ಚೆನ್ನೈ: ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ (50) ನೆರವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡ ಈ ಐಪಿಎಲ್ ಆವೃತ್ತಿಯಲ್ಲಿ 2ನೇ ಜಯ ದಾಖಲಿಸಿದೆ. ಶುಕ್ರವಾರದ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ 5 ವಿಕೆಟ್‌ಗಳ ಸುಲಭ ಗೆಲುವು ಕಂಡಿತು.
ಇದು ಈ ಆವೃತ್ತಿಯಲ್ಲಿ ಪಂಜಾಬ್‌ನ ಸತತ 2ನೇ ಜಯವೂ ಹೌದು. ಆರಂಭಿಕ ಪಂದ್ಯದಲ್ಲಿ ಅದು ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದಿತ್ತು.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 209 ರನ್ ಬಾರಿಸಿತು. ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ 18.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 210 ರನ್ ಪೇರಿಸಿತು.
ಪಂಜಾಬ್ ಪರ ಆರಂಭಿಕರಾಗಿ ಆಡಿದ ಸಂಜು ಸ್ಯಾಮ್ಸನ್ 7 ರನ್‌ಗೆ ನಿರಾಸೆ ಅನುಭವಿಸಿದರಾದರೂ ನಾಯಕ ಋತುರಾಜ್ ಗಾಯಕ್ವಾಡ್ 28, ಆಯುಷ್ ಮ್ಹಾತ್ರೆ 73, ಶಿವಂ ದುಬೆ 27 ಎಸೆತಗಳಲ್ಲಿ ಅಜೇಯ 45, ಸರ್ಫರಾಜ್ ಖಾನ್ 12 ಎಸೆತಕ್ಕೆ 32 ರನ್ ಸಿಡಿಸಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟಿತು. ಆದರೆ ಪಂಜಾಬ್‌ಗೆ ಅಗ್ರಕ್ರಮಾಂಕದ ಬ್ಯಾಟರ್‌ಗಳ ಬೆಂಬಲ ಸಿಕ್ಕಿತು. ಪ್ರಿಯಾಂಶ್ ಆರ್ಯ 39, ಪ್ರಭ್‌ಸಿಮ್ರಾನ್ ಸಿಂಗ್ 43, ಕೂಪರ್ ಕನೊಲಿ 36 ರನ್ ಜೊತೆಗೆ ಶ್ರೇಯಸ್ 50 ರನ್ ಸೇರಿಸಿದ್ದರಿಂದ ತಂಡ ಗೆಲುವಿನೆಡೆಗೆ ಸಾಗಿತು.
19 ವರ್ಷದೊಳಗೆ 2 ಶತಕ: ಮ್ಹಾತ್ರೆಗೆ ಜಂಟಿ 2ನೇ ಸ್ಥಾನ
ಪಂದ್ಯದಲ್ಲಿ 73 ರನ್ ಬಾರಿಸಿದ 18 ವರ್ಷದ ಆಯುಷ್ ಮ್ಹಾತ್ರೆ, ಐಪಿಎಲ್‌ನಲ್ಲಿ 19 ವರ್ಷ ತುಂಬುವುದರೊಳಗಾಗಿ ಗರಿಷ್ಠ ಅರ್ಧಶತಕ ಬಾರಿಸಿದವರ ಪಟ್ಟಿಯಲ್ಲಿ ಪೃಥ್ವಿ ಶಾ ಜೊತೆಗೆ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವೈಭವ್ ಸೂರ್ಯವಂಶಿ 3 ಬಾರಿ ಅರ್ಧಶತಕ ದಾಖಲಿಸಿದ್ದಾರೆ.
2ನೇ ಗರಿಷ್ಠ ಚೇಸ್:
210 ರನ್ ಚೇಸ್ ಮಾಡಿ ಗೆದ್ದಿರುವ ಪಂಜಾಬ್ ತನ್ನ 2ನೇ ಗರಿಷ್ಠ ಚೇಸಿಂಗ್ ಸಾಧನೆ ಮಾಡಿದೆ. ಕಳೆದ ವರ್ಷ ಕೋಲ್ಕತಾ ವಿರುದ್ಧ 262 ರನ್ ಚೇಸ್ ಮಾಡಿದ್ದು ಅದರ ಗರಿಷ್ಠ ಸಾಧನೆ.
