Dailyhunt
ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದುದ್ದನ್ನು ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ

ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದುದ್ದನ್ನು ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ

ಹುಣಸೂರು: ಕಸಾಯಿಖಾನೆಗೆ ಜಾನುವಾರು ಸಾಗಿಸುತ್ತಿದ್ದ ವಾಹನದ ಬಗ್ಗೆ ಪ್ರಶ್ನಿಸಿದ್ದರಿಂದ ಕುಪಿತಗೊಂಡ ಆರೋಪಿ ಚಂದ್ರಮೌಳಿ ಎಂಬ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕಟ್ಟೆಮಳಲವಾಡಿ ಎಂಬಲ್ಲಿ ಎ.8ರ ಬುಧವಾರ ನಡೆದಿದೆ.

ನಗರದ ಬ್ರಾಹ್ಮಣರ ಬಡಾವಣೆಯ ಗುರುರಾಜ್ ಪುತ್ರ, ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಸದಸ್ಯ ಚಂದ್ರಮೌಳಿ ಎಂಬಾತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ನಡುವೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಶಬ್ಬೀರ್ ನಗರದ ಶಾರೂಕ್ ಸಹ ಪ್ರತಿದೂರು ನೀಡಿದ್ದಾರೆ.

ಕೆ.ಆರ್.ನಗರದ ಕಡೆಯಿಂದ ಬೊಲೆರೋ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಹುಣಸೂರು ಶಬ್ಬೀರ್‌ ನಗರದ ಕಸಾಯಿಖಾನೆಗೆ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಚಂದ್ರಮೌಳಿ, 112 ಗೆ ಮಾಹಿತಿ ನೀಡಿ ನಂತರ ತಮ್ಮ ಸ್ಕೂಟರ್‌ನಲ್ಲಿ ಸ್ನೇಹಿತನೊಂದಿಗೆ ಕಟ್ಟೆಮಳಲವಾಡಿ ಕಡೆಗೆ ತೆರಳಿದ್ದಾರೆ.

ಈ ವೇಳೆ ಕಟ್ಟೆಮಳಲವಾಡಿಯ ನಂದಿ ಸರ್ಕಲ್ ಬಳಿ 7-8 ಜಾನುವಾರುಗಳನ್ನು ತುಂಬಿಕೊಂಡು ಬರುತ್ತಿದ್ದ ಬೊಲೆರೋ ವಾಹನವನ್ನು ತಡೆದು ಪ್ರಶ್ನಿಸಿದ್ದಾರೆ.

ಕಾರಿನಲ್ಲಿ ಸ್ನೇಹಿತರೊಂದಿಗೆ ಬಂದ ಶಾರೂಕ್ ಎಂಬಾತನೊಂದಿಗೆ ಚರ್ಚೆಗಿಳಿದಿದ್ದಾನೆ. ಈ ವೇಳೆ ಇಬ್ಬರಿಗೂ ಮಾತಿನ ಚಕಮಕಿಯಾಗಿದೆ. ಶಾರೂಕ್ ಎಂಬಾತ ಚಂದ್ರಮೌಳಿಗೆ ಎಚ್ಚರಿಕೆ ನೀಡಿ ಹಲ್ಲೆ ನಡೆಸಿದ್ದರಿಂದ ಬಾಯಿ, ಮೂಗಿಗೆ ಪೆಟ್ಟಾಗಿದ್ದು, ಕೆ.ಆರ್.ನಗರ ಕಡೆಯಿಂದ ದಾರಿಯಲ್ಲಿ ಬರುತ್ತಿದ್ದವರು ಆಸ್ಪತ್ರೆಗೆ ಕರೆ ತಂದು ದಾಖಲಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿದೂರು: ಇತ್ತ ತನ್ನ ಮೇಲೆ ಚಂದ್ರಮೌಳಿ ಎಂಬಾತ ಹಲ್ಲೆ ನಡೆಸಿದ್ದಾನೆಂದು ಶಾರೂಕ್ ನೀಡಿದ ದೂರುನನ್ವಯ ವಿರುದ್ದ ಪರಸ್ಪರ ದೂರು ದಾಖಲಾಗಿದೆ.

ಮೂರು ಹಸುಗಳ ವಶ: ಚಂದ್ರಮೌಳಿ ನೀಡಿದ್ದ ದೂರನ್ನಾಧರಿಸಿ ಶಬ್ಬೀರ್‌ ನಗರದ ಶಾರೂಕ್ ಮನೆಯಿಂದ 3 ಹಸುಗಳನ್ನು ರಕ್ಷಿಸಿ ಪಿಂಜಾರ ಪೋಲ್‌ಗೆ ಕಳುಹಿಸಲಾಗಿದ್ದು, ಶಾರೂಕ್‌ನನ್ನು ತನಿಖೆ ನಡೆಸಲಾಗುತ್ತಿದೆ. ಬೊಲೆರೋ ವಾಹನ ಪತ್ತೆಗಾಗಿ ಪೊಲೀಸರು ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

Dailyhunt
Disclaimer: This content has not been generated, created or edited by Dailyhunt. Publisher: Udayavani