ಮುಂಬೈ: 2027 ರಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಭಾರತೀಯ ಕ್ರಿಕೆಟ್ ದಂತಕಥೆಯೊಬ್ಬರು ತಮ್ಮ ಮೊದಲ ಕೋಚಿಂಗ್ ಅವಧಿಗೆ ಸಜ್ಜಾಗುತ್ತಿದ್ದಾರೆ. ವರದಿಗಳ ಪ್ರಕಾರ, ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಐಪಿಎಲ್ 2027 ಕ್ಕೂ ಮೊದಲು ತಾನು ಈ ಹಿಂದೆ ಆಡಿದ್ದ ತಂಡವೊಂದರ ಕೋಚ್ ಆಗಲಿದ್ದಾರೆ.
ಎಡಗೈ ಸ್ಟೈಲಿಶ್ ಆಟಗಾರ ಯುವಿ 2008ರಿಂದ 2019ರವರೆಗೆ ಐಪಿಎಲ್ ನಲ್ಲಿ ಆಡಿದ್ದಾರೆ. 132 ಪಂದ್ಯಗಳಲ್ಲಿ ಅವರು 2,750 ರನ್ ಗಳಿಸಿದ್ದಾರೆ. ಅಲ್ಲದೆ 32 ವಿಕೆಟ್ ಗಳನ್ನೂ ಪಡೆದಿದ್ದಾರೆ. ಆರು ವಿಭಿನ್ನ ಫ್ರಾಂಚೈಸಿಗಳಿಗೆ ಆಡಿದ್ದ ಅವರು ಎರಡು ಐಪಿಎಲ್ ಟ್ರೋಫಿಗಳನ್ನು ಗೆದ್ದರು. ಸನ್‌ರೈಸರ್ಸ್ ಹೈದರಾಬಾದ್ (2016) ಮತ್ತು ಮುಂಬೈ ಇಂಡಿಯನ್ಸ್ (2019) ತಂಡಗಳ ಗೆಲುವಿನ ಭಾಗವಾಗಿದ್ದರು.
ಐಪಿಎಲ್ ನಿಂದ ನಿವೃತ್ತಿ ಹೊಂದಿದ ಬಳಿಕ ಯುವಿ ವೃತ್ತಿಪರವಾಗಿ ತೊಡಗಿಸಿಕೊಂಡಿಲ್ಲ. ಕಾಮೆಂಟರಿಯಲ್ಲಿದ್ದರೂ ಕೋಚಿಂಗ್ ನತ್ತ ಮನ ಮಾಡಿರಲಿಲ್ಲ. ಇದೀಗ ಯುವರಾಜ್ ಸಿಂಗ್ ಅವರು ಕೋಚಿಂಗ್ ಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಯುವರಾಜ್ ಸಿಂಗ್ ಅವರು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಕೋಚಿಂಗ್ ಸಿಬ್ಬಂದಿಯನ್ನು ಸೇರಲಿದ್ದಾರೆ. ಅಲ್ಲದೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡಾ ಕೋಚ್ ಆಗಿ ಮರಳುವುದು ಸನ್ನಿಹಿತವಾಗಿದೆ. ಯುವರಾಜ್ ಅವರನ್ನು ಡಗೌಟ್‌ನಲ್ಲಿಯೂ ಸೇರಿಸಿಕೊಳ್ಳಲು ಗಂಗೂಲಿ ಬಯಸುತ್ತಿದ್ದಾರೆ ಎನ್ನಲಾಗಿದೆ.
ವರದಿಯ ಪ್ರಕಾರ, ಯುವರಾಜ್ ಫ್ರಾಂಚೈಸಿ ಸೇರಲು ಸಜ್ಜಾಗಿದ್ದಾರೆ ಎಂದು ಹಿರಿಯ ಡಿಸಿ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಜೆಎಸ್‌ಡಬ್ಲ್ಯೂ ಗ್ರೂಪ್ ಐಪಿಎಲ್ 2027 ರಿಂದ ಫ್ರಾಂಚೈಸಿಯ ಕಾರ್ಯಾಚರಣೆಗಳ ನಿಯಂತ್ರಣವನ್ನು ವಹಿಸಿಕೊಂಡಂತೆ ಹಲವು ಬದಲಾವಣೆಗಳು ನಡೆಯಲಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಜಿಎಂಆರ್ ಗ್ರೂಪ್ ಮತ್ತು ಜೆಎಸ್‌ಡಬ್ಲ್ಯೂ ಗ್ರೂಪ್ ಎರಡು ವರ್ಷಗಳ ಕಾಲ ಪರ್ಯಾಯವಾಗಿ ನಡೆಸುತ್ತಿವೆ. ಜಿಎಂಆರ್ 2025 ಮತ್ತು 2026 ರಲ್ಲಿ ತಂಡವನ್ನು ಮುನ್ನಡೆಸಿದ್ದರಿಂದ, ಮುಂದಿನ ಎರಡು ವರ್ಷಗಳ ಕಾಲ ಜೆಎಸ್‌ಡಬ್ಲ್ಯೂ ವಹಿಸಿಕೊಳ್ಳಲಿದೆ.
ಹಿಂದಿನ ಜೆಎಸ್‌ಡಬ್ಲ್ಯೂ ಚಕ್ರದಲ್ಲಿ ಸೌರವ್ ಗಂಗೂಲಿ ಫ್ರಾಂಚೈಸಿಯ ಸಹಾಯಕ ಸಿಬ್ಬಂದಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಹೀಗಾಗಿ 2027 ಕ್ಕೆ ಮರಳುವ ಸಾಧ್ಯತೆಯಿದೆ. ಗಂಗೂಲಿ ಕಳೆದ ಎರಡು ಋತುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಕೆಟ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು, ಈ ಅವಧಿಯಲ್ಲಿ ಹೇಮಾಂಗ್ ಬದಾನಿ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಯಿತು.

