ಜೈಪುರ್: ಈ ಐಪಿಎಲ್‌ನಿಂದ ನಿರ್ಗಮಿಸಿರುವ ಲಕ್ನೋ ಸೂಪರ್ ಜೈಂಟ್ಸನ್ನು ಮಂಗಳವಾರದ ಪಂದ್ಯದಲ್ಲಿ 7 ವಿಕೆಟ್ ಅಂತರದಿಂದ ಮಣಿಸಿರುವ ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದು ತನ್ನ ಪ್ಲೇ ಆಫ್ ಆಸೆಗೆ ನೂತನ ಸ್ಪರ್ಶವಿತ್ತಿದೆ.
ಲಕ್ನೋ 20 ಓವರ್‌ಗಳಲ್ಲಿ 5 ವಿಕೆಟಿಗೆ 220 ರನ್ ಪೇರಿಸಿ ಸವಾಲೊಡ್ಡಿದರೆ, ರಾಜಸ್ಥಾನ್ 19.1 ಓವರ್ ಗಳಲ್ಲಿ 3 ವಿಕೆಟಿಗೆ 225 ರನ್ ಬಾರಿಸಿತು.
ಇದು 13 ಪಂದ್ಯಗಳಲ್ಲಿ ರಾಜಸ್ಥಾನ್ ಸಾಧಿಸಿದ 7ನೇ ಗೆಲುವು. ಲಕ್ನೋ 13 ಪಂದ್ಯಗಳಲ್ಲಿ 9ನೇ ಸೋಲುಂಡಿತು. ರಾಜಸ್ಥಾನ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈಯನ್ನು ಎದುರಿಸಲಿದೆ. ಅದು ಪ್ಲೇಆಫ್ ನಿಟ್ಟಿನಲ್ಲಿ ರಾಜಸ್ಥಾನಕ್ಕೆ ನಿರ್ಣಾಯಕವೆನಿಸಲಿದೆ.
ಮಾರ್ಷ್-ಇಂಗ್ಲಿಸ್ ಮಿಂಚು:
ಬ್ಯಾಟಿಂಗ್‌ಗೆ ಇಳಿದ ಲಕ್ನೋ ಪರ ಮಾರ್ಷ್-ಇಂಗ್ಲಿಸ್ ಸೇರಿಕೊಂಡು ಮೊದಲ ವಿಕೆಟಿಗೆ 8.2 ಓವರ್ ಗಳಿಂದ 109 ರನ್ ರಾಶಿ ಹಾಕಿದರು. ಇದು ರಾಜಸ್ಥಾನ್ ವಿರುದ್ಧ ಎಲ್ಲ ವಿಕೆಟಿಗೆ ಅನ್ವಯಿಸುವಂತೆ ಲಕ್ನೋ ದಾಖಲಿಸಿದ 2ನೇ ದೊಡ್ಡ ಜತೆಯಾಟ. 2024ರ ಲಕ್ನೋ ಪಂದ್ಯದಲ್ಲಿ ಕೆ.ಎಲ್. ರಾಹುಲ್-ದೀಪಕ್ ಹೂಡಾ 3ನೇ ವಿಕೆಟಿಗೆ 115 ರನ್ ಪೇರಿಸಿದ್ದು ದಾಖಲೆ.
ಶತಕದ ಅಂಚಿನಲ್ಲಿದ್ದ ಮಾರ್ಷ್ 96 ರನ್ ಗಳಿಸಿ ಕೊನೆಯ ಓವರಿನಲ್ಲಿ ರನೌಟಾದರು. 55 ಎಸೆತ ನಿಭಾಯಿಸಿದ ಮಾರ್ಷ್ 11 ಬೌಂಡರಿ ಹಾಗೂ 5 ಸಿಕ್ಸ್ ಬಾರಿಸಿದರು. ಇಂಗ್ಲಿಸ್ 29 ಎಸೆತಗಳಿಂದ 60 ರನ್ ಸಿಡಿಸಿದರು. ಇದು 7 ಬೌಂಡರಿ, 3 ಸಿಕ್ಸರ್ ಗಳನ್ನು ಒಳಗೊಂಡಿತ್ತು. ಯಶ್ ರಾಜ್ ಪೂಂಜ ಈ ಜೋಡಿಯನ್ನು ಬೇರ್ಪಡಿಸಿದರು.
