ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೀವ್ರ ಬೆದರಿಕೆಗಳ ನಡುವೆಯೂ ಇರಾನ್ ತನ್ನ ನಿಲುವಿಗೆ ಬದ್ಧವಾಗಿರುವುದನ್ನು ಶ್ಲಾಘಿಸಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ, ಭಾರತ ಸರ್ಕಾರವು "ದಬ್ಬಾಳಿಕೆ ಮಾಡುವವರನ್ನು ಕಠಿಣವಾಗಿ ಎದುರಿಸುವುದನ್ನು ಕಲಿಯಬೇಕು" ಎಂದು ಆಗ್ರಹಿಸಿದ್ದಾರೆ.
ಇರಾನ್ ತೋರಿದ ಧೈರ್ಯವನ್ನು ಶ್ಲಾಘಿಸಿರುವ ಅವರು, ಭಾರತವು ತನ್ನ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'X' ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಅವರು 'ಇರಾನ್ ವಿಶ್ವಕ್ಕೆ ಧೈರ್ಯ ಎಂದರೇನು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಮೊಯಿತ್ರಾ ಬಣ್ಣಿಸಿದ್ದಾರೆ. "ತೀವ್ರ ಒತ್ತಡದ ನಡುವೆಯೂ ತನ್ನ ನಿಲುವಿಗೆ ಬದ್ಧವಾಗಿರುವುದು ಹೇಗೆ ಎಂಬುದನ್ನು ಇರಾನ್ ಜಗತ್ತಿಗೆ ಸಾಬೀತುಪಡಿಸಿದೆ. ಇರಾನ್ ಪ್ರದರ್ಶಿಸಿದ ಈ ದೃಢತೆ ಇತರ ದೇಶಗಳಿಗೆ ಒಂದು ಉತ್ತಮ ಉದಾಹರಣೆ," ಎಂದು ಅವರು ಹೇಳಿದ್ದಾರೆ.
ಇನ್ನು ಭಾರತದ ನಾಯಕತ್ವದ ಬಗ್ಗೆ ಪ್ರಸ್ತಾಪಿಸಿದ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವ ಶಕ್ತಿಗಳ ಮುಂದೆ ಭಾರತವು ತಲೆಬಾಗಬಾರದು, ಪ್ರಧಾನಿ ಮೋದಿ ಅವರ ನೇತೃತ್ವದ ಭಾರತ ಸರ್ಕಾರವು ಅಂತರಾಷ್ಟ್ರೀಯ ಮಟ್ಟದಲ್ಲಿ ದಬ್ಬಾಳಿಕೆ ಮಾಡುವ ಶಕ್ತಿಗಳ ಮುಂದೆ ಮಣಿಯುತ್ತಿದೆ ಎಂದು ಪರೋಕ್ಷವಾಗಿ ಕಿಚಾಯಿಸಿರುವ ಅವರು, "ನಮ್ಮ ನಾಯಕತ್ವವು ಇಂತಹ ಸಂದರ್ಭಗಳಲ್ಲಿ ದೃಢವಾಗಿ ನಿಲ್ಲುವುದನ್ನು ಕಲಿಯಲಿ" ಎಂದು ಅವರು ಪ್ರತಿಪಾದಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಇರಾನ್ ಜನಸಾಮಾನ್ಯರ ಹೋರಾಟವನ್ನು ಶ್ಲಾಘಿಸಿರುವ ಅವರು, "ಸೇತುವೆಗಳ ಮೇಲೆ ಮಾನವ ಸರಪಳಿ ನಿರ್ಮಿಸುವ ಮೂಲಕ ಇರಾನ್ ಜನರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ಸಾಮಾನ್ಯ ಮನುಷ್ಯನ ಧೈರ್ಯವು 'ಫ್ಯಾಸಿಸ್ಟ್ ಗೂಂಡಾಗಳನ್ನು' ಸೋಲಿಸಲು ಸಾಕು ಎಂಬುದನ್ನು ಈ ಶತಮಾನಕ್ಕೆ ಇರಾನ್ ಜನರು ತೋರಿಸಿಕೊಟ್ಟಿದ್ದಾರೆ," ಎಂದು ಬರೆದಿದ್ದಾರೆ.
ಅಲ್ಲದೆ ತಮ್ಮ ಪೋಸ್ಟ್‌ನ ಕೊನೆಯಲ್ಲಿ 'ಜೈ ಹಿಂದ್' ಎಂದು ಬರೆಯುವ ಮೂಲಕ ದೇಶದ ಹಿತಾಸಕ್ತಿಯನ್ನು ಎತ್ತಿ ಹಿಡಿಯುವಂತೆ ಅವರು ಕರೆ ನೀಡಿದ್ದಾರೆ. ಮಹುವಾ ಮೊಯಿತ್ರಾ ಅವರ ಈ ಹೇಳಿಕೆಗಳು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.

