ಟೆಹ್ರಾನ್: ಪಶ್ಚಿಮ ಏಷ್ಯಾ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ನೈರುತ್ಯ ಇರಾನ್‌ನಲ್ಲಿ ದಾಳಿ ನಡೆಸಲು ಕಳುಹಿಸಲಾದ ಅಮೆರಿಕದ ಎಫ್-15 ಯುದ್ಧ ವಿಮಾನವನ್ನು ಶುಕ್ರವಾರ ಹೊಡೆದುರುಳಿಸಲಾಗಿದ್ದು, ಈ ವಿಮಾನದಲ್ಲಿದ್ದ ಪೈಲಟ್‌ವೊಬ್ಬರು ಪ್ಯಾರಾಚೂಟ್‌ನೊಂದಿಗೆ ಜಿಗಿದಿದ್ದಾರೆ ಎಂದು ವರದಿಯಾಗಿದೆ.
ಒಂದೆಡೆ, ಅಮೆರಿಕದ ಪೈಲಟ್‌ನನ್ನು ಸುರಕ್ಷಿತವಾಗಿ ಕರೆತರಲು ಅಮೆರಿಕ ಸೇನೆಯು ಮತ್ತೊಂದು ಯುದ್ಧ ವಿಮಾನ ಹಾಗೂ 2 ಹೆಲಿಕಾಪ್ಟರ್‌ಗಳಲ್ಲಿ ಹುಡುಕಾಟ ನಡೆಸಿದೆ ಎಂಬಂಥ ವಿಡಿಯೋಗಳು ವೈರಲ್ ಆಗಿವೆ. ಇತ್ತ ಇರಾನ್ ಸಹ ಪೈಲಟ್ ಅನ್ನು ವಶಕ್ಕೆ ಪಡೆಯವ ಸಲುವಾಗಿ ಹುಡುಕಾಟ ಆರಂಭಿಸಿದೆ.
ಪೈಲಟ್‌ಗಳನ್ನು ಜೀವಂತವಾಗಿ ಇರಾನ್‌ನ ಪೊಲೀಸ್ ಅಥವಾ ಸೇನೆಗೆ ಒಪ್ಪಿಸಿದರೆ ಅವರಿಗೆ 61 ಲಕ್ಷ ರೂ.(1 ಕೋಟಿ ಟೊಮನ್ಸ್) ಬಹುಮಾನ ನೀಡಲಾಗುವುದು ಎಂದು ಸ್ಥಳೀಯ ಸರ್ಕಾರ ಘೋಷಣೆ ಮಾಡಿದೆ ಎಂದು ವರದಿಯಾಗಿದೆ.
ಘೋಷಣೆಯ ಬೆನ್ನಲ್ಲೇ ಇರಾನ್ ನಾಗರಿಕರು ವಿಮಾನದ ಅವಶೇಷ ಬಿದ್ದ ಸ್ಥಳದತ್ತ ದೌಡಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಜೀವಂತವಲ್ಲದಿದ್ದರೂ, ಈ ಪೈಲಟ್‌ಗಳನ್ನು ಕೊಂದರೂ ಬಹುಮಾನ ದೊರೆಯುವುದಾಗಿ ಸರ್ಕಾರ ತಿಳಿಸಿದೆ ಎನ್ನಲಾಗಿದೆ. ಆದರೆ, ಪೈಲಟ್ ಜತೆ ದುರ್ವರ್ತನೆ ತೋರದೆ, ನಮಗೆ ಒಪ್ಪಿಸಿ ಎಂದು ನಾಗರಿಕರಿಗೆ ಇರಾನ್ ಸಶಸ್ತ್ರಪಡೆ ಮನವಿ ಮಾಡಿದೆ ಎಂದೂ ಮತ್ತೊಂದು ಮೂಲ ತಿಳಿಸಿದೆ.
ಇದೀಗ ಪೈಲಟ್ ಇರಾನ್ ಸೇನೆಯ ವಶಕ್ಕೆ ಸಿಕ್ಕರೆ ಮುಂದೆ ಆತನನ್ನು ಒತ್ತೆಯಾಳಾಗಿರಿಸಿಕೊಂಡು ಇರಾನ್ ತನ್ನ ಷರತ್ತುಗಳೊಂದಿಗೆ ಅಮೆರಿಕ ಜತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

