Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್ ಜತೆಗಿನ ಶಾಂತಿ ಒಪ್ಪಂದ ಮುಗಿದ ಅಧ್ಯಾಯ: ಗುಡುಗಿದ ಡೊನಾಲ್ಡ್ ಟ್ರಂಪ್

ಇರಾನ್ ಜತೆಗಿನ ಶಾಂತಿ ಒಪ್ಪಂದ ಮುಗಿದ ಅಧ್ಯಾಯ: ಗುಡುಗಿದ ಡೊನಾಲ್ಡ್ ಟ್ರಂಪ್

ಅಂಕಾರಾ: ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕ ಇರಾನ್ ಮೇಲೆ ಹೊಸದಾಗಿ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ, ''ಇರಾನ್‌ನೊಂದಿಗೆ ಮಾಡಿಕೊಂಡಿದ್ದ ಮಧ್ಯಂತರ ಶಾಂತಿ ಒಪ್ಪಂದ (MoU) ಇನ್ನು ಜಾರಿಯಲ್ಲಿರುವುದಿಲ್ಲ'' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ.

ಟರ್ಕಿಯಲ್ಲಿನ ನ್ಯಾಟೊ ಶೃಂಗಸಭೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, "ನನಗೆ ಆ ದೇಶದೊಂದಿಗೆ ಇನ್ನು ಯಾವುದೇ ವ್ಯವಹಾರ ನಡೆಸುವ ಆಸಕ್ತಿ ಇಲ್ಲ" ಎಂದು ಗುಡುಗಿದ್ದಾರೆ.

ಮೂರು ವಾರಗಳ ಹಿಂದೆ ಇರಾನ್‌ನೊಂದಿಗೆ ಸಹಿ ಮಾಡಿದ್ದ ಮಧ್ಯಂತರ ಶಾಂತಿ ಒಪ್ಪಂದದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್ "ಇರಾನ್ ನಾಯಕರು ವಿಕೃತ ಮನಸ್ಥಿತಿಯವರು, ಅಸ್ವಸ್ಥ ಮನೋಭಾವದವರು. ನನ್ನ ದೃಷ್ಟಿಯಲ್ಲಿ ಆ ಒಪ್ಪಂದ ಮುಗಿದ ಅಧ್ಯಾಯ. ಇನ್ನು ಅವರೊಂದಿಗೆ ಯಾವುದೇ ರೀತಿಯ ವ್ಯವಹಾರ ಮಾಡಲು ನಾನು ಬಯಸುವುದಿಲ್ಲ.ಅವರು ಅತ್ಯಂತ ಅಪಾಯಕಾರಿ ಜನರು. ಅವರ ಬಳಿ ಅಣ್ವಸ್ತ್ರ ಇದ್ದರೆ ಅದನ್ನು ಬಳಸಲು ಹಿಂಜರಿಯುವುದಿಲ್ಲ'' ಎಂದು ಹೇಳಿದರು.

''ಇರಾನ್ ನಾಯಕತ್ವದೊಂದಿಗೆ ಮಾತುಕತೆ ನಡೆಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಮಾತುಕತೆ ಮಾಡುವುದು ಸಮಯ ವ್ಯರ್ಥ" ಎಂದು ಟ್ರಂಪ್ ಅಭಿಪ್ರಾಯಪಟ್ಟರು.

ಯುದ್ಧ ಅಂತ್ಯಗೊಳಿಸುವ ಉದ್ದೇಶದಿಂದ ಉಭಯ ದೇಶಗಳು ಮಧ್ಯಂತರ ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಅದರ ನಂತರವೂ ಕದನ ವಿರಾಮವನ್ನು ಕಾಯ್ದುಕೊಳ್ಳುವುದು ಕಷ್ಟಕರವಾಗಿದೆ. ಜಾಗತಿಕ ಇಂಧನ ಸಾಗಣೆಯ ಶೇ.20ರಷ್ಟು ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವುದರಿಂದ, ಅದರ ಮೇಲಿನ ತನ್ನ ನಿಯಂತ್ರಣವನ್ನು ಇರಾನ್ ಒತ್ತಡದ ಅಸ್ತ್ರವಾಗಿ ಬಳಸಲು ಪ್ರಯತ್ನಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Dailyhunt
Disclaimer: This content has not been generated, created or edited by Dailyhunt. Publisher: Udayavani