ದುಬಾೖ: ಶುಕ್ರವಾರದಿಂದ ಸೆ. 13ರವರೆಗೆ ಯುಎಇಯ ದುಬಾೖಯಲ್ಲಿ ವನಿತಾ ಏಷ್ಯಾ ಕಪ್ ಟಿ20 ಪಂದ್ಯಾವಳಿ ಆರಂಭಗೊಳ್ಳಲಿದೆ. ಇದು 10ನೇ ಆವೃತ್ತಿಯ ಪಂದ್ಯಾವಳಿ. ಕೂಟದಲ್ಲಿ ದಾಖಲೆಯ 7 ಬಾರಿ ಟ್ರೋಫಿ ಗೆದ್ದಿರುವ ಭಾರತ, ಹಾಲಿ ಚಾಂಪಿಯನ್ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ಥಾನ ಸೇರಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ.
ಶುಕ್ರವಾರ ರಾತ್ರಿ 8ಕ್ಕೆ ಆರಂಭವಾಗುವ ಉದ್ಘಾಟನ ಪಂದ್ಯದಲ್ಲಿ ಥಾçಲೆಂಡ್ ಮತ್ತು ಹಾಂಕಾಂಗ್ ಕಣಕ್ಕಿಳಿಯಲಿವೆ. ಶನಿವಾರ ಶ್ರೀಲಂಕಾ ಮತ್ತು ಆತಿಥೇಯ ಯುಎಇ ಮುಖಾಮುಖೀಯಾದರೆ, ಆ. 30ರ ರವಿವಾರ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಥಾçಲೆಂಡ್ ಅನ್ನು ಎದುರಿಸಲಿದೆ.
2 ಗುಂಪುಗಳಲ್ಲಿ ತಂಡ ವಿಂಗಡಣೆ
ಪಂದ್ಯಾವಳಿಗೆ ಸಂಬಂಧಿಸಿ ಎ ಮತ್ತು ಬಿ ಹೀಗೆ 2 ಗುಂಪುಗಳನ್ನು ರಚಿಸಲಾಗಿದ್ದು ಇದರಲ್ಲಿ ತಲಾ 4 ತಂಡಗಳನ್ನು ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ಥಾನ, ಥಾçಲೆಂಡ್, ಹಾಂಕಾಂಗ್; ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಯುಎಇ, ಇಂಡೋನೇಷ್ಯಾ ತಂಡಗಳಿವೆ.
2004ರಲ್ಲಿ ಮೊದಲ ಆವೃತ್ತಿ
ವನಿತಾ ಏಷ್ಯಾ ಕಪ್ ಮೊದಲ ಆವೃತ್ತಿ ನಡೆದಿದ್ದು 2004ರಲ್ಲಿ ಶ್ರೀಲಂಕಾದಲ್ಲಿ ಆಗ ಏಕದಿನ ಮಾದರಿಯಲ್ಲಿ ಟೂರ್ನಿ ನಡೆದಿತ್ತು. ಅಂದು ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ಗೆದ್ದು ಬೀಗಿತ್ತು. ಬಳಿಕ 2005-06, 2006, 2008, 2012, 2016 ಹೀಗೆ ಸತತ 5 ಪ್ರಶಸ್ತಿ ಗೆದ್ದಿತ್ತು. ಅದಾಗಿ 2022ರ ಟ್ರೋಫಿಯೂ ಸೇರಿ 7 ಪ್ರಶಸ್ತಿ ಗೆದ್ದ ದಾಖಲೆ ಭಾರತದ ಹೆಸರಿನಲ್ಲಿದೆ. 2018ರಲ್ಲಿ ಬಾಂಗ್ಲಾ, 2024ರಲ್ಲಿ ಶ್ರೀಲಂಕಾ ಕಪ್ ಜಯಿಸಿತ್ತು. 2008ರವರೆಗೆ ಆರಂಭಿಕ 4 ಆವೃತ್ತಿ ಏಕದಿನ ಮಾದರಿಯಲ್ಲಿ ನಡೆದರೆ ಬಳಿಕ ಟಿ20 ಮಾದರಿಯಲ್ಲಿ ಪಂದ್ಯ ನಡೆಯುತ್ತಿವೆ.
ಲೀಗ್‌ನಲ್ಲಿ 12 ಪಂದ್ಯ: ಸಿಂಗಲ್ ರೌಂಡ್ ರಾಬಿನ್ ಮಾದರಿ
ಪಂದ್ಯಾವಳಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಆರಂಭಿಕ 12 ಪಂದ್ಯ ಲೀಗ್ ಹಂತದ್ದು. ಉಳಿದಿದ್ದ ನಾಕೌಟ್ ಮತ್ತು ಫೈನಲ್. ತಲಾ 4 ತಂಡಗಳ 2 ಗುಂಪುಗಳಲ್ಲಿ ಪ್ರತೀ ತಂಡ ತಲಾ 3 ಪಂದ್ಯ ಆಡುತ್ತವೆ. ಬಳಿಕ ತಮ¬¾ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಉಳಿಯುವ 2 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ. ಬಳಿಕ ಫೈನಲ್ ನಡೆಯುತ್ತದೆ. ದಿನಕ್ಕೊಂದರಂತೆ ಪಂದ್ಯ ನಡೆಯಲಿದ್ದು, ಎಲ್ಲ ಪಂದ್ಯಗಳು ರಾತ್ರಿ 8ಕ್ಕೆ ನಡೆಯಲಿವೆ. ಸೆ. 10 ಮತ್ತು ಸೆ. 11ಕ್ಕೆ ಸೆಮಿಫೈನಲ್, ಸೆ. 13ಕ್ಕೆ ಫೈನಲ್ ನಡೆಯಲಿದೆ.
ಸೆ. 5ಕ್ಕೆ ಭಾರತ-ಪಾಕ್ ಮುಖಾಮುಖೀ
ಬದ್ಧ ಎದುರಾಳಿ ತಂಡಗಳಾದ ಭಾರತ ಮತ್ತು ಪಾಕಿಸ್ಥಾನ ಸೆ. 5ಕ್ಕೆ ನಡೆಯುವ ಎ ಗುಂಪಿನ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಪಾಕಿಸ್ಥಾನ ಎಂದೂ ಟ್ರೋಫಿ ಗೆದ್ದಿಲ್ಲ. ಆದರೆ 2012 ಮತ್ತು 2016ರಲ್ಲಿ ರನ್ನರ್‌ಅಪ್ ಆಗಿದೆ. ಈ ವೇಳೆ ಭಾರತ ವಿರುದ್ಧವೇ ಪಾಕ್ ಸೋತಿತ್ತು.

