Thursday, 04 Mar, 7.30 am ಉದಯವಾಣಿ

ಟಾಪ್ 10 ಸುದ್ದಿ
ಜಾರಕಿಹೊಳಿ ರಾಜೀನಾಮೆ: ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾಗಿದ್ದ ರಮೇಶ್‌ ಜಾರಕಿಹೊಳಿ ರಾಜೀನಾಮೆಯಿಂದ ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ಸಾಧ್ಯತೆ ಇದೆ.

ಸರಕಾರದಲ್ಲಿರುವ ವಲಸಿಗ ಸಚಿವರ ವೇಗಕ್ಕೆ ಬಿಜೆಪಿಯಲ್ಲಿಯೇ ಬ್ರೇಕ್‌ ಹಾಕುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ಪ್ರಕರಣದಲ್ಲಿ ಇಕ್ಕಟ್ಟಿಗೆ ಸಿಲುಕುವಂತಾಗಿದ್ದು, ಜಾರಕಿಹೊಳಿ ಕುಟುಂಬಕ್ಕೆ ಪರ್ಯಾಯ ಅಧಿಕಾರ ಕಲ್ಪಿಸದಿದ್ದರೆ ಸರಕಾರ ಅಲುಗಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ವಲಸಿಗರ ನಾಯಕತ್ವ ವಹಿಸಿಕೊಂಡಿದ್ದ ಜಾರಕಿಹೊಳಿ ರಾಜ್ಯ ಬಿಜೆಪಿಯಲ್ಲಿ ಪರ್ಯಾಯ ಶಕ್ತಿಯಾಗಿಯೇ ಬೆಳೆಯತೊಡಗಿದ್ದರು. ವರಿಷ್ಠರ ಜತೆಗೆ ನೇರ ಸಂಪರ್ಕ ಇಟ್ಟುಕೊಳ್ಳುವ ಮೂಲಕ ಹೈಕಮಾಂಡ್‌ ಮಟ್ಟದಲ್ಲಿ ತಮ್ಮದೇ ಆದ ಪ್ರಭಾವ ಬೆಳೆಸಿಕೊಂಡಿದ್ದರು.

ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಿ.ಪಿ. ಯೋಗೇಶ್ವರ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಡಿಸುವುದು, ಎಚ್‌.ವಿಶ್ವನಾಥ್‌ಗೆ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡುವಂತೆ ಹೈಕಮಾಂಡ್‌ ಮೂಲಕ ಯಡಿಯೂರಪ್ಪ ಮೇಲೆ ಒತ್ತಡ ಹೇರುವ ಮೂಲಕ ತಮ್ಮ ಜತೆಗಾರರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು.

ಮಿತ್ರ ಮಂಡಳಿಗೆ ಹಿನ್ನಡೆ
ರಮೇಶ್‌ ಜಾರಕಿಹೊಳಿ ತಮ್ಮ ತಂಡದ ಹಿತ ಕಾಯಲು ಹೈಕಮಾಂಡ್‌ ಮಟ್ಟದಲ್ಲಿಯೂ ಲಾಬಿ ನಡೆಸುತ್ತಿದ್ದರು. ಆದರೆ, ಈಗ ಅವರ ರಾಜೀನಾಮೆಯಿಂದ ಅವರೊಂದಿಗೆ ಗುರುತಿಸಿಕೊಂಡಿರುವ ಮಿತ್ರಮಂಡಳಿ ಸಚಿವರು ಹಾಗೂ ಶಾಸಕರಿಗೆ ಹಿನ್ನಡೆಯಾದಂತಾಗಿದೆ. ಜತೆಗೆ ರಮೇಶ್‌ ಜಾರಕಿಹೊಳಿ ಆರೋಪ ಮುಕ್ತವಾಗುವವರೆಗೂ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಡವೂ ಕೇಳಿ ಬರುತ್ತಿದೆ.

ಸಮುದಾಯದ ಹೋರಾಟಕ್ಕೆ ಹಿನ್ನಡೆ
ರಮೇಶ್‌ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾಗಿ ಸಚಿವರಾದ ಮೇಲೆ ವಾಲ್ಮೀಕಿ ಸಮುದಾಯದ ನಾಯಕರಾಗಿ ಹೊರ ಹೊಮ್ಮಿದ್ದು, ಸಮುದಾಯಕ್ಕೆ ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ. 3ರಿಂದ 7.5ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವಲ್ಲಿ ಮುಂಚೂಣಿಯಲ್ಲಿದ್ದರು. ಈಗ ಆ ಹೋರಾಟಕ್ಕೂ ಹಿನ್ನಡೆಯಾಗುವ ಆತಂಕವಿದೆ.

