ವಾಷಿಂಗ್ಟನ್: ಇರಾನ್ ಜತೆಗಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವ ಬೆನ್ನಲ್ಲೇ, ಹೊರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಇದೀಗ 'ಬಹುತೇಕ ಸಂಪೂರ್ಣ ನಿಯಂತ್ರಣ' ಹೊಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಇರಾನ್‌ನ ಆರ್ಥಿಕತೆ 'ಸಂಪೂರ್ಣವಾಗಿ ಕುಸಿಯುತ್ತಿದೆ' ಎಂದು ಅವರು ಪ್ರತಿಪಾದಿಸಿದ್ದಾರೆ.
ಅಮೆರಿಕವು ಇರಾನ್ ವಿರುದ್ಧ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ ಟ್ರಂಪ್ ಅವರು ತಮ್ಮ 'ಟ್ರೂತ್ ಸೋಷಿಯಲ್' ಖಾತೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಇರಾನ್‌ನ್ನು ಮತ್ತೆ ಮಾತುಕತೆ ಮೇಜಿಗೆ ತರುವಂತೆ ಅಮೆರಿಕ ಒತ್ತಡ ಹೇರುತ್ತಿದೆ ಎಂಬ ಎಬಿಸಿ ನ್ಯೂಸ್ ವರದಿಯನ್ನು ಅವರು ತಳ್ಳಿಹಾಕಿದ್ದಾರೆ.
'ಎಬಿಸಿ ಫೇಕ್ ನ್ಯೂಸ್ ವರದಿ ಮಾಡಿದಂತೆ ನಾನು ಇರಾನ್‌ನ್ನು ಮಾತುಕತೆ ಮೇಜಿಗೆ ಬರುವಂತೆ ಒತ್ತಾಯಿಸುತ್ತಿಲ್ಲ. ಅವರು ಸಹಿ ಮಾಡುವ, ಅವರ ಪಾಲಿಗೆ ಯಾವುದೇ ಮೌಲ್ಯವಿಲ್ಲದ ಒಪ್ಪಂದದ ಬಗ್ಗೆ ನನಗೆ ಕಿಂಚಿತ್ತೂ ಕಾಳಜಿ ಇಲ್ಲ' ಎಂದು ಟ್ರಂಪ್ ಹೇಳಿದ್ದಾರೆ.
ಪ್ರಸ್ತುತ ಪರಿಸ್ಥಿತಿಯೇ ತಮಗೆ ಹೆಚ್ಚು ಇಷ್ಟವಾಗಿದೆ ಎಂದು ಹೇಳಿದ ಟ್ರಂಪ್, ಹೊರ್ಮುಜ್ ಜಲಸಂಧಿಯ ಮೇಲೆ 'ಬಹುತೇಕ ಸಂಪೂರ್ಣ ನಿಯಂತ್ರಣ' ಹೊಂದಿರುವುದು ಮತ್ತು ಇರಾನ್ ಆರ್ಥಿಕತೆ 'ಸಂಪೂರ್ಣವಾಗಿ ಕುಸಿಯುತ್ತಿರುವುದು' ತಮ್ಮ ಗಮನದಲ್ಲಿದೆ. ಅವರು ಅನಿವಾರ್ಯ ಅಂತ್ಯದತ್ತ ಸಾಗುತ್ತಿದ್ದಾರೆ' ಎಂದಿದ್ದಾರೆ.
ಇದೇ ವೇಳೆ ಇರಾನ್‌ನ ಜನತೆಯನ್ನು ನೇರವಾಗಿ ಉದ್ದೇಶಿಸಿ ಮಾತನಾಡಿರುವ ಟ್ರಂಪ್, ಸರ್ಕಾರದ ವಿರುದ್ಧ ಎದ್ದು ನಿಲ್ಲುವಂತೆ ಕರೆ ನೀಡಿದ್ದಾರೆ. 'ಇರಾನ್‌ನ ಜನರು ಯಾವಾಗ ಎದ್ದು ಹೋರಾಡಲಿದ್ದಾರೆ?' ಎಂದು ಅವರು ಪ್ರಶ್ನಿಸಿದ್ದಾರೆ.
ಫೆಬ್ರುವರಿಯಲ್ಲಿ ಸಂಘರ್ಷ ಆರಂಭವಾದ ಬಳಿಕ ಹಲವು ಬಾರಿ ಹೊರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ನಿಯಂತ್ರಣ ಸಾಧಿಸಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ, ಅಮೆರಿಕದ ಈ ಪ್ರತಿಪಾದನೆಯನ್ನು ಟೆಹ್ರಾನ್ ತಳ್ಳಿಹಾಕಿದ್ದು, ಮಹತ್ವದ ಈ ಜಲಮಾರ್ಗವು ಇರಾನ್ ನಿಯಂತ್ರಣದಲ್ಲೇ ಇದೆ ಎಂದು ಸ್ಪಷ್ಟಪಡಿಸಿದೆ.
ಮಂಗಳವಾರ ಇರಾನ್‌ನ ವಿವಿಧ ಗುರಿಗಳ ಮೇಲೆ ಅಮೆರಿಕ ಭಾರಿ ಪ್ರಮಾಣದ ವೈಮಾನಿಕ ದಾಳಿ ನಡೆಸಿದ ಬಳಿಕ, ಪ್ರತಿಯಾಗಿ ಇರಾನ್ ಜೋರ್ಡಾನ್, ಬಹ್ರೇನ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಆಸ್ತಿಗಳು ಹಾಗೂ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ ಬಳಿಕ ಟ್ರಂಪ್ ಅವರ ಈ ಹೇಳಿಕೆ ಹೊರಬಿದ್ದಿದೆ.

