Dailyhunt
ಜೇಸನ್ ಹೋಲ್ಡರ್ ಕ್ಯಾಚ್ ವಿವಾದ: ರಜತ್ ಪಾಟಿದಾರ್ 'ನಾಟ್ ಔಟ್' ಎಂದ ನಿವೃತ್ತ ಅಂಪೈರ್!

ಜೇಸನ್ ಹೋಲ್ಡರ್ ಕ್ಯಾಚ್ ವಿವಾದ: ರಜತ್ ಪಾಟಿದಾರ್ 'ನಾಟ್ ಔಟ್' ಎಂದ ನಿವೃತ್ತ ಅಂಪೈರ್!

ಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವಿನ ಐಪಿಎಲ್ 2026ರ ಹಣಾಹಣಿ ತೀವ್ರ ವಿವಾದಕ್ಕೆ ಸಾಕ್ಷಿಯಾಗಿದೆ.

ಆರ್‌.ಸಿ.ಬಿ ನಾಯಕ ರಜತ್ ಪಾಟಿದಾರ್ ಅವರ ವಿವಾದಾತ್ಮಕ ಔಟ್ ನಿರ್ಧಾರ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ನಿವೃತ್ತ ಅಂಪೈರ್ ಅನಿಲ್ ಚೌಧರಿ ಅವರ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತಿದೆ.

ಏನಿದು ಘಟನೆ?
ಆರ್‌.ಸಿ.ಬಿ ಇನಿಂಗ್ಸ್‌ನ 8ನೇ ಓವರ್‌ನಲ್ಲಿ 19 ರನ್ ಗಳಿಸಿ ಆಡುತ್ತಿದ್ದ ರಜತ್ ಪಾಟಿದಾರ್ ಪುಲ್ ಶಾಟ್‌ಗೆ ಯತ್ನಿಸಿದರು. ಈ ವೇಳೆ ಗುಜರಾತ್ ಟೈಟಾನ್ಸ್‌ನ ಜೇಸನ್ ಹೋಲ್ಡರ್ ಮುಂದಕ್ಕೆ ಜಿಗಿದು ಲೋ ಕ್ಯಾಚ್ ಪಡೆದರು. ಮರುಪ್ರಸಾರದಲ್ಲಿ ಚೆಂಡು ನೆಲಕ್ಕೆ ತಗುಲಿದಂತೆ ಕಂಡರೂ, ಮೂರನೇ ಅಂಪೈರ್ ಮಾತ್ರ ಇದನ್ನು 'ಔಟ್' ಎಂದು ಘೋಷಿಸಿದರು. ಈ ತೀರ್ಪು ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ ಸೇರಿದಂತೆ ಇಡೀ ಆರ್‌.ಸಿ.ಬಿ ತಂಡದ ಆಕ್ರೋಶಕ್ಕೆ ಕಾರಣವಾಯಿತು.

ಅಂಪೈರ್ ಅನಿಲ್ ಚೌಧರಿ ಹೇಳಿದ್ದೇನು?
ಕಳೆದ ವರ್ಷವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಅನುಭವಿ ಅಂಪೈರ್ ಅನಿಲ್ ಚೌಧರಿ ಈ ಬಗ್ಗೆ ಪ್ರತಿಕ್ರಿಯಿಸಿ, "ನನ್ನ ಪ್ರಕಾರ ಅದು ನಾಟ್ ಔಟ್ ಆಗಿರಬೇಕಿತ್ತು" ಎಂದಿದ್ದಾರೆ.

"ಕ್ಯಾಚ್ ಒಂದನ್ನು ಪರಿಶೀಲಿಸುವಾಗ ಎರಡು ಅಂಶಗಳು ಮುಖ್ಯವಾಗುತ್ತವೆ. ಮೊದಲನೆಯದು ಚೆಂಡಿನ ಮೇಲಿನ ನಿಯಂತ್ರಣ ಮತ್ತು ಎರಡನೆಯದು ದೇಹದ ಚಲನೆ. ಹೋಲ್ಡರ್ ತನ್ನ ದೇಹದ ಸಮತೋಲನ ಕಾಯ್ದುಕೊಳ್ಳುವ ಮೊದಲೇ ಅವರ ಅಂಗೈ ಕೆಳಮುಖವಾಗಿತ್ತು ಮತ್ತು ಚೆಂಡು ನೆಲಕ್ಕೆ ತಗುಲಿತ್ತು. ಟಿವಿ ಅಂಪೈರ್ ಅಲ್ಲಿ ಏನನ್ನು ಗಮನಿಸಿದರೋ ನನಗಂತೂ ತಿಳಿಯುತ್ತಿಲ್ಲ," ಎಂದು ಚೌಧರಿ ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕನೇ ಅಂಪೈರ್ ಜೊತೆ ಕೊಹ್ಲಿ ವಾಗ್ವಾದ
ಪಾಟಿದಾರ್ ಅವರ ವಿಕೆಟ್ ಪತನದ ಬಳಿಕ ವಿರಾಟ್ ಕೊಹ್ಲಿ ಮೈದಾನದ ಬದಿಯಲ್ಲಿದ್ದ ನಾಲ್ಕನೇ ಅಂಪೈರ್ ಬಳಿ ತೆರಳಿ ಸುದೀರ್ಘ ಚರ್ಚೆ ನಡೆಸಿದರು. ಅಂಪೈರ್ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೊಹ್ಲಿ, ಪಂದ್ಯದ ನಂತರವೂ ಈ ಬಗ್ಗೆ ಸ್ಪಷ್ಟನೆ ಕೇಳುತ್ತಿರುವುದು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದೆ.
ಆರ್‌.ಸಿ.ಬಿ ಬ್ಯಾಟಿಂಗ್ ಕುಸಿತ
ಪಾಟಿದಾರ್ ನಿರ್ಗಮನದ ನಂತರ ಆರ್‌.ಸಿ.ಬಿ ನಾಟಕೀಯ ಕುಸಿತ ಕಂಡಿತು. ಕೇವಲ ನಾಲ್ಕು ಓವರ್‌ಗಳ ಅಂತರದಲ್ಲಿ ಮೂರು ಪ್ರಮುಖ ವಿಕೆಟ್ ಕಳೆದುಕೊಂಡ ಬೆಂಗಳೂರು ತಂಡ, ಅಂತಿಮವಾಗಿ 19.2 ಓವರ್‌ಗಳಲ್ಲಿ 155 ರನ್‌ಗಳಿಗೆ ಆಲೌಟ್ ಆಯಿತು. ಗುಜರಾತ್ ಪರ ಅರ್ಶದ್ ಖಾನ್ 3 ವಿಕೆಟ್ ಪಡೆದು ಮಿಂಚಿದರು.

ಈ ವಿವಾದಾತ್ಮಕ ನಿರ್ಧಾರವು ಸಾಮಾಜಿಕ ಜಾಲತಾಣಗಳಲ್ಲಿ ಆರ್‌.ಸಿ.ಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಅಂಪೈರಿಂಗ್ ಗುಣಮಟ್ಟದ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ.

Dailyhunt
Disclaimer: This content has not been generated, created or edited by Dailyhunt. Publisher: Udayavani