ಜಾರಕಿಹೊಳಿ ಕುಟುಂಬದ ಪ್ರಭಾವಕ್ಕೆ ಧಕ್ಕೆ?
ಬೆಳಗಾವಿ ರಾಜಕಾರಣದಲ್ಲಿ ಘಟಾನುಘಟಿ ನಾಯರಕನ್ನು ಮೀರಿ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತ ಸಾಗಿದ್ದ ರಮೇಶ್‌ ಜಾರಕಿಹೊಳಿಗೆ ಈ ಸಿ.ಡಿ. ಪ್ರಕರಣ ದೊಡ್ಡ ಹೊಡೆತ ನೀಡಿದಂತಾಗಿದೆ. ಇದು ರಾಜಕೀಯವಾಗಿ ಅವರ ಕುಟುಂಬ ಹೊಂದಿದ್ದ ವರ್ಚಸ್ಸಿಗೂ ಧಕ್ಕೆಯಾಗಲಿದ್ದು, ಬೆಳಗಾವಿ ಮೇಲಿನ ಈ ಕುಟುಂಬದ ಹಿಡಿತವೂ ಸಡಿಲಗೊಳ್ಳುವ ಸಾಧ್ಯತೆ ಇದೆ.

ಸಿ.ಡಿ.ಯದ್ದು ರಮೇಶ್‌ನ ವೈಯಕ್ತಿಕ ವಿಚಾರ. ಅದಕ್ಕೂ ನಮ್ಮ ಕುಟುಂಬಕ್ಕೂ ಸಂಬಂಧ ಇಲ್ಲ.ಈ ವಿಚಾರದಲ್ಲಿ ಜಾರಕಿಹೊಳಿ ಕುಟುಂಬವನ್ನು ಬೆರೆಸುವ ಅಗತ್ಯವಿಲ್ಲ. ಮಂಗಳವಾರವೇ ರಾಜೀನಾಮೆ ಕೊಡಬೇಕಿತ್ತು. ಆದರೆ ಈಗ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇನ್ನು ಪೊಲೀಸರು ತನಿಖೆ ಮಾಡಿ ಸತ್ಯಾಂಶವನ್ನು ಹೊರ ತರಬೇಕು. ರಮೇಶ್‌ಗೆ ಅವರ ಪಕ್ಷದಲ್ಲೂ ಆಗದಿರುವವರು ಇದ್ದಾರೆ, ಎಚ್ಚರಿಕೆಯಿಂದ ಇರಬೇಕು.
– ಸತೀಶ್‌ ಜಾರಕಿಹೊಳಿ, ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ

ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌ ಆಗ್ರಹ
ಬೆಂಗಳೂರು: ರಮೇಶ್‌ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದ ಕಾಂಗ್ರೆಸ್‌ ನಾಯಕರು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ವಕ್ತಾರ ಬ್ರಿಜೇಶ್‌ ಕಾಳಪ್ಪ, ರಮೇಶ್‌ ಜಾರಕಿಹೊಳಿ ಅವರು ಸುಳ್ಳು ಆಶ್ವಾಸನೆ ನೀಡಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಖಂಡನೀಯ ಎಂದರು.

