸಿರುವ ಇಮ್ರಾನ್ ಖಾನ್, ತಮ್ಮ ವಿರುದ್ಧದ ಪ್ರಕರಣಗಳು ರಾಜಕೀಯ ಪ್ರೇರಿತವಾಗಿವೆ ಎಂದು ಆರೋಪಿಸಿದ್ದಾರೆ. ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಬಂಧಿಯಾಗಿರುವ ಅವರು ಮೂರು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ.
ಇಮ್ರಾನ್ ಖಾನ್ ಅವರೊಂದಿಗೆ ನಡೆಯುತ್ತಿರುವ ವರ್ತನೆಯ ಬಗ್ಗೆ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ನಾಯಕರೂ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದ ದಿಗ್ಗಜರಾದ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್, ಇಂಗ್ಲೆಂಡ್‌ನ ಮಾಜಿ ನಾಯಕ ಮೈಕ್ ಅಥರ್ಟನ್ ಸೇರಿದಂತೆ 21 ಮಾಜಿ ನಾಯಕರು, ಖಾನ್ ಅವರಿಗೆ ಮಾನವೀಯ ವರ್ತನೆ ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಪಾಕಿಸ್ಥಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಮನವಿ ನವೀಕರಿಸಿದ್ದಾರೆ.
ನ್ಯಾಯಾಲಯದ ನಿರ್ದೇಶನದಂತೆ ಸ್ವತಂತ್ರ ವೈದ್ಯಕೀಯ ತಪಾಸಣೆ ನಡೆಸಬೇಕು, ವಾರಕ್ಕೊಮ್ಮೆ ಕುಟುಂಬ ಸದಸ್ಯರಿಗೆ ಭೇಟಿಗೆ ಅವಕಾಶ ನೀಡಬೇಕು ಹಾಗೂ ಅಗತ್ಯವಿರುವ ಯಾವುದೇ ಚಿಕಿತ್ಸೆಯನ್ನು ವಿಳಂಬವಿಲ್ಲದೆ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ವಿವಾದ ಲಾರ್ಡ್ಸ್‌ನಲ್ಲಿ ಪಾಕಿಸ್ಥಾನಕ್ಕೆ ಉತ್ತಮವಾಗಿದ್ದ ಮೊದಲ ದಿನದ ಆಟದ ಮೇಲೆ ನೆರಳು ಬೀರಿತು. ಟಾಸ್ ಗೆದ್ದ ಪಾಕಿಸ್ಥಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಗಾಯದ ಕಾರಣ ಸರಣಿಯ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದ ಬಾಬರ್ ಅಜಂ ತಂಡಕ್ಕೆ ಮರಳಿದರು. ಮೊಹಮ್ಮದ್ ಅಬ್ಬಾಸ್ 56 ರನ್‌ಗೆ 4 ವಿಕೆಟ್ ಹಾಗೂ ಮೊಹಮ್ಮದ್ ಅಲಿ 67 ರನ್‌ಗೆ 3 ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನು 56 ಓವರ್‌ಗಳಲ್ಲಿ 248 ರನ್‌ಗೆ 9 ವಿಕೆಟ್‌ಗಳ ಸ್ಥಿತಿಗೆ ತಲುಪಿಸಿದರು. ಬಳಿಕ ಮಂದ ಬೆಳಕಿನಿಂದ ಆಟ ಸ್ಥಗಿತಗೊಂಡಿತು. 80 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ ಜೋರ್ಡನ್ ಕಾಕ್ಸ್ 55 ಮತ್ತು ಜೇಮಿ ಸ್ಮಿತ್ 61 ರನ್ ಗಳಿಸಿ ಆಸರೆಯಾದರು. 34 ರನ್ ಗಳಿಸಿರುವ ಗಸ್ ಅಟ್ಕಿನ್ಸನ್ ಮತ್ತು ಜೋಶ್ ಟಂಗ್ ಕೊನೆಯ ವಿಕೆಟ್ ನ ಆಟ ಮುಂದುವರಿಸಲಿದ್ದಾರೆ.

