Wednesday, 05 Aug, 6.35 am ಉದಯವಾಣಿ

ಟಾಪ್ 10 ಸುದ್ದಿ
IPL‌ ಪ್ರಾಯೋಜಕತ್ವದಿಂದ ವಿವೋ ಹೊರಕ್ಕೆ

ಹೊಸದಿಲ್ಲಿ: ಮೊನ್ನೆ ರವಿವಾರವಷ್ಟೇ ಚೀನ ಮೊಬೈಲ್‌ ಕಂಪನಿ ವಿವೋವನ್ನು ಐಪಿಎಲ್‌ ಶೀರ್ಷಿಕೆ ಪ್ರಾಯೋಜಕ ಸ್ಥಾನದಲ್ಲಿ ಉಳಿಸಿಕೊಳ್ಳುತ್ತೇನೆಂದು ಬಿಸಿಸಿಐ ಹೇಳಿತ್ತು.

ಅದರ ಬೆನ್ನಲ್ಲೇ ಸ್ವದೇಶಿ ಜಾಗರಣ ಮಂಚ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕೂಟಕ್ಕೆ ಜನ ಬಹಿಷ್ಕಾರ ಹಾಕಬೇಕೆಂದು ಆಗ್ರಹಿಸಿತ್ತು.

ಈ ಆಕ್ರೋಶ ಪರಿಣಾಮ ಬೀರಿದೆ. ಈ ವರ್ಷದ ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವದಿಂದ ವಿವೋ ತಾನಾಗಿಯೇ ಹೊರಹೋಗುವುದು ಬಹುತೇಕ ಖಚಿತವಾಗಿದೆ.

ಬಿಸಿಸಿಐ ಮತ್ತು ವಿವೋ ಪರಸ್ಪರ ಮಾತುಕತೆ ಮೂಲಕ ಈ ವರ್ಷ ದೂರಾಗಿ, ಮುಂದಿನವರ್ಷ ಪರಿಸ್ಥಿತಿ ಸುಧಾರಿಸಿದರೆ ಮತ್ತೆ ಒಂದಾಗುವ ಸುಳಿವು ಸಿಕ್ಕಿದೆ.

ಬಿಸಿಸಿಐ-ವಿವೋಗೆ ದಾರಿಯೇನು?
2018ರಿಂದ 2022ರವರೆಗಿನ ಒಟ್ಟು ಐದು ವರ್ಷಗಳ ಅವಧಿಗೆ ವಿವೋ, ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವ ಹೊಂದಿದೆ. ಒಟ್ಟು 2,199 ಕೂಟ ರೂ. ಮೊತ್ತ. ವಾರ್ಷಿಕವಾಗಿ ಅದು ಬಿಸಿಸಿಐಗೆ 440 ಕೋಟಿ ರೂ. ನೀಡಲಿದೆ. ಈಗಿನ ಯೋಜನೆ ಪ್ರಕಾರ ವಿವೋ ಈ ವರ್ಷದ ಪ್ರಾಯೋಜಕತ್ವದಿಂದ ಮಾತ್ರ ಹಿಂದೆ ಸರಿಯಲಿದೆ. ಮುಂದೆ ಪರಿಸ್ಥಿತಿ ಸುಧಾರಿಸಿದರೆ ಮತ್ತೆ ಇಬ್ಬರ ನಡುವೆ ಒಪ್ಪಂದ ಮುಂದುವರಿಯಲಿದೆ.

ಆಗ ಕೆಲವು ಷರತ್ತುಗಳೊಂದಿಗೆ ಮುಂದಿನ ಮೂರುವರ್ಷಕ್ಕೆ ಬಿಸಿಸಿಐ-ವಿವೋ ಒಪ್ಪಂದ ನವೀಕರಣಗೊಳ್ಳಲಿದೆ. ಅಂದರೆ ಪ್ರಸ್ತುತ 2022ರವರೆಗೆ ಇರುವ ಒಪ್ಪಂದ 2023ರವರೆಗೆ ವಿಸ್ತರಿಸಲ್ಪಡುತ್ತದೆ. ಈ ವರ್ಷಕ್ಕಾಗಿ ಎರಡು ಭಾರತೀಯ ಕಂಪನಿಗಳು ಪ್ರಾಯೋಜಕತ್ವ ವಹಿಸಲು ಮುಂದೆ ಬಂದಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಆದರೆ 440 ಕೋಟಿ ರೂ. ಮೊತ್ತ ಸಿಗುವುದು ಅನುಮಾನವಾಗಿದೆ.

