Thursday, 29 Oct, 6.12 am ಉದಯವಾಣಿ

ಟಾಪ್ 10 ಸುದ್ದಿ
"ಜಂಗಲ್‌ರಾಜ್‌ ಯುವರಾಜ'; ಮಹಾಘಟಬಂಧನ್‌ ಸಿಎಂ ಅಭ್ಯರ್ಥಿ ತೇಜಸ್ವಿ ವಿರುದ್ಧ ಮೋದಿ ವಾಗ್ಬಾಣ

ಪಾಟ್ನಾ: “ಜಂಗಲ್‌ರಾಜ್‌ನ ಯುವರಾಜನ ವಿರುದ್ಧ ಹಕ್ಕು ಚಲಾಯಿಸಿ, ಬಿಹಾರವನ್ನು ರಕ್ಷಿಸಿ. ಒಂದು ವೇಳೆ ಯುವರಾಜನ ಕೈಗೆ ಅಧಿಕಾರ ಕೊಟ್ಟರೆ ಕೋವಿಡ್ ಲಸಿಕೆಗೆ ಕೂಡಿಟ್ಟ ಹಣವೆಲ್ಲ ಲೂಟಿ ಆಗುವುದು ನಿಶ್ಚಿತ’!

ಮಹಾಘಟಬಂಧನ್‌ ಮೈತ್ರಿಕೂಟದ “ಯುವರಾಜ’ ತೇಜಸ್ವಿ ಯಾದವ್‌ನತ್ತ ಪ್ರಧಾನಿ ನರೇಂದ್ರ ಮೋದಿ ಬೀಸಿದ ಮಾತಿನ ಪ್ರಹಾರವಿದು. ಬಿಹಾರ ವಿಧಾನಸಭೆಗೆ ಬುಧವಾರ ಮೊದಲ ಹಂತ ಮತದಾನದ ಶಾಯಿ ಬೆರಳಿಗೆ ಅಂಟುತ್ತಿದ್ದಂತೆ, 2ನೇ ಹಂತದ ಚುನಾವಣಾ ಕ್ಷೇತ್ರಗಳಲ್ಲಿ ಹೈವೋಲ್ಟೆಜ್‌ ಏರ್ಪಟ್ಟಿತ್ತು. ದರ್ಭಾಂಗ, ಮುಜಾಫ‌ರ್‌ಪುರ, ಪಾಟ್ನಾದಲ್ಲಿ ಪ್ರಧಾನಿ ಮಾಡಿದ ಸರಣಿ ಭಾಷಣ ಬಾಣಗಳಷ್ಟೇ ತೀಕ್ಷ್ಣವಾಗಿತ್ತು.

“ನಿಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಿ… ಜಂಗಲ್‌ರಾಜ್‌ನ ಯುವರಾಜ ಎಷ್ಟು ಸಮರ್ಥನಿದ್ದಾನೆ? ಬಡ- ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸಲು ಆತ ಶಕ್ಯನೇ? ಮೊದಲ ಕ್ಯಾಬಿನೆಟ್‌ ಮೀಟಿಂಗ್‌ನಲ್ಲೇ 10 ಲಕ್ಷ ಸರ್ಕಾರಿ ಉದ್ಯೋಗ ಯೋಜನೆ ಜಾರಿ ತರುವುದಾಗಿ ಹೇಳುತ್ತಾರೆ. ಆದರೆ, ಸರ್ಕಾರಿ ನೌಕರಿ ಮರೆತುಬಿಡಿ… ಈ ಲೂಟಿಕೋರರು ನಿಮ್ಮ ಖಾಸಗಿ ವೃತ್ತಿಗಳನ್ನೂ ಕಸಿದುಕೊಳ್ಳುತ್ತಾರೆ. ಕಂಪನಿಗಳನ್ನು ಬಲವಂತವಾಗಿ ಮುಚ್ಚಿಸುತ್ತಾರೆ’ ಎಂದು ಆರೋಪಿಸಿದರು

ಮತ್ತೆ ಕತ್ತಲೆಗೆ…: “ಇದು ಪೊಳ್ಳು ಭರವಸೆಗಳಿಗೆ ಕಾಲವಲ್ಲ. ಸಾರ್ವಜನಿಕ ಹಣ ಲೂಟಿಗೈದು, ಕುಟುಂಬದ ಆಸ್ತಿ ಮಾಡಿಕೊಳ್ಳುವವರಿಗೂ ಸಮಯವಲ್ಲ. ಅಪಹರಣ ವಿಚಾರದಲ್ಲಿ ಕಾಪಿರೈಟ್‌ ಹೊಂದಿರುವ ಜಂಗಲ್‌ರಾಜ್‌ ಗ್ಯಾಂಗ್‌ ಮತ್ತೆ ಬಿಹಾರವನ್ನು ಕತ್ತಲೆಗೆ ದೂಡುವ ಸಂಚಿನಲ್ಲಿದೆ. ಉದ್ಯೋಗಸೃಷ್ಟಿ ಭರವಸೆಯೊಡ್ಡಿ ಕೋಟಿ ಕೋಟಿ ಕೊಳ್ಳೆ ಹೊಡೆಯುವ ಪಿತೂರಿ ರೂಪಿಸಿದೆ’ ಎಂದು ಎಚ್ಚರಿಸಿದರು.

