ಮುಂಬಯಿ: ಕಳೆದ 10 ವರ್ಷಗಳಲ್ಲಿ ಭಾರತದ ಡಿಜಿಟಲ್ ಹಾಗೂ ಇಂಟರ್ನೆಟ್ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ 'ಜಿಯೋ' ಇದೀಗ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.
ಕೇವಲ 1 ಟೆಲಿಕಾಂ ಕಂಪನಿಯಾಗಿ ಆರಂಭವಾದ ಜಿಯೋ, ಮುಂಬರುವ ದಶಕದಲ್ಲಿ ಬೌದ್ಧಿಕ ಆಸ್ತಿ (Intellectual Property), ಕೃತಕ ಬುದ್ಧಿಮತ್ತೆ (AI) ಮತ್ತು ಎಂಟರ್‌ಪ್ರೈಸ್ ಪ್ಲಾಟ್‌ಫಾರ್ಮ್‌ಗಳನ್ನು ಆಧರಿಸಿದ ಜಾಗತಿಕ ಮಟ್ಟದ ಸಂಪೂರ್ಣ 'ತಂತ್ರಜ್ಞಾನ ಕಂಪನಿ'ಯಾಗಿ (Tech Company) ರೂಪಾಂತರಗೊಳ್ಳುತ್ತಿದೆ.
'ಮೇಡ್ ಇನ್ ಇಂಡಿಯಾ' ತಂತ್ರಜ್ಞಾನವನ್ನು ಇಡೀ ಜಗತ್ತಿಗೆ ಪರಿಚಯಿಸುವ ಬೃಹತ್ ಮಹತ್ವಾಕಾಂಕ್ಷೆಯನ್ನು ಜಿಯೋ ಹೊಂದಿದೆ.
ಸ್ವದೇಶಿ ತಂತ್ರಜ್ಞಾನದ ಬಲ ಮತ್ತು ಬೆಳವಣಿಗೆ
ಆರಂಭಿಕ ದಿನಗಳಲ್ಲಿ ಜಿಯೋ ಕೇವಲ ಅಗ್ಗದ ಇಂಟರ್ನೆಟ್, ಡೇಟಾ ಬಳಕೆ ಮತ್ತು ಗ್ರಾಹಕರ ಸಂಖ್ಯೆಯ ಹೆಚ್ಚಳದ ಬಗ್ಗೆ ಸುದ್ದಿಯಲ್ಲಿತ್ತು. ಆದರೆ ಇಂದು ಅದು ತನ್ನದೇ ಆದ ನೆಟ್‌ವರ್ಕ್ ಸಾಫ್ಟ್‌ವೇರ್, ಡಿಜಿಟಲ್ ಪ್ಲಾಟ್‌ಫಾರ್ಮ್ ಮತ್ತು ಎಂಜಿನಿಯರಿಂಗ್ ಸಾಮರ್ಥ್ಯಗಳನ್ನು ಸ್ವತಃ ನಿರ್ಮಿಸುತ್ತಿದೆ.
ಜಿಯೋ ಪ್ಲಾಟ್‌ಫಾರ್ಮ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಆಕಾಶ್ ಅಂಬಾನಿ ಹೇಳುವಂತೆ, "ಜಿಯೋ ಈಗ ಸಂಪರ್ಕ, ಡಿಜಿಟಲ್ ಉತ್ಪನ್ನಗಳು ಮತ್ತು ಎಐ ಕ್ಷೇತ್ರಗಳಲ್ಲಿ ತನ್ನದೇ ತಂತ್ರಜ್ಞಾನವನ್ನು ಬೆಳೆಸುತ್ತಿದ್ದು, ಭಾರತವನ್ನು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಸೃಷ್ಟಿಸುವ ಸ್ಥಾನದಲ್ಲಿ ನಿಲ್ಲಿಸುವ ಗುರಿ ಹೊಂದಿದೆ." ಇದಕ್ಕೆ ಪೂರಕವಾಗಿ ಜಿಯೋ, ತಾನೇ ಅಭಿವೃದ್ಧಿಪಡಿಸಿದ ಸ್ವದೇಶಿ ತಂತ್ರಜ್ಞಾನದ ಮೂಲಕವೇ ಭಾರತದಲ್ಲಿ 5G ಅನ್ನು ಅತ್ಯಂತ ವೇಗವಾಗಿ ಜಾರಿಗೆ ತಂದಿದೆ. ಇಂದು 52.4 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿರುವ ಜಿಯೋಗೆ, ಈ ಬೃಹತ್ ಗ್ರಾಹಕ ಬಳಗವೇ ಅದರ ಉತ್ಪನ್ನಗಳ ಅತಿದೊಡ್ಡ ಪರೀಕ್ಷಾ ವೇದಿಕೆಯಾಗಿದೆ.
