ಜೆರುಸಲೇಂ: ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಸೇನೆಯು ಹಲವಾರು ಪ್ರದೇಶಗಳಲ್ಲಿ ಗುರುವಾರ (ಜೂ.18) ರಾತ್ರಿಯಿಡೀ ದಾಳಿ ನಡೆಸಿದೆ ಮತ್ತು ಪ್ರದೇಶದಾದ್ಯಂತ ತನ್ನ ದಾಳಿಯನ್ನು ಮುಂದುವರೆಸಿದೆ ಎಂದು ವರದಿಯಾಗಿದೆ.
ಗುರುವಾರ ಫ್ರಾನ್ಸ್ ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜತೆಗಿನ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇಸ್ರೇಲ್ ಲೆಬನಾನ್ ಮೇಲೆ ನಡೆಸಿದ ಎರಡನೇ ದಾಳಿ ಇದಾಗಿದೆ.
ಈ ಒಪ್ಪಂದವು ಇರಾನ್ ವಿರುದ್ಧ ಮತ್ತು ಲೆಬನಾನ್ ಸೇರಿದಂತೆ ಯಾವ ಪ್ರದೇಶದ ಮೇಲೂ ಸೇನಾ ದಾಳಿಯನ್ನು ನಿಲ್ಲಿಸುವಂತೆ ಕರೆ ನೀಡಿತ್ತು. ಲೆಬನಾನ್ ನಲ್ಲಿ ಹೆಜ್ಬುಲ್ಲಾ ಭಯೋತ್ಪಾದಕರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಿರುವುದಾಗಿ ಇಸ್ರೇಲ್ ತಿಳಿಸಿದೆ.
ಇರಾನ್ ಬೆಂಬಲಿತ ಹೆಜ್ಬುಲ್ಲಾ ಬಂಡುಕೋರರು ಪದೇ, ಪದೇ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಈ ದಾಳಿ ನಡೆಸಿರುವುದಾಗಿ ಇಸ್ರೇಲ್ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವುದಾಗಿ ನ್ಯೂಸ್ ಏಜೆನ್ಸಿ ರಾಯಿಟರ್ಸ್ ವರದಿ ಮಾಡಿದೆ.
ಲೆಬನಾನ್ ನಲ್ಲಿ ಹೆಜ್ಬುಲ್ಲಾ ಬಂಡುಕೋರರ ವಿರುದ್ಧದ ದಾಳಿ ಮುಂದುವರಿಯಲಿದೆ ಎಂದು ಇಸ್ರೇಲ್ ತಿಳಿಸಿದ್ದರೆ, ಮತ್ತೊಂದೆಡೆ ಲೆಬನಾನ್, ಹೆಜ್ಬುಲ್ಲಾ, ಇಸ್ರೇಲ್ ಸೇರಿದಂತೆ ಇರಾನ್, ಅಮೆರಿಕಕ್ಕೂ ಈ ಶಾಂತಿ ಒಪ್ಪಂದ ಅನ್ವಯವಾಗಲಿದೆ ಎಂದು ಟ್ರಂಪ್ ತಿಳಿಸಿದ್ದರು.

