ಬೆಂಗಳೂರು: ಕೇಂದ್ರ ಜನಗಣತಿ ಹಿನ್ನೆಲೆಯಲ್ಲಿ ವಿಧಾನಸೌಧದ ಸಚಿವಾಲಯದ ನಿತ್ಯದ ಕಾರ್ಯಾಡಳಿತಕ್ಕೆ ಅಡತಡೆಯ ಆತಂಕ ಶುರುವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದೂ ನಗರ ಪಾಲಿಕೆಗಳಲ್ಲಿ ಕೇಂದ್ರ ಸರ್ಕಾರದ ಜನಗಣತಿ ಯಶಸ್ವಿಗೆ ಪಣತೊಡಲಾಗಿದೆ.
ಈ ನಿಟ್ಟಿನಲ್ಲೇ ಸರ್ಕಾರ ವಿವಿಧ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಹಲವು ಕಡೆಗಳಲ್ಲಿ ತರಬೇತಿ ನೀಡಲಾಗಿದೆ. ಇದರ ಜತೆಗೆ ಗಣತಿ ಕಾರ್ಯಕ್ಕೆ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗ ಳನ್ನು ನಿಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವಾಲಯದ ಹಲವು ಕಾರ್ಯಗಳು ಕುಂಠಿತವಾಗುವ ಸಾಧ್ಯತೆಯಿದೆ. ಇದರಿಂದ ಎಚ್ಚೆತ್ತುಕೊಂಡಿರುವ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಕಾರ್ಯದರ್ಶಿಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರಿಗೆ ಪತ್ರ ಬರೆದಿದ್ದು, ಸಚಿವಾಲಯ ನೌಕರರನ್ನು ಕೇಂದ್ರ ಸರ್ಕಾರದ ಗಣತಿ ಕಾರ್ಯಕ್ಕೆ ನಿಯೋಜಿಸಬಾರದು ಎಂದು ಕೋರಿರುವುದು ಕುತೂಹಲ ಮೂಡಿಸಿದೆ.
ಸಚಿವರ, ಶಾಸಕರ ವೇತನ, ಭತ್ಯೆಗೆ ಅಡೆತಡೆ
ಏಪ್ರಿಲ್ 16 ರಿಂದ ಮೇ 15ರ ವರೆಗೆ ರಾಷ್ಟ್ರೀಯ ಜನಗಣತಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಬಿಎ ಹಿರಿಯ ಅಧಿಕಾರಿಗಳು ಗಣತಿ ಕಾರ್ಯಕ್ಕೆ ಮೇಲ್ವಿಚಾರಕರನ್ನು ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ.
ಗಣತಿ ಕಾರ್ಯಕ್ಕೆ ಸಚಿವಾಲಯ ನೌಕರರು ಮತ್ತು ಸಿಬ್ಬಂದಿ ನಿಯೋಜನೆಯಾಗಿರುವ ಹಿನ್ನೆಲೆಯಲ್ಲಿ ಸಚಿವರ, ಶಾಸಕರ, ಮಾಜಿ ಶಾಸಕರ ಭತ್ಯೆ, ನಿವೃತ್ತ ವೇತನ, ನಿಯೋಜನೆಯಿಂದ ಕುಟುಂಬ ವೇತನ, ವೈದ್ಯಕೀಯ ವೆಚ್ಚ ಮರುಪಾವತಿ ಸೇರಿದಂತೆ ಹಲವು ಕೆಲಸ ಕಾರ್ಯಗಳು ಕುಂಠಿತವಾಗಲಿದೆ. ಸಚಿವಾಲಯದ ದೈನಂದಿನ ಕಾರ್ಯಗಳ ಜತೆಗೆ ಸಮಿತಿ ಕಾರ್ಯಗಳಿಗೂ ಅಡತೆಯಾಗಲಿದೆ. ಈ ಹಿಂದೆ ರಾಜ್ಯ ಸರ್ಕಾರ ಕೈಗೊಂಡಿದ್ದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ ಕಾರ್ಯಕ್ಕೆ ಶಾಖಾಧಿಕಾರಿಗಳನ್ನು ಸೇರಿದಂತೆ ಇತರೆ ಎಲ್ಲ ಗ್ರೂಪ್ ಸಿ ವೃಂದದ ನೌಕರರನ್ನು ನಿಯೋಜಿಸಲಾಗಿತ್ತು. ಆಗ ಸಚಿವಾಲಯ ದೈನಂದಿನ ಕಾರ್ಯಗಳ ಜತೆಗೆ ಸಮಿತಿಯ ಕಾರ್ಯ ನಿರ್ವಹಣೆ, ಸಚಿವರ, ಶಾಸಕರ ಭತ್ಯೆ, ವೇತನ ಸೌಲಭ್ಯದ ಕಾರ್ಯಗಳು ಕುಂಠಿತವಾಗಿತ್ತು.
ಇದರಿಂದ ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ. ಸಭಾಧ್ಯಕ್ಷರಿಗೆ ಪತ್ರ: ಈ ಹಿಂದೆ ಅನೇಕ ಸಚಿವರು, ವಿರೋಧ ಪಕ್ಷದ ನಾಯಕರು, ಸರ್ಕಾರಿ ಮುಖ್ಯ ಸಚೇತಕರು, ಶಾಸಕರು ಕೂಡ ಸಭಾಧ್ಯಕ್ಷರಿಗೆ ಪತ್ರ ಬರೆದು ಸಚಿವಾಲಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕಾರ್ಯಾಂಗದ ಚುನಾವಣೆ, ಮತದಾರರ ಪಟ್ಟಿ, ಹಿಂದುಳಿದ ವರ್ಗಗಳ ಜಾತಿ ಗಣತಿ, ಮತ ಏಣಿಕೆ ಕಾರ್ಯಗಳಿಗೆ ನಿಯೋಜಿಸುವುದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಸ್ಪೀಕರ್ ಅವರಿಗೆ ಪತ್ರದ ಮೂಲಕ ಕೋರಿದ್ದರು.