ಸುಪ್ರೀಂ ಕೋರ್ಟ್‌ ನ್ಯಾಯಲಾದಿ ಸಂಕೇತ್‌ ಏಣಗಿ ಮಾತನಾಡಿ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವೀಡಿಯೋ, ಆಡಿಯೋಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹಲವು ಅಂಶಗಳು ಸ್ಪಷ್ಟವಾಗುತ್ತವೆ. ಸಂತ್ರಸ್ತ ಮಹಿಳೆ ಡ್ರೋಣ್‌ ಕೆಮರಾ ಮೂಲಕ ರಾಜ್ಯದ ಅಣೆಕಟ್ಟುಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಈ ಅಣೆಕಟ್ಟುಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಪ್ರಚಾರಪಡಿಸಲು ಸಚಿವರಿಂದ ಪರವಾನಗಿ ಪಡೆಯಲು ಭೇಟಿಯಾಗಿರುವುದು ಗೊತ್ತಾಗುತ್ತದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯೇ ದೂರು ದಾಖಲಿಸಬೇಕಿಲ್ಲ. ಅವರ ಪರವಾಗಿ ಬೇರೆಯವರು ದೂರು ದಾಖಲಿಸಲು ಅವಕಾಶವಿದೆ. ದಿನೇಶ್‌ ಕಲ್ಲಹಳ್ಳಿ ದೂರು ದಾಖಲಿಸಿರುವುದು ನ್ಯಾಯಸಮ್ಮತವಾಗಿದೆ ಎಂದರು.
*
ಸಿ.ಡಿ. ಚರ್ಚೆ ಶೋಭೆಯಲ್ಲ: ಕುಮಾರಸ್ವಾಮಿ
ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಿ.ಡಿ. ಪ್ರಕರಣದ ಬಗ್ಗೆ ಚರ್ಚೆ ನಡೆಸುವುದು ನಮಗೆ ಶೋಭೆ ತರುವುದಿಲ್ಲ. ಈ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಎಚ್‌. ವಿಶ್ವನಾಥ್‌ ಸಹಿತ ಬಿಜೆಪಿ ನಾಯಕರಿಂದ ಉತ್ತರ ಪಡೆದುಕೊಳ್ಳುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ವಿಷಯಗಳನ್ನಿಟ್ಟುಕೊಂಡು ರಾಜಕೀಯ ಮಾಡಲು ನಾನು ಬಯಸುವುದಿಲ್ಲ. ರಾಜಕೀಯಕ್ಕೆ ಬೇರೆ ಮಾರ್ಗಗಳಿವೆ ಎಂದರು.

ಇದು ರಾಮರಾಜ್ಯವೇ?
ಈ ಹಿಂದೆ ನನ್ನ ಸರಕಾರವನ್ನು ಪತನಗೊಳಿಸಿದರು. ಆ ಬಗ್ಗೆ ನನಗೆ ಬೇಸರವಿಲ್ಲ. ಹಿಂದೆ ರಾಜ್ಯದಲ್ಲಿ ರಾಕ್ಷಸಿ ಸರಕಾರವಿತ್ತು. ಅದನ್ನು ಉರುಳಿಸಲು ನಾವೆಲ್ಲ ಗುಂಪಾಗಿ ಮುಂಬಯಿಗೆ ಹೋಗಿ ಸರಕಾರವನ್ನು ಉರುಳಿಸಿ ಹೊಸ ಸರಕಾರದ ಮೂಲಕ ರಾಮರಾಜ್ಯ ತಂದಿದ್ದೇವೆ’ ಎಂದು ಎಚ್‌. ವಿಶ್ವನಾಥ್‌ ಹೇಳಿದ್ದರು. ಅವರು ಯಾವ ರಾಮರಾಜ್ಯ ತಂದಿದ್ದಾರೆ ಎಂದು ಹೇಳಲಿ. ಎಲ್ಲರೂ ಕುಳಿತು ಅವಲೋಕನ ಮಾಡಿಕೊಳ್ಳಲಿ ಎಂದು ತಿಳಿಸಿದರು.

ಇನ್ನಷ್ಟು ಅಕ್ರಮ ಬಹಿರಂಗ
ರಾಮನಗರ: ನನ್ನ ಹೋರಾಟ ರಮೇಶ್‌ ಜಾರಕಿಹೊಳಿ ಪ್ರಕರಣಕ್ಕಷ್ಟೇ ನಿಲ್ಲುವುದಿಲ್ಲ. ಸಚಿವ ಸಂಪುಟದಲ್ಲಿರುವವರು ಹಾಗೂ ಪ್ರಭಾವಿ ನಾಯಕರ ಗಂಭೀರವಾದ ಅಕ್ರಮ ಪ್ರಕರಣಗಳೂ ನನ್ನಲ್ಲಿವೆ. ಅದನ್ನು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ. ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್‌ ಕಲ್ಲಹಳ್ಳಿ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಡಿ ಬಿಡುಗಡೆ ಬಳಿಕ ತನಗೆ ಬೆದರಿಕೆ ಕರೆಗಳು ಬರುತ್ತಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡುವುದಾಗಿ ತಿಳಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top