ಸಾಸಿವೆ ತಂದವಳು ಪುಸ್ತಕ ಬರೆದವರು ಬಿ.ವಿ. ಭಾರತಿ. ಹೆಸರಲ್ಲೇ ವಿಭಿನ್ನತೆ ಇರುವ ಪುಸ್ತಕದ ನಾಯಕಿ ಸ್ವತಃ ಲೇಖಕಿಯೇ.
ಹಿಂದೆ ಹೆಂಗಸೊಬ್ಬಳು ಭಗವಾನ್ ಗೌತಮ ಬುದ್ಧರಲ್ಲಿ ತನ್ನ ಸತ್ತ ಮಗನನ್ನು ಬದುಕಿಸಿಕೊಡುವಂತೆ ಕೇಳಿಕೊಂಡಾಗ, ಬುದ್ಧರು ಸಾಧ್ಯವಿಲ್ಲ ಅನ್ನುವುದರ ಬದಲಾಗಿ ʼಸಾವಿಲ್ಲದ ಮನೆಯಿಂದ ಸಾಸಿವೆ ತಂದರೆ, ನಿನ್ನ ಮಗನನ್ನು ಬದುಕಿಸುತ್ತೇನೆ' ಎಂದರಂತೆ.
ಆ ಹೆಂಗಸು ಮನೆ ಮನೆ ತಿರುಗಿದರೂ ಒಂದೇ ಒಂದು ಸಾವು ಕಾಣದ ಮನೆ ಸಿಗದೆ ಅಲೆದಾಡಿದಾಗ ಆಕೆಗೆ ಸಾವಿಲ್ಲದ ಮಾನವ ಇಲ್ಲ, ಸಾವು ಅನಿವಾರ್ಯ ಎನ್ನುವುದು ಅರಿವಾಯಿತಂತೆ. ಆ ಗಾದೆಯನ್ನೇ ಮಾರ್ಮಿಕವಾಗಿ ಶೀರ್ಷಿಕೆಯಾಗಿ ಇಟ್ಟುಕೊಂಡ ಲೇಖಕಿ ಕ್ಯಾನ್ಸರ್ ವಿರುದ್ಧ ಸೆಣಸಾಡಿ, ಮಹಾಮಾರಿಯನ್ನೇ ಹಿಮ್ಮೆಟ್ಟಿಸಿದ ಹಠವಾದಿ, ಅಂದರೆ ಸಾಸಿವೆ ತಂದವಳು!
ಪ್ರತೀ ಸಣ್ಣ ಸಣ್ಣ ಆರೋಗ್ಯ ಸಂಬಂಧಿತ ವಿಷಯಗಳು ಅಥವಾ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಾದಾಗ ಭಯ ಪಡುತ್ತಿದ್ದ ಲೇಖಕಿಯ ಜೀವನದಲ್ಲಿ ಮಹಾ ಸಂಕಟವೊಂದು ಅಪ್ಪಿಕೊಂಡಾಗ, ಆಕೆ ಅನುಭವಿಸಿದ ಮಾನಸಿಕ ವೇದನೆ, ಕ್ರಮೇಣ ಅದರೊಟ್ಟಿಗೆ ಬದುಕಿದ, ನಗು ನಗುತ್ತಲೇ ಅದನ್ನು ಹೆದರಿಸಿ ಕಥೆ ನನ್ನನು ಕಾಡಿದ್ದು ಸುಳ್ಳಲ್ಲ.
