ಜಗಳೂರು(ದಾವಣಗೆರೆ): ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಜಗಳೂರು ತಾಲೂಕಿನ ಬಿಳಿಚೋಡು ಗ್ರಾ.ಪಂ. ಬಿಲ್ ಕಲೆಕ್ಟರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜು.7ರ ಮಂಗಳವಾರ ನಡೆದಿದೆ.
ಬಿಳಚೋಡು ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಶಿವಪ್ಪ ಆತ್ಮಹತ್ಯೆ ಮಾಡಿಕೊಂಡವರು.
ಆತ್ಮಹತ್ಯೆ ಗೆ ಮುನ್ನ ಶಿವಪ್ಪ ಬರೆದಿರುವ ಡೆತ್ ನೋಟ್ ನಲ್ಲಿ ತಮ್ಮ ಸಾವಿಗೆ ಬಿಳಚೋಡು ಪಿಡಿಒ ನಂದಿಲಿಂಗೇಶ್ ಅವರೇ ಕಾರಣ ಎಂದು ಆರೋಪ ಮಾಡಿದ್ದಾರೆ.
ಶಿವಪ್ಪ ಬಿಳಿಚೋಡು ಅವರು ಗ್ರಾಮ ಪಂಚಾಯತಿಯಲ್ಲಿ 23 ವರ್ಷಗಳ ಕಾಲ ನೀರಗಂಟಿಯಾಗಿ ಸೇವೆ ಸಲ್ಲಿಸಿದ್ದು, ಕಳೆದ 2-3 ವರ್ಷಗಳಿಂದ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಪಿಡಿಒ ನಂದಿಲಿಂಗೇಶ್ ಅವರು ಕಳೆದ 2 ವರ್ಷಗಳಿಂದ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಕಂಪ್ಯೂಟರ್ ಜ್ಞಾನವಿಲ್ಲದ ಕಾರಣ ಶಿವಪ್ಪ ಅವರನ್ನು ಪಿಡಿಒ ನಿಂದಿಸುತ್ತಿದ್ದರು. ಜೊತೆಗೆ ಅಸಾಧ್ಯವಾದಷ್ಟು ಹೆಚ್ಚಿನ ಕಂದಾಯ ವಸೂಲಿ ಮಾಡುವಂತೆ ಒತ್ತಡ ಹೇರಿ, ಟಾರ್ಗೆಟ್ ನೀಡಿ ಮಾನಸಿಕವಾಗಿ ಹಿಂಸಿಸುತ್ತಿದ್ದರು ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ.
ಕಿರುಕುಳದ ಜೊತೆಗೆ ಪಿಡಿಒ ನಂದಿಲಿಂಗೇಶ್ ಅವರು ಜಾತಿ ನಿಂದನೆ ಮಾಡುತ್ತಿದ್ದರು ಎಂದು ಮೃತರು ಬರೆದಿಟ್ಟ ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಮೃತ ಶಿವಪ್ಪ ಅವರ ಪುತ್ರ ಅಶೋಕ್ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪಿಡಿಒ ನಂದಿಲಿಂಗೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.
ಕುಟುಂಬಸ್ಥರು ಮತ್ತು ಗ್ರಾಮಸ್ಥರು, ಆರೋಪಿ ಪಿಡಿಒ ನಂದಿಲಿಂಗೇಶ್ ಅವರನ್ನು ತಕ್ಷಣವೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