ಸ್ವದೇಶಿ ಜಾಗರಣ ಮಂಚ್‌ ಹೇಳಿದ್ದೇನು?
ಚೀನಾದಿಂದ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಚೀನವನ್ನು ಭಾರತದ ಆರ್ಥಿಕತೆಯಿಂದ ಹೊರಹಾಕಬೇಕೆಂದು ಕೇಂದ್ರ ಸರಕಾರ ಎಲ್ಲ ಯತ್ನ ಮಾಡುತ್ತಿದೆ. ದೇಶಾದ್ಯಂತ ಜನ ಚೀನ ಉತ್ಪನ್ನಗಳನ್ನು ತಿರಸ್ಕರಿಸುತ್ತಿದ್ದಾರೆ. ಆದರೂ ಬಿಸಿಸಿಐ, ಚೀನ ಕಂಪನಿ ವಿವೋವನ್ನು ಉಳಿಸಿಕೊಳ್ಳಲು ಹೊರಟಿದೆ.

ಇದು ಬಿಸಿಸಿಐಗೆ ಭಾರತೀಯ ಯೋಧರ ಮೇಲೆ ಕಿಂಚಿತ್ತೂ ಗೌರವವಿಲ್ಲ ಎನ್ನುವುದರ ಸಂಕೇತ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿವಾರ ಸಂಘಟನೆಗಳಲ್ಲೊಂದಾದ ಸ್ವದೇಶಿ ಜಾಗರಣ ಮಂಚ್‌ ಹೇಳಿತ್ತು. ಬಿಸಿಸಿಐ ತನ್ನ ನಿಲುವನ್ನು ಪುನರ್ಪರಿಶೀಲನೆ ಮಾಡಬೇಕು. ಇಲ್ಲವಾದರೆ ಜನರು ಕೂಟವನ್ನು ಬಹಿಷ್ಕರಿಸಬೇಕು, ಸರಕಾರ ಕೂಟದ ಮಾನ್ಯತೆಯನ್ನು ರದ್ದು ಮಾಡಬೇಕು ಎಂದು ಸ್ವದೇಶಿ ಜಾಗರಣ ಮಂಚ್‌ ಸಹ ಸಂಘಟನಾ ಕಾರ್ಯದರ್ಶಿ ಡಾ.ಅಶ್ವಾನಿ ಮಹಾಜನ್‌ ಹೇಳಿದ್ದರು.

ಐಪಿಎಲ್‌ ಸಮಯ ಬದಲಾವಣೆಗೆ ಸ್ವಾಗತ
ಯುಎಇಯಲ್ಲಿ ನಡೆಯಲಿರುವ ಈ ಬಾರಿಯ ಐಪಿಎಲ್‌ ಕೂಟದ ರಾತ್ರಿ ಪಂದ್ಯಗಳನ್ನು ಅರ್ಧ ಗಂಟೆ ಬೇಗ ಆರಂಭಿಸುವ ನಿರ್ಧಾರವನ್ನು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಸ್ವಾಗತಿಸಿದ್ದಾರೆ. ಇಷ್ಟು ವರ್ಷ ಕಾಲ ರಾತ್ರಿ ಪಂದ್ಯ 8 ಗಂಟೆಗೆ ಆರಂಭವಾಗುತ್ತಿತ್ತು. ಈ ಬಾರಿ 7.30ಕ್ಕೆ ಆರಂಭವಾಗಲಿದೆ. 7 ಗಂಟೆಗೆ ಟಾಸ್‌ ಹಾರಿಸಲಾಗುತ್ತದೆ.