ಒಂದು ದಿನ ಅಚಾನಕ್ಕಾಗಿ ಆಫೀಸ್‌ನಿಂದ ಸುಸ್ತಾಗಿ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದ ಸಂದರ್ಭದಲ್ಲಿ ಸಣ್ಣ ಗಡ್ಡೆಯೊಂದರ ಇರುವಿಕೆಯ ಅರಿವಾಗಿ, ಗಾಬರಿಯಾಗಿ ಪರೀಕ್ಷೆ ಮಾಡಿಕೊಳ್ಳಲು ಹೋದಾಗ ಪ್ರಪ್ರಥಮವಾಗಿ ಡಾಕ್ಟರ್ ಹೇಳುವ ವರಸೆಗೆ, ಪರೀಕ್ಷಿಸುವ ರೀತಿಗೆ ಕುಗ್ಗಿಹೋದ ಲೇಖಕಿ, ರೋಗಿಯ ಆರೈಕೆಯಲ್ಲಿ ವೈದ್ಯರ ಪಾತ್ರವೂ ಮಹತ್ವದ್ದು ಅನ್ನುವ ತನ್ನ ನಿಲುವನ್ನು ವ್ಯಕ್ತಪಡಿಸುತ್ತಾರೆ.
ಅಪತ್ಕಾಲದಲ್ಲಿ ಜತೆಗಿದ್ದ ಅಪ್ಪ -ಅಮ್ಮ, ಗಂಡ ಮಕ್ಕಳು, ಫ್ರೆಂಡ್ಸ್ ಹೀಗೆ ಎಲ್ಲರ ಬಗ್ಗೆ ಹೇಳಿಕೊಳ್ಳುವ ಭಾರತಿ ಅವರು ನನ್ನೊಳಗಿನ ಅಚ್ಚರಿಗೆ ಕಾರಣವಾದರು. ಕ್ಯಾನ್ಸರ್‌ನ ಪ್ರತೀ ಚಿಕಿತ್ಸೆಯ ಹಂತದ ಆ ವಿಪರೀತ ನೋವು ಸಂಕಟಗಳನ್ನು ಅರಗಿಸಿಕೊಂಡು, ಮತ್ತೇ ಉತ್ಸಾಹದಲ್ಲಿ ಪುಟಿಯುತ್ತಾ ಅವರು ಚೇತರಿಸಿಕೊಂಡ ಬಗೆಗೆ, ಅವೆಲ್ಲವನ್ನೂ ತಮಾಷೆಯಾಗಿ ತೆಗೆದುಕೊಂಡ ಆ ವೀರೆಗೆ ನನ್ನದೊಂದು ಸಲಾಂ.
ಒಂದು ಕಡೆ ಬರೆಯುತ್ತಾರೆ.. ಒಂದೊಂದು ಟ್ರೀಟ್ಮೆಂಟ್‌ಗೂ ಅಷ್ಟಷ್ಟು ಹಣ! ಬಡ ವರ್ಗದವರಿಗೆ ಇಂಥವುಗಳು ಬರದೆ ಇರಲಿ ಎಂದು ಆ ನೋವಿನಲ್ಲೂ ಲೇಖಕಿ ಬೇಡಿಕೊಳ್ಳುವುದು ಮನಸ್ಸಿಗೆ ಮುಟ್ಟುತ್ತದೆ. ಸಾಸಿವೆ ತಂದವಳು ಈ ಪುಸ್ತಕವನ್ನು ಸಮಯ ಸಿಕ್ಕರೆ ಖಂಡಿತ ಓದಿ. ಸಣ್ಣ ಸಣ್ಣ ಆರೋಗ್ಯ ಸಮಸ್ಯೆಗಳಿಗೂ ಭಯ ಬೀಳುವ ಸಂದರ್ಭದಲ್ಲಿ ಮಾರಣಾಂತಿಕ ರೋಗವನ್ನು ಕೂಡ ಸ್ಥೈರ್ಯದಿಂದ ಹೊಡೆದೋಡಿಸಬಹುದು ಎನ್ನುವ ಧೈರ್ಯವನ್ನು ಈ ಕೃತಿ ಕೊಡುತ್ತದೆ.
-ಹರ್ಷಿತಾ ಪಿ.
ಉಪನ್ಯಾಸಕಿ, ವಿವೇಕಾನಂದ
ಪ. ಪೂ. ಕಾಲೇಜು ಪುತ್ತೂರು

