Dailyhunt
India; ವಾಣಿಜ್ಯ ಹಡಗುಗಳು, ತೈಲ ಟ್ಯಾಂಕರ್‌ಗಳ ಭದ್ರತೆ ನೌಕಾಪಡೆ ಖಚಿತಪಡಿಸಲಿದೆ

India; ವಾಣಿಜ್ಯ ಹಡಗುಗಳು, ತೈಲ ಟ್ಯಾಂಕರ್‌ಗಳ ಭದ್ರತೆ ನೌಕಾಪಡೆ ಖಚಿತಪಡಿಸಲಿದೆ

ವಿಶಾಖಪಟ್ಟಣಂ: ಮಧ್ಯಪ್ರಾಚ್ಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವ ವೇಳೆ ''ಭಾರತೀಯ ವಾಣಿಜ್ಯ ಹಡಗುಗಳು, ತೈಲ ಟ್ಯಾಂಕರ್‌ಗಳ ಭದ್ರತೆಯನ್ನು ನೌಕಾಪಡೆ ಖಚಿತಪಡಿಸುತ್ತದೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಶುಕ್ರವಾರ ಐಎನ್‌ಎಸ್ ತಾರಗಿರಿಯ ಕಾರ್ಯಾರಂಭ ಸಮಾರಂಭದಲ್ಲಿ ಮಾತನಾಡಿದ ರಕ್ಷಣಾ ಸಚಿವರು, ''ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರದಲ್ಲಿ, ಅದು ಪರ್ಷಿಯನ್ ಕೊಲ್ಲಿಯಾಗಿರಲಿ ಅಥವಾ ಮಲಕ್ಕಾ ಜಲಸಂಧಿಯಾಗಿರಲಿ ನಿರಂತರವಾಗಿ ತನ್ನ ಉಪಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ'' ಎಂದು ಹೇಳಿದರು.

ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ಹದಗೆಟ್ಟಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತೈಲ ಪೂರೈಕೆಯಲ್ಲಿನ ಅಡ್ಡಿ ಮತ್ತು ತೈಲ ಟ್ಯಾಂಕರ್‌ಗಳ ತಡೆಯಿಂದಾಗಿ ಸಿಂಗ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿವೆ.

ಬಲಿಷ್ಠ ಮತ್ತು ಸಮರ್ಥ ನೌಕಾಪಡೆ ದೇಶಕ್ಕೆ ಒಂದು ಆಯ್ಕೆಯಲ್ಲ, ಬದಲಿಗೆ ಅವಶ್ಯಕತೆ. ಸಮುದ್ರದಲ್ಲಿ ಅನೇಕ ಸೂಕ್ಷ್ಮ ಸ್ಥಳಗಳಿದ್ದು, ಸರಕುಗಳ ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ನೌಕಾಪಡೆ ನಿರಂತರವಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಉದ್ವಿಗ್ನತೆಯ ಪರಿಸ್ಥಿತಿ ಉಂಟಾದಾಗಲೆಲ್ಲಾ, ಭಾರತೀಯ ನೌಕಾಪಡೆಯು ನಮ್ಮ ವಾಣಿಜ್ಯ ಹಡಗುಗಳು ಮತ್ತು ತೈಲ ಟ್ಯಾಂಕರ್‌ಗಳ ಭದ್ರತೆಯನ್ನು ಖಚಿತಪಡಿಸಿಕೊಂಡಿದೆ" ಎಂದು ಸಿಂಗ್ ಹೇಳಿದರು.

''ನೌಕಾ ಶಕ್ತಿಯನ್ನು ಬಲಪಡಿಸದೆ, ಯಾವುದೇ ದೇಶವನ್ನು ಸರಿಯಾದ ಅರ್ಥದಲ್ಲಿ ಶಕ್ತಿಶಾಲಿ ಎಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ಪ್ರಧಾನಿ ನರೇಂದ್ರ ಮೋದಿ 2047 ರ ವೇಳೆಗೆ ವಿಕಸಿತ್ ಭಾರತದ ಬಗ್ಗೆ ಮಾತನಾಡುವಾಗ, ಸಮುದ್ರ ಶಕ್ತಿಯ ಆಧಾರವೂ ಬಹಳ ಮುಖ್ಯವಾಗುತ್ತದೆ'' ಎಂದು ರಕ್ಷಣಾ ಸಚಿವ ಸಿಂಗ್ ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Udayavani