“ಜಂಗಲ್‌ರಾಜ್‌ ಸಹಚರರ ರಾಜಕಾರಣ ಸುಳ್ಳು, ವಂಚನೆ ಮತ್ತು ಗೊಂದಲ ಆಧಾರಿತ. ಬಿಹಾರದ ಅಭಿವೃದ್ಧಿಗೆ ಅವರ ಬಳಿ ಯಾವುದೇ ನಕ್ಷೆಗಳಿಲ್ಲ, ಉತ್ತಮ ಆಡಳಿತದ ಅನುಭವವೂ ಇಲ್ಲ. ಎನ್‌ಡಿಎ ಅಧಿಕಾರಕ್ಕೆ ಬಂದ ಮೇಲಷ್ಟೇ ಬಿಹಾರ ಪ್ರಗತಿಗೆ ಮೈಯ್ಯೊಡ್ಡಿದೆ. ಐಟಿ ಹಬ್‌ನ ಕನಸುಗಳು ಸೇರಿದಂತೆ ಹೊಸ ಮೈಲುಗಲ್ಲುಗಳನ್ನು ನೆಟ್ಟಿದೆ’ ಎಂದು ಶ್ಲಾಘಿಸಿದರು.

ವಿರೋಧಿಗಳೂ ಚಪ್ಪಾಳೆ ಹೊಡೆದರು!: ರಾಮ ಮಂದಿರ ನಿರ್ಮಾಣ ಕುರಿತು ಕುಹಕ ಎತ್ತಿದ್ದ ವಿಪಕ್ಷಗಳಿಗೂ ಮೋದಿ ಬಿಸಿ ಮುಟ್ಟಿಸಿದರು. “ಸೀತಾಮಾತೆಯ ಜನ್ಮಸ್ಥಳಕ್ಕೆ ಬಂದಿರೋದಕ್ಕೆ ಅಪಾರ ಸಂತಸವಾಗಿದೆ. ಅಯೋಧ್ಯೆಯಲ್ಲಿ ಈಗಾಗಲೇ ರಾಮಮಂದಿರ ನಿರ್ಮಾಣ ಆರಂಭಗೊಂಡಿದೆ. ಮಂದಿರ ಯಾವಾಗ ಕಟಿ¤àರಿ? ಅಂತ ವ್ಯಂಗ್ಯವಾಗಿ ಪ್ರಶ್ನಿಸುತ್ತಿದ್ದ ವಿರೋಧಿಗಳಿಗೂ ಇಂದು ಬಲವಂತವಾಗಿ ಚಪ್ಪಾಳೆ ಹೊಡೆದು ಮೆಚ್ಚುಗೆ ಸೂಚಿಸುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು.

ಪ್ರಧಾನಿ ನಿಮ್ಮೊಂದಿಗೆ ಚಹಾ ಕುಡಿದರಾ?: ರಾಹುಲ್‌
ಚಂಪಾರಣ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾಷಣವೂ ಅಷ್ಟೇ ಬಿರುಸಾಗಿತ್ತು. “ಕಳೆದ ಸಲ ಪ್ರಧಾನಿ ಇಲ್ಲಿಗೆ ಬಂದಾಗ ಸಕ್ಕರೆ ಕಾರ್ಖಾನೆ ನಿರ್ಮಿಸುತ್ತೇವೆ. ನಿಮ್ಮೆಲ್ಲರ ಜೊತೆ ಅದೇ ಸಕ್ಕರೆಯಿಂದ ಮಾಡಿದ ಚಹಾ ಕುಡಿಯುತ್ತೇನೆ ಎಂದಿದ್ದರು. ಆದರೆ, ನಿಮ್ಮ ಜತೆ ಅವರು ಚಹಾ ಕುಡಿದರಾ?’ ಎಂದು ಜನತೆಗೆ ಪಶ್ನಿಸಿದರು.

“ಬಿಹಾರದಲ್ಲಿ ಇಂದು ಯಾರಿಗೂ ನೌಕರಿ ಸಿಗುತ್ತಿಲ್ಲ. ಇದರರ್ಥ ಬಿಹಾರಿಗಳು ಅಸಮರ್ಥರು ಅಂತಲ್ಲ. ನಿಮ್ಮ ಮುಖ್ಯಮಂತ್ರಿ, ಪ್ರಧಾನಿ ದುರ್ಬಲ ಆಗಿರೋದೇ ನಿಮ್ಮ ಈ ಸ್ಥಿತಿಗೆ ಕಾರಣ’ ಎಂದು ಆರೋಪಿಸಿದರು.

“ಪ್ರಧಾನಿ ಇಂದು ತಮ್ಮ ಭಾಷಣದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಯ ವಿಚಾರವನ್ನೇ ಪ್ರಸ್ತಾಪಿಸುತ್ತಿಲ್ಲ. ಅವರು ಹೇಳಿದ್ದೆಲ್ಲ ಸುಳ್ಳೆಂದು ಬಿಹಾರ ಜನತೆಗೆ ಮನವರಿಕೆಯಾಗಿದೆ. ಯುವಕರು, ರೈತರೆಲ್ಲ ಪ್ರಧಾನಿ ಮೇಲೆ ಸಿಟ್ಟಾಗಿದ್ದಾರೆ’ ಎಂದರು.

ಎನ್‌ಡಿಎ ಮೈತ್ರಿಯನ್ನು ಮತ್ತೆ ನೀವು ಬೆಂಬಲಿಸಿದರೆ, ಬಿಹಾರ ಖಂಡಿತಾ ಅಭಿವೃದ್ಧಿ ಹೊಂದಿದ ರಾಜ್ಯವಾಗುತ್ತೆ. ಇನ್ನಷ್ಟು ಮುಂಚೂಣಿಗೆ ಬರುತ್ತೆ.
ನಿತೀಶ್‌ ಕುಮಾರ್‌, ಬಿಹಾರ ಸಿಎಂ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top