4 ಬಾರಿ ಗೆಲುವು:
ಚೆಪಾಕ್‌ನಲ್ಲಿ ಚೆನ್ನೈಯನ್ನು 4ನೇ ಬಾರಿಸಿ ಸೋಲಿಸಿರುವ ಪಂಜಾಬ್ ಈ ಮೈದಾನದಲ್ಲಿ ಚೆನ್ನೈ ವಿರುದ್ಧ ಗರಿಷ್ಠ ಸತತ ಜಯದಲ್ಲಿ 2ನೇ ಸ್ಥಾನಕ್ಕೇರಿದೆ. ಅಗ್ರಸ್ಥಾನದಲ್ಲಿರುವ ಮುಂಬೈ ಸತತ 5 ಬಾರಿ ಗೆದ್ದಿತ್ತು.
ಪಂದ್ಯದ ತಿರುವು:
ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಬೆಂಬಲದ ಮೂಲಕವೇ ಪಂಜಾಬ್ ಪಂದ್ಯ ಗೆದ್ದಿತು. ತಂಡದ ಮೊದಲ ವಿಕೆಟ್ ಉರುಳುವಷ್ಟರಲ್ಲಿ ಪಂಜಾಬ್ 61 ರನ್ ಗಳಿಸಿತ್ತು. ಈ ರನ್‌ಗಳು ಪ್ರಿಯಾಂಶ್, ಪ್ರಭ್‌ಸಿಮ್ರಾನ್‌ರ ಆರಂಭಿಕ ಜೊತೆಯಾಟದಿಂದ ಬಂದಿತ್ತು.
ಇಬ್ಬರೇ ವಿದೇಶಿ ಆಟಗಾರರನ್ನು ಕಣಕ್ಕಿಳಿಸಿದ ಸಿಎಸ್‌ಕೆ
ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೇವಲ ಇಬ್ಬರೇ ವಿದೇಶಿ ಆಟಗಾರರನ್ನು ಕಣಕ್ಕಿಳಿಸಿತ್ತು. ಅವರೆಂದರೆ ಅಫ್ಘಾನಿಸ್ತಾನ್‌ನ ನೂರ್ ಅಹ್ಮದ್ ಮತ್ತು ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ. ಐಪಿಎಲ್‌ನಲ್ಲಿ ತಂಡವೊಂದು ಆಡುವ ಬಳಗದಲ್ಲಿ ಕೇವಲ ಒಬ್ಬ ಅಥವಾ ಇಬ್ಬರು ಆಟಗಾರರನ್ನು ಕಣಕ್ಕಿಳಿಸಿದ 7ನೇ ನಿದರ್ಶನವಿದು. ಮತೀಶ ಪತಿರಣ, ಡೆವಾನ್ ಕಾನ್ವೆ, ಸ್ಯಾಮ್ ಕರನ್ ಮತ್ತಿತರ ವಿದೇಶಿ ಆಟಗಾರರು ಈ ಬಾರಿ ಲಭ್ಯರಿಲ್ಲದ ಕಾರಣ ಸಿಎಸ್‌ಕೆ ಇಬ್ಬರನ್ನಷ್ಟೇ ಕಣಕ್ಕಿಳಿಸಿತ್ತು. ಇದಕ್ಕೂ ಮುನ್ನ ಪಂಜಾಬ್ 1 (2024), ಕೋಲ್ಕತಾ 2 (2011), ಡೆಲ್ಲಿ 2 (2022), ಮುಂಬೈ 2 (2022, 2024ರಲ್ಲಿ 2 ಬಾರಿ) ಆಟಗಾರರನ್ನು ಇಳಿಸಿತ್ತು.

