ಹೊಸದಿಲ್ಲಿ: ಸಮೀರ್ ರಿಝ್ವಿ ಅವರ ಮತ್ತೊಂದು ಅಮೋಘ ಬ್ಯಾಟಿಂಗ್ ಶೋ ಹಾಗೂ ಬೌಲರ್ ಗಳ ಘಾತಕ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವನ್ನು 6 ವಿಕೆಟ್ ಅಂತರದಿಂದ ಕೆಡವಿದ ಡೆಲ್ಲಿ ಕ್ಯಾಪಿಟಲ್ಸ್ ಸತತ 2ನೇ ವಿಜಯೋತ್ಸವ ಆಚರಿಸಿದೆ.
ಶನಿವಾರದ ಮೊದಲ ಮುಖಾಮುಖಿಯಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಮುಂಬೈ 6 ವಿಕೆಟಿಗೆ 162 ರನ್ ಗಳಿಸಿದರೆ, ಡೆಲ್ಲಿ18.1 ಓವರ್ ಗಳಲ್ಲಿ 4 ವಿಕೆಟಿಗೆ 164 ರನ್ ಬಾರಿಸಿತು.
ಇದು ಮುಂಬೈ ವಿರುದ್ಧ ಆಡಿದ ಕಳೆದ 7 ಪಂದ್ಯಗಳಲ್ಲಿ ಡೆಲ್ಲಿ ಸಾಧಿಸಿದ 2ನೇ ಜಯ.
ಡೆಲ್ಲಿ ಮೊದಲ ಪಂದ್ಯದಲ್ಲಿ ಲಕ್ನೋ ತಂಡವನ್ನೂ 6 ವಿಕೆಟ್ ಗಳಿಂದ ಮಣಿಸಿತ್ತು. ಮುಂಬೈ ಮೊದಲ ಸೋಲನುಭವಿಸಿತು.
ಸಮೀರ್ ರಿಝ್ವಿ 90
ಡೆಲ್ಲಿ ಬೌಲರ್ಸ್ ಎರಡೂ ಪಂದ್ಯಗಳಲ್ಲಿ ಮಿತವ್ಯಯ ಸಾಧಿಸಿದರೆ, ಯುಪಿ ಆಟಗಾರ ಸಮೀರ್ ರಿಝ್ವಿ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ಮಿಂಚು ಹರಿಸಿದರು. ಲಕ್ನೋ ವಿರುದ್ಧ 70 ರನ್ ಹೊಡೆದಿದ್ದ ಅವರು, ಇಲ್ಲಿ 90 ರನ್ ಕೊಡುಗೆ ಸಲ್ಲಿಸಿದರು (51 ಎಸೆತ, 7 ಬೌಂಡರಿ, 7 ಸಿಕ್ಸ್). ಇದು ಇಂಪ್ಯಾಕ್ಟ್ ಆಟಗಾರನೊಬ್ಬನ 3ನೇ ಅತ್ಯಧಿಕ ಗಳಿಕೆ. ಹಾಗೆಯೇ ರಿಝ್ವಿ ಅವರ ಸತತ 3ನೇ ಅರ್ಧ ಶತಕ.
ಕೆ.ಎಲ್. ರಾಹುಲ್ (1) ಮತ್ತು ನಿತೀಶ್ ರಾಣಾ (0) 7 ರನ್ ಆಗುವಷ್ಟರಲ್ಲಿ ವಾಪಸಾದಾಗ ಮುಂಬೈ ಬೌಲರ್ಸ್ ತಿರುಗಿ ಬೀಳುವ ಸೂಚನೆಯೊಂದು ಸಿಕ್ಕಿತ್ತು. ಆದರೆ ನಿಸ್ಸಂಕ (44) ಮತ್ತು ರಿಝ್ವಿ 66 ರನ್ ಜತೆಯಾಟ ನಿಭಾಯಿಸಿ ಡೆಲ್ಲಿಯ ಆತಂಕವನ್ನು ನಿವಾರಿಸಿದರು. ಸತತ 2ನೇ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದದದ್ದು ರಿಝ್ವಿ ಪಾಲಿನ ಮತ್ತೊಂದು ಹೆಗ್ಗಳಿಕೆ.
ಸೂರ್ಯ ಅರ್ಧ ಶತಕ
ಮುಂಬೈ ಸರದಿಯನ್ನು ಆಧರಿಸಿದವರು ಉಸ್ತುವಾರಿ ನಾಯಕ ಸೂರ್ಯಕುಮಾರ್ ಯಾದವ್. ಕಪ್ತಾನ ಹಾರ್ದಿಕ್ ಪಾಂಡ್ಯ ಅನಾರೋಗ್ಯದಿಂದ ಹೊರಗುಳಿದ ಕಾರಣ ಸೂರ್ಯ ಅವರಿಗೆ ತಂಡದ ನೇತೃತ್ವ ಲಭಿಸಿತ್ತು. ಅವರು ಮುಂಬೈ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು.
18 ರನ್ನಿಗೆ ರಿಕಲ್ಟನ್ (9) ಮತ್ತು ತಿಲಕ್ ವರ್ಮ (0) ವಿಕೆಟ್ ಉರುಳಿದ ಬಳಿಕ ರೋಹಿತ್ ಶರ್ಮ (35) ಮತ್ತು ಸೂರ್ಯಕುಮಾರ್ (36 ಎಸೆತಗಳಿಂದ 51 ರನ್, 3 ಬೌಂಡರಿ, 2 ಸಿಕ್ಸ್) ಮುಂಬೈ ನೆರವಿಗೆ ನಿಂತರು. 3ನೇ ವಿಕೆಟಿಗೆ 53 ರನ್ ಹರಿದು ಬಂತು.
ಡೆಲ್ಲಿ ಬೌಲರ್ಸ್ ಮುಂಬೈಗೆ ಬಲವಾದ ಕಡಿವಾಣ ಹಾಕುತ್ತ ಹೋದರು. ಅದರಲ್ಲೂ ನಾಯಕ ಅಕ್ಷರ್ ಪಟೇಲ್ ಅವರ ಬೌಲಿಂಗ್ ಅತ್ಯಂತ ಬಿಗಿಯಾಗಿತ್ತು. 4 ಓವರ್ ಗಳಲ್ಲಿ ಅವರು ನೀಡಿದ್ದು ಕೇವಲ 22 ರನ್. ವೇಗಿಗಳಾದ ಎನ್ಗಿಡಿ, ಮುಕೇಶ್ ಕುಮಾರ್ ಮತ್ತು ನಟರಾಜನ್ 4 ವಿಕೆಟ್ ಹಂಚಿಕೊಂಡರು.

