Dailyhunt Logo
  • Light mode
    Follow system
    Dark mode
    • Play Story
    • App Story
ಇಮ್ರಾನ್ ಖಾನ್‌ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲಿಸಲು ಪಾಕಿಸ್ತಾನ ಸುಪ್ರೀಂ ಕೋರ್ಟ್ ಆದೇಶ

ಇಮ್ರಾನ್ ಖಾನ್‌ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲಿಸಲು ಪಾಕಿಸ್ತಾನ ಸುಪ್ರೀಂ ಕೋರ್ಟ್ ಆದೇಶ

ಸ್ಲಾಮಾಬಾದ್: ಕಳೆದ ಮೂರು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ಅವರನ್ನು ತಕ್ಷಣವೇ ಇಸ್ಲಾಮಾಬಾದ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಮಂಗಳವಾರ ಐತಿಹಾಸಿಕ ಆದೇಶ ನೀಡಿದೆ.

ಖಾನ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

ಸರ್ಕಾರದ ಆಕ್ಷೇಪಣೆಗಳನ್ನು ವಜಾಗೊಳಿಸಿದ ನ್ಯಾಯಾಲಯ, ಇಮ್ರಾನ್ ಖಾನ್ ಅವರನ್ನು ಮುಂದಿನ 48 ಗಂಟೆಗಳ ಒಳಗಾಗಿ ಇಸ್ಲಾಮಾಬಾದ್‌ನ ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಗೆ ರವಾನಿಸುವಂತೆ ಸೂಚಿಸಿದೆ. ಅವರು ಸೆ.16 ರವರೆಗೆ ಆಸ್ಪತ್ರೆಯಲ್ಲೇ ಇರಲಿದ್ದಾರೆ. ಇಮ್ರಾನ್ ಖಾನ್ ಅವರ ಆರೋಗ್ಯವನ್ನು ತಪಾಸಣೆ ಮಾಡಲು ವೈದ್ಯಕೀಯ ಮಂಡಳಿಯೊಂದನ್ನು ರಚಿಸಲಾಗುತ್ತಿದ್ದು, ಅದರಲ್ಲಿ ಅವರ ವೈಯಕ್ತಿಕ ವೈದ್ಯರು ಮತ್ತು ಅವರ ಸಹೋದರಿ ಡಾ. ಅಲಿಮಾ ಖಾನ್ ಕೂಡ ಇರಲಿದ್ದಾರೆ.

ಈ ಆದೇಶವನ್ನು ಸ್ವಾಗತಿಸಿರುವ ಇಮ್ರಾನ್ ಖಾನ್ ಅವರ ನಿಕಟವರ್ತಿ ಹಾಗೂ ಸಲಹೆಗಾರ ಜುಲ್ಫಿಕರ್ ಅಲಿ ಬುಖಾರಿ, "ಇದು ಅತ್ಯಂತ ಸ್ವಾಗತಾರ್ಹ ಆದೇಶವಾಗಿದೆ. ಆದರೆ ಈ ನಿರ್ಧಾರ ಇನ್ನಷ್ಟು ಬೇಗ ಬಂದಿದ್ದರೆ ಅವರ ಕಣ್ಣಿನ ದೃಷ್ಟಿ ಮತ್ತು ಒಟ್ಟಾರೆ ಆರೋಗ್ಯ ಈ ಮಟ್ಟಿಗೆ ಕ್ಷೀಣಿಸುತ್ತಿರಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ವೈದ್ಯಕೀಯ ವರದಿಗಳ ಪ್ರಕಾರ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ. ಅವರ ರಕ್ತದೊತ್ತಡದಲ್ಲಿ ತೀವ್ರ ವ್ಯತ್ಯಾಸ, ಎದೆಬಡಿತ ಹೆಚ್ಚಳ ಹಾಗೂ ಅತಿಯಾದ ಮಾನಸಿಕ ಒತ್ತಡ ಕಾಣಿಸಿಕೊಂಡಿದೆ. ಇತ್ತೀಚೆಗೆ ಅವರ ರಕ್ತದೊತ್ತಡ 140/80 ಹಾಗೂ ನಾಡಿಮಿಡಿತ ನಿಮಿಷಕ್ಕೆ 54 ಇರುವುದು ದಾಖಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ಅವರ ರಕ್ತದೊತ್ತಡ ಸಾಮಾನ್ಯ ಮಟ್ಟದಲ್ಲಿದ್ದು (120/80), ಪ್ರಸ್ತುತ ಅವರ ಬಲಗಣ್ಣಿನ ಶೇ. 85 ರಷ್ಟು ದೃಷ್ಟಿ ಕ್ಷೀಣಿಸಿದೆ ಎಂದು ವರದಿಗಳು ತಿಳಿಸಿವೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಆರಿಫ್ ಅಲ್ವಿ ಅವರು ಖಾನ್ ಅವರ ವೈದ್ಯಕೀಯ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, "ಖಾನ್ ಅವರ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ. ಮುಂದಿನ ಮೂರು ತಿಂಗಳುಗಳು ಅವರ ಆರೋಗ್ಯ ಚೇತರಿಸಿಕೊಳ್ಳುತ್ತದೆಯೇ ಅಥವಾ ಸ್ಥಿತಿ ಹೀಗೆಯೇ ಶಾಶ್ವತವಾಗುತ್ತದೆಯೇ ಎಂಬುದನ್ನು ನಿರ್ಧರಿಸಲಿವೆ" ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ಎಂಟು ತಿಂಗಳುಗಳಿಂದ ಇಮ್ರಾನ್ ಖಾನ್ ಅವರನ್ನು ಸಂಪೂರ್ಣ ಏಕಾಂತದಲ್ಲಿ ಇರಿಸಲಾಗಿದ್ದು, ಕುಟುಂಬದ ಸದಸ್ಯರನ್ನೂ ಭೇಟಿಯಾಗಲು ಬಿಡುತ್ತಿಲ್ಲ ಎಂದು ಪಿಟಿಐ (PTI) ಪಕ್ಷ ಆರೋಪಿಸಿದೆ. ಖಾನ್ ಅವರ ಇನ್ನೊಬ್ಬ ಸಹೋದರಿ ಉಜ್ಮಾ ಖಾನಮ್ ಅವರು ಡಿಸೆಂಬರ್‌ನಲ್ಲಿ ಜೈಲಿನಲ್ಲಿ ಅವರನ್ನು ಭೇಟಿಯಾಗಿದ್ದಾಗ, ಜೈಲಿನ ದುಸ್ಥಿತಿ ಮತ್ತು ತಮ್ಮ ಸಹೋದರ ಅನುಭವಿಸುತ್ತಿರುವ ಮಾನಸಿಕ ಯಾತನೆಯನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದರು. ತಮ್ಮ ಈ ಸ್ಥಿತಿಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರೇ ಕಾರಣ ಎಂದು ಖಾನ್ ಆರೋಪಿಸಿರುವುದಾಗಿಯೂ ಅವರು ತಿಳಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Udayavani