ಇನ್ನು ನಾಯಕ ರಿಷಭ್ ಪಂತ್ 23 ಎಸೆತಗಳಿಂದ 35 ರನ್ ಮಾಡಿ ರನೌಟಾದರು (2 ಬೌಂಡರಿ, 2 ಸಿಕ್ಸ್). ಮಾರ್ಷ್-ಪಂತ್ 3ನೇ ವಿಕೆಟಿಗೆ 64 ರನ್ ಪೇರಿಸಿ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಚೇಸಿಂಗ್ ವೇಳೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಬಿರುಸಿನ ಆರಂಭ ಒದಗಿಸಿದರು. ಧ್ರುವ ಜುರೆಲ್ ಕೂಡ ಜವಾಬ್ದಾರಿಯುತ ಆಟವಾಡಿದರು. ಸೂರ್ಯವಂಶಿ 38 ಎಸೆತಗಳಿಂದ 93 ರನ್ ಹೊಡೆದು ತವರಿನ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು. ಸಿಡಿಸಿದ್ದು 10 ಸಿಕ್ಸರ್ ಮತ್ತು 7 ಬೌಂಡರಿ.
53 ಸಿಕ್ಸರ್: ವೈಭವ್ ದಾಖಲೆ
ಪಂದ್ಯದ ಮೂಲಕ ಸೂರ್ಯವಂಶಿ ಈ ಆವೃತ್ತಿಯಲ್ಲಿ 53 ಸಿಕ್ಸರ್ ದಾಖಲಿಸಿದರು. ಇದು ಸೀಸನ್‌ವೊಂದರಲ್ಲಿ ಭಾರತೀಯರ ಪರ ಗರಿಷ್ಠ ಸಿಕ್ಸರ್ ದಾಖಲೆಯಾಗಿದೆ. ಒಟ್ಟಾರೆಯಾಗಿ 2ನೇ ಗರಿಷ್ಠ ಸಾಧನೆ. 2012ರಲ್ಲಿ ಕ್ರಿಸ್ ಗೇಲ್ 59 ಸಿಕ್ಸ್ ಸಿಡಿಸಿದ್ದು ದಾಖಲೆ. ಸೂರ್ಯವಂಶಿ ಪಂದ್ಯವೊಂದರಲ್ಲಿ 10 ಪ್ಲಸ್ ಸಿಕ್ಸ್ ಹೊಡೆದ 3ನೇ ನಿದರ್ಶನ ಇದಾಗಿದೆ. ಇಲ್ಲಿಯೂ ಗೇಲ್ ಮುಂದಿದ್ದಾರೆ (4).
579 ರನ್:
ಅನ್‌ಪ್ಯಾಪ್ಡ್ ಆಟಗಾರನಾಗಿ ಈ ಬಾರಿ 579 ರನ್ ಬಾರಿಸಿರುವ ಸೂರ್ಯವಂಶಿ ಆವೃತ್ತಿಯಲ್ಲಿ ಹೀಗೆ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಜೈಸ್ವಾಲ್ (625), ಮಾರ್ಷ್ (616) ಅಗ್ರ 2ರಲ್ಲಿದ್ದಾರೆ.
ಪಂದ್ಯದ ತಿರುವು
ವೈಭವ್, ಜೈಸ್ವಾಲ್ ಮತ್ತು ಜುರೆಲ್ ಆಟವೇ ರಾಜಸ್ಥಾನ್ ಗೆಲುವಿಗೆ ಕಾರಣ. ಅದರಲ್ಲೂ ವೈಭವ್-ಜುರೆಲ್ ಜೋಡಿ 105 ರನ್ ಜೊತೆಯಾಟ ನೀಡಿದ್ದು ಪ್ರಮುಖವೆನಿಸಿತು.
ಸಂಕ್ಷಿಪ್ತ ಸ್ಕೋರ್:
ಲಕ್ನೋ 20 ಓವರ್, 220/5 (ಮಾರ್ಷ್ 96, ಇಂಗ್ಲಿಷ್ 60, ಪಂತ್ 35, ಯಶ್‌ರಾಜ್ 35ಕ್ಕೆ 2), ರಾಜಸ್ಥಾನ್ 19.1 ಓವರ್, ಸೂರ್ಯವಂಶಿ 93, ಜೈಸ್ವಾಲ್ 43, ಜುರೆಲ್ ಅಜೇಯ 53, ಮೊಹ್ಸಿನ್ 31ಕ್ಕೆ 1).
ಪಂದ್ಯಶ್ರೇಷ್ಠ: ವೈಭವ್ ಸೂರ್ಯವಂಶಿ