ಅದನ್ನು ಸ್ಪೀಕರ್‌ಅವರು ಗಂಭೀರವಾಗಿ ಪರಿಗಣಿಸಿ ಸಚಿವಾಲಯದ ನೌಕರರನ್ನು ನಿಯೋಜನೆ ಮಾಡದಂತೆ ಆದೇಶಿಸಿದ್ದರು. ಮತ್ತೆ ಈಗ ಗಣತಿ ಕಾರ್ಯಕ್ಕೆ ಸಚಿವಾಲಯದ ಅಧಿಕಾರಿ ಮತ್ತು ನೌಕರರನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವುದಕ್ಕೆ ಸ್ಪೀಕರ್‌ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೌಕರರ ನಿತ್ಯದ ಕಾರ್ಯಗಳನ್ನು ಬಿಟ್ಟು ಗಣತಿ ಕಾರ್ಯಗಳಿಗೆ ಕ ಳಿಸಬಾರದು ಎಂದು ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಜಿಬಿಎ ಮುಖ್ಯ ಆಯುಕ್ತರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ತಾವು ವಾಸಿಸುವ ಪ್ರದೇಶದಲ್ಲೇ ಗಣತಿಗೆ ನಿಯೋಜಿಸಲು ಬೇಡಿಕೆ
ಸರ್ಕಾರದ ವಿವಿಧ ಇಲಾಖೆಯ ನೌಕರರನ್ನು ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ನೇಮಕ ಮಾಡಲಾಗಿದೆ. ವಿಧಾನಸೌಧದ ಬಳಿಯ ಬಹುಮಹಡಿ ಕಟ್ಟಡ ಸೇರಿದಂತೆ ಅದರ ಆಸುಪಾಸಿನ ಕಟ್ಟಡ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾವು ವಾಸಿಸುವ ಪ್ರದೇಶದಲ್ಲೇ ಸಮೀಕ್ಷೆ ಪಾಲ್ಗೊಳ್ಳುವ ಒಲವು ವ್ಯಕ್ತಪಡಿಸಿದ್ದಾರೆ. ಕೆಂಗೇರಿಯಲ್ಲಿ ವಾಸಿಸುವ ನೌಕರರೊಬ್ಬರು ದಿನಾಲೂ ವಿಧಾನಸೌಧದ ಸಮೀಪವಿರುವ ಇಲಾಖೆಯೊಂದರಲ್ಲಿ ಕಾರ್ಯ ನಿರ್ವಹಿಸಿ ಮನೆಗೆ ಹೋಗುತ್ತಾರೆ. ಆದರೆ ಈಗ ಅವರನ್ನು ಗಣತಿ ಹಿನ್ನೆಲೆಯಲ್ಲಿ ಬೆಂಗಳೂ ಉತ್ತರ ನಗರ ಪಾಲಿಕೆಗೆ ನಿಯೋಜನೆ ಮಾಡಲಾಗಿದೆ. ಆದರೆ ಅವರು ಅಲ್ಲಿಗೆ ಹೋಗಲು ಒಲವು ತೋರುತ್ತಿಲ್ಲ. ಅವರು ವಾಸಿಸುವ ಪ್ರದೇಶದಲ್ಲೇ ನಿಯೋಜನೆ ಮಾಡಿ ಅಂದರೆ ಹೇಗೆ ಎಂದು ಜಿಬಿಎನ ಹಿರಿಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
"10 ಕಿ.ಮೀ. ವ್ಯಾಪ್ತಿಯೊಳಗೆ ನೌಕರರನ್ನು ಗಣತಿಗೆ ನಿಯೋಜಿಸಿ': ಜಿಬಿಎ ಮುಖ್ಯ ಆಯುಕ್ತರಿಗೆ ಸರ್ಕಾರಿ ನೌಕರರ ಸಂಘದ ಪತ್ರ
ತೀವ್ರ ತರಹದ ಕಾಯಿಲೆ ಇರುವವರಿಗೆ ಸೇರಿದಂತೆ ಇನ್ನಿತರ ಸಮಸ್ಯೆಯಿಂದ ಬಳಲುತ್ತಿರುವ ಸರ್ಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ರಾಷ್ಟ್ರೀಯ ಜನಗಣತಿ ಕಾರ್ಯದಿಂದ ವಿನಾಯ್ತಿ ನೀಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಅವರು, 40-50 ಕಿ.ಮೀ ದೂರದ ಸ್ಥಳದಲ್ಲಿ ಗಣತಿ ಕಾರ್ಯಕ್ಕೆ ನಿಯೋಜಿಸುವುದರ ಬದಲು ಅಧಿಕಾರಿಗಳ ಮತ್ತು ನೌಕರರ ವಾಸ ಸ್ಥಳದಿಂದ 10 ಕಿ.ಮೀ ವ್ಯಾಪ್ತಿಯೊಳಗೆ ಗಣತಿ ಕಾರ್ಯಕ್ಕೆ ನಿಯೋಜಿಸುವಂತೆ ಕೋರಿದ್ದಾರೆ. ಜತೆಗೆ ಈಗಾಗಲೇ ಬಿಎಲ್‌ಒ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಯನ್ನು ಜನಗಣತಿ ಕಾರ್ಯದಿಂದ ಕೈಬಿಡಬೇಕು. ವಿವಿಧ ಇಲಾಖೆಯ ವ್ಯಾಪ್ತಿಯಲ್ಲಿ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಪರಸ್ಪರ ಬದಲಾವಣೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