‘ಐಪಿಎಲ್‌ ಪಂದ್ಯಗಳನ್ನು 7.30ಕ್ಕೆ ಆರಂಭಿಸಲು ತೀರ್ಮಾನಿಸಿದ್ದೊಂದು ಉತ್ತಮ ನಡೆ. ಭಾರತದಲ್ಲಿ ಇದಕ್ಕಿಂತ ವಿಳಂಬವಾಗಿ ಪಂದ್ಯಗಳನ್ನು ಆರಂಭಿಸುವುದು ಸೂಕ್ತವಲ್ಲ. ಇದರಿಂದ 11 ಗಂಟೆಗೆ ಪಂದ್ಯ ಮುಗಿದು ಹೋಗುತ್ತದೆ. ಮೊದಲಿನಂತೆ 11.30, 11.45ರ ತನಕ ಪಂದ್ಯ ಸಾಗುವುದು ತಪ್ಪುತ್ತದೆ. ಇದರಿಂದ ಎಲ್ಲರಿಗೂ ಅನುಕೂಲ’ ಎಂದು ಯೂಟ್ಯೂಬ್‌ ಚಾನೆಲ್‌ ಒಂದರಲ್ಲಿ ಚೋಪ್ರಾ ಹೇಳಿದರು.

ಭಾರತೀಯ ಕಾಲಮಾನ
ಐಪಿಎಲ್‌ ಟೂರ್ನಿ ಯಾವ ದೇಶದಲ್ಲೇ ನಡೆದರೂ ಪಂದ್ಯಗಳನ್ನು ಭಾರತೀಯ ಕಾಲಮಾನಕ್ಕೆ ಹೊಂದಿಸಿಕೊಳ್ಳಲಾಗುತ್ತದೆ. ಪ್ರಸಾರ ಹಾಗೂ ಆರ್ಥಿಕ ದೃಷ್ಟಿಯಿಂದ ಇದು ಅನುಕೂಲಕರ. ಇದಕ್ಕೆ ಈ ಸಲದ ಯುಎಇ ಕೂಟವೂ ಹೊರತಲ್ಲ. ಯುಎಇ ಸಮಯಕ್ಕಿಂತ ಭಾರತ ಒಂದೂವರೆ ಗಂಟೆ ಮುಂದಿದೆ. ಇದರಂತೆ ಅಲ್ಲಿ ಸಂಜೆ 6 ಗಂಟೆಗೆ ಪಂದ್ಯ ಆರಂಭವಾಗುತ್ತದೆ. ಆಗ ಸಂಜೆಯ ಪಂದ್ಯಗಳನ್ನೂ ಅರ್ಧ ಗಂಟೆ ಬೇಗ ಆರಂಭಿಸಬೇಕಾಗುತ್ತದೆ. ಇವು 3.30ಕ್ಕೆ ಆರಂಭವಾಗುವ ಸಾಧ್ಯತೆ ಇದೆ. ಆಗ ಯುಎಇ ಸಮಯ ಅಪರಾಹ್ನ 2 ಗಂಟೆ ಆಗಿರುತ್ತದೆ.

