Dailyhunt
IPL 2026:ಇಂದು ಕ್ಯಾಪಿಟಲ್ಸ್‌ಗೆ ಬಲಿಷ್ಠ ಮುಂಬೈ ಎದುರಾಳಿ: ತವರಿನಲ್ಲಿ ಗೆಲ್ಲಲು ಡೆಲ್ಲಿ ತವಕ

IPL 2026:ಇಂದು ಕ್ಯಾಪಿಟಲ್ಸ್‌ಗೆ ಬಲಿಷ್ಠ ಮುಂಬೈ ಎದುರಾಳಿ: ತವರಿನಲ್ಲಿ ಗೆಲ್ಲಲು ಡೆಲ್ಲಿ ತವಕ

ಹೊಸದಿಲ್ಲಿ: ಶನಿವಾರ ದಿಲ್ಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌, 5 ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್ ಅನ್ನು ಎದುರುಗೊಳ್ಳಲಿದೆ. ಅಗ್ರ ಬ್ಯಾಟಿಂಗ್‌ ಕ್ರಮಾಂಕದ ಪ್ರದರ್ಶನದಲ್ಲಿ ಸುಧಾರಣೆ ಕಂಡರೆ ಡೆಲ್ಲಿಗೆ ತವರಿನಲ್ಲಿ ಗೆಲುವು ದಾಖಲಿಸಲು ಅವಕಾಶವಿದೆ.

ಹಿಂದಿನ ಪಂದ್ಯಗಳಲ್ಲಿ ಎರಡೂ ತಂಡಗಳು ಜಯ ಸಾಧಿಸಿದ್ದವು. ಮುಂಬೈ ಇಂಡಿಯನ್ಸ್‌ ತಂಡ ಕೋಲ್ಕತಾ ನೈಟ್‌ರೈಡರ್ಸ್‌ ಅನ್ನು ಕೆಡವಿ ಶುಭಾರಂಭ ಮಾಡಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧ ಗೆದ್ದಿತ್ತು. ಆದರೆ ಆ ಪಂದ್ಯದಲ್ಲಿ ಡೆಲ್ಲಿ ಅಗ್ರ ಕ್ರಮಾಂಕದ ಆಟಗಾರ, ಕನ್ನಡಿಗ ಕೆ. ಎಲ್‌. ರಾಹುಲ್‌ (0), ಪಥುಮ್‌ ನಿಸ್ಸಂಕ (1), ನಿತೀಶ್‌ ರಾಣಾ (15) ವೈಫಲ್ಯ ಅನುಭವಿಸಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸಮೀರ್‌ ರಿಝ್ವಿ (70*) ಮತ್ತು ಟ್ರಿಸ್ಟನ್‌ ಸ್ಟಬ್ಸ್‌ (39) ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರಿಂದ ಡೆಲ್ಲಿ ಆ ಪಂದ್ಯವನ್ನು 6 ವಿಕೆಟ್‌ನಿಂದ ಗೆದ್ದಿತ್ತು. ಮುಂಬೈ ವಿರುದ್ಧ ಡೆಲ್ಲಿಯ ಅಗ್ರಕ್ರಮಾಂಕದಲ್ಲಿ ಸುಧಾರಣೆ ಕಾಣದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ.

ಅಕ್ಷರ್‌ ಪಟೇಲ್‌ ನಾಯಕತ್ವದಲ್ಲಿರುವ ಡೆಲ್ಲಿ ಪರ ಈ ಬಾರಿ ರಾಹುಲ್‌, ಸ್ಟಬ್ಸ್‌, ಡೇವಿಡ್‌ ಮಿಲ್ಲರ್‌, ಲುಂಗಿ ಎನ್‌ಗಿಡಿ, ಕರ್ನಾಟಕದ ವೈಶಾಖ್‌ ವಿಜಯ್‌ ಕುಮಾರ್‌ ಮಿಂಚುವ ನಿರೀಕ್ಷೆಯಿದೆ. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ನಾಯಕರಾಗಿರುವ ಮುಂಬೈ ಪರ ರಿಯಾನ್ ರಿಕಲ್ಟನ್‌, ರೋಹಿತ್‌ ಶರ್ಮಾ, ತಿಲಕ್‌ ವರ್ಮಾ, ನಮನ್‌ ಧಿರ್‌, ಜಸ್‌ಪ್ರೀತ್‌ ಬುಮ್ರಾ, ಟ್ರೆಂಟ್‌ ಬೌಲ್ಟ್‌ ಗಮನ ಸೆಳೆಯಬಹುದು.

ಮುಖಾಮುಖಿ

ಒಟ್ಟು ಪಂದ್ಯ: 37

ಡೆಲ್ಲಿ ಜಯ: 16

ಮುಂಬೈ ಜಯ: 21

ಅಂಕಣ ಗುಟ್ಟು

ದಿಲ್ಲಿಯ ಅರುಣ್‌ ಜೇಟ್ಲಿ ಮೈದಾನ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಹೊಂದಿದೆ. ಇಲ್ಲಿ ಶಾರ್ಟ್‌ ಬೌಂಡರಿಗಳಿರುವ ಕಾರಣ ಎರಡೂ ಇನಿಂಗ್ಸ್‌ಗಳಲ್ಲಿ ಸಿಕ್ಸರ್‌ಗಳ ಮಳೆ ಸುರಿದರೆ ಅಚ್ಚರಿಯಿಲ್ಲ. ಕಳೆದ ವರ್ಷ ಇದೇ ಮೈದಾನದಲ್ಲಿ ಹೈದರಾಬಾದ್‌ ತಂಡ ಐಪಿಎಲ್‌ನ ಗರಿಷ್ಠ ಮೊತ್ತ (278) ಪೇರಿಸಿತ್ತು.

ಸಂಭಾವ್ಯ ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್: ಕೆ. ಎಲ್. ರಾಹುಲ್ (ವಿ.ಕೀ.), ಪಥುಮ್‌ ನಿಸ್ಸಂಕ, ನಿತೀಶ್ ರಾಣಾ, ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ವಿಪ್ರಾಜ್ ನಿಗಮ್, ಲುಂಗಿ ಎನ್‌ಗಿಡಿ, ಕುಲದೀಪ್ ಯಾದವ್, ಟಿ. ನಟರಾಜನ್, ಮುಕೇಶ್ ಕುಮಾರ್.

ಮುಂಬೈ ಇಂಡಿಯನ್ಸ್: ರಿಯಾನ್ ರಿಕಲ್ಟನ್ (ವಿ.ಕೀ.), ರೋಹಿತ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಶರ್ಫೇನ್ ರುದರ್‌ಫೋರ್ಡ್, ಶಾರ್ದೂಲ್ ಠಾಕೂರ್, ಮಯಾಂಕ್ ಮಾರ್ಕಂಡೆ, ಎ. ಎಂ. ಗಜನ್‌ಫರ್, ಟ್ರೆಂಟ್ ಬೌಲ್ಟ್, ಜಸ್ ಪ್ರೀತ್ ಬುಮ್ರಾ

ಸ್ಥಳ: ದಿಲ್ಲಿ

ಆರಂಭ: ಅ. 3.30

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Dailyhunt
Disclaimer: This content has not been generated, created or edited by Dailyhunt. Publisher: Udayavani