ಐಪಿಎಲ್‌ಗೆ ಮುನ್ನ ಆಟಗಾರರಿಗೆ 5 ಬಾರಿ ಕೋವಿಡ್ 19 ಪರೀಕ್ಷೆ
ಕೋವಿಡ್ 19 ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್‌ ಅತ್ಯಂತ ಬಿಗುವಾಗಿ ನಡೆಯಲಿದೆ. ಇದಕ್ಕಾಗಿ ಬಿಸಿಸಿಐ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿಯನ್ನು (ಎಸ್‌ಒಪಿ) ಸಿದ್ಧಪಡಿಸಿದೆ. ಇದರ ಪ್ರಕಾರ ಆಟಗಾರನೊಬ್ಬ ತನ್ನ ತಂಡವನ್ನು ಕೂಡಿಕೊಳ್ಳುವ 24 ಗಂಟೆಗೂ ಮೊದಲು, ಒಂದು ವಾರ ಮುನ್ನ ಎರಡು ಬಾರಿ ಪರೀಕ್ಷೆಗೊಳಪಡಬೇಕು. ಯುಎಇಯಲ್ಲಿ ಇನ್ನೂ ಮೂರು ಬಾರಿ ಪರೀಕ್ಷೆಗೊಳಪಟ್ಟ ಅನಂತರ ಮಾತ್ರ ಆತನಿಗೆ ಜೈವಿಕ ಸುರಕ್ಷಾ ವಲಯಕ್ಕೆ ಪ್ರವೇಶ ಸಿಗುತ್ತದೆ. ಅಂದರೆ, ಆಟಗಾರ ಒಟ್ಟು 5 ಬಾರಿ ಪರೀಕ್ಷೆ ಎದುರಿಸಬೇಕಾಗುತ್ತದೆ. ಇನ್ನು ಪಂದ್ಯದ ವೇಳೆ ಪ್ರತೀ 5 ದಿನಕ್ಕೊಮ್ಮೆ ಕೋವಿಡ್ 19 ಟೆಸ್ಟ್‌ ನಡೆಯಲಿದೆ.

14 ದಿನ ಏಕಾಂತವಾಸ
ಭಾರತದಲ್ಲಿ ಎರಡು ಬಾರಿ ಪರೀಕ್ಷೆ ನಡೆದಾಗ ಕೋವಿಡ್ 19 ಪತ್ತೆಯಾದರೆ, ಆತ 14 ದಿನ ಏಕಾಂತವಾಸದಲ್ಲಿ ಚಿಕಿತ್ಸೆ ಪಡೆಯಬೇಕು. ಈ ಅವಧಿ ಮುಗಿದ ಮೇಲೆ 24 ಗಂಟೆಯೊಳಗೆ ಪುನಃ ಎರಡು ಬಾರಿ ಪರೀಕ್ಷೆಗೊಳಪಡಬೇಕು. ಆಗ ಕೋವಿಡ್ 19 ಇಲ್ಲ ಎಂದು ಸಾಬೀತಾದರೆ ಮಾತ್ರ ಯುಎಇಗೆ ತೆರಳಬಹುದು.

ಯುಎಇ ನಿಯಮ
ಯುಎಇಗೆ ತೆರಳಿದ ಅನಂತರ ಆಟಗಾರರೆಲ್ಲ ಒಂದು ವಾರ ಏಕಾಂತದಲ್ಲಿರಬೇಕಾಗುತ್ತದೆ. ಅಲ್ಲಿ ಮೂರು ಬಾರಿ ಪರೀಕ್ಷೆ ನಡೆಯುತ್ತದೆ. ಅಷ್ಟೂ ಬಾರಿ ಆತನಿಗೆ ಕೋವಿಡ್ 19 ಇಲ್ಲದಿರುವುದು ಖಚಿತವಾದರೆ ಮಾತ್ರ, ಜೈವಿಕ ಸುರಕ್ಷಾ ವಲಯಕ್ಕೆ ಪ್ರವೇಶ ದೊರೆಯುತ್ತದೆ.

ಕುಟುಂಬಕ್ಕೆ ಅವಕಾಶ?
ಆಟಗಾರರ ಕುಟುಂಬಕ್ಕೆ ಕೂಟದ ವೇಳೆ ಪ್ರವೇಶ ನೀಡುವುದು, ಸಂಬಂಧಪಟ್ಟ ಫ್ರಾಂಚೈಸಿಗಳಿಗೆ ಬಿಟ್ಟದ್ದು. ಕುಟುಂಬದ ಅಷ್ಟೂ ಸದಸ್ಯರು ಬಿಗಿಯಾದ ಕೋವಿಡ್ 19 ಎಸ್‌ಒಪಿ ಅನುಸರಿಸುವುದು ಕಡ್ಡಾಯ ಎಂದು ಬಿಸಿಸಿಐ ತಿಳಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top