ಪೇಟೆಂಟ್‌ಗಳಲ್ಲಿ ಮುಂಚೂಣಿ ಮತ್ತು ಬ್ರಾಡ್‌ಬ್ಯಾಂಡ್ ಕ್ರಾಂತಿ
ನಾವೀನ್ಯತೆಯಲ್ಲಿ (Innovation) ಜಿಯೋ ದೊಡ್ಡ ಮೈಲಿಗಲ್ಲು ಸಾಧಿಸಿದೆ. ಮಾರ್ಚ್ 2026ರ ಹೊತ್ತಿಗೆ, 4G, 5G, 6G, ಎಐ ಮತ್ತು ಕ್ಲೌಡ್ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಕಂಪನಿ ಒಟ್ಟು 6,817 ಪೇಟೆಂಟ್‌ಗಳನ್ನು ದಾಖಲಿಸಿದೆ.
ಈ ಪೈಕಿ ಜಾಗತಿಕವಾಗಿ 1,009 ಪೇಟೆಂಟ್‌ಗಳು ಮಂಜೂರಾಗಿವೆ. ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯ (WIPO) 2025ರ ಶ್ರೇಯಾಂಕದಲ್ಲಿ ಜಿಯೋ ಜಾಗತಿಕ ಅಗ್ರ 20ರ ಪಟ್ಟಿಗೆ ಸೇರ್ಪಡೆಗೊಂಡು 12ನೇ ಸ್ಥಾನ ಪಡೆದು ಬೀಗಿದೆ.
ಜೊತೆಗೆ, ಫೈಬರ್ ಕೇಬಲ್ ಅಳವಡಿಸಲು ಕಷ್ಟವಿರುವ ಪ್ರದೇಶಗಳಿಗೆ ಇಂಟರ್ನೆಟ್ ಒದಗಿಸಲು ಲೈಸೆನ್ಸ್ ರಹಿತ ಬ್ಯಾಂಡ್ ರೇಡಿಯೋ 'ಯುಬಿಆರ್' (UBR) ಎಂಬ ವಿಶೇಷ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.
ಇದರ ಮೂಲಕ 2.7 ಕೋಟಿಗೂ ಹೆಚ್ಚು ಫಿಕ್ಸೆಡ್ ಬ್ರಾಡ್‌ಬ್ಯಾಂಡ್ ಸಂಪರ್ಕಗಳನ್ನು ಒದಗಿಸಿ, ಭಾರತದ ಮಾರುಕಟ್ಟೆಯಲ್ಲಿ ಶೇ.43 ರಷ್ಟು ಪಾಲು ತನ್ನದಾಗಿಸಿಕೊಂಡಿದೆ.
ವಿಶ್ವ ಮಾರುಕಟ್ಟೆಗೆ ರಫ್ತು ಮತ್ತು ಕೃತಕ ಬುದ್ಧಿಮತ್ತೆ (AI)
ಭಾರತ ಇದುವರೆಗೆ ಜಾಗತಿಕ ಟೆಲಿಕಾಂ ತಂತ್ರಜ್ಞಾನವನ್ನು ಕೇವಲ ಖರೀದಿಸುತ್ತಿತ್ತು. ಆದರೆ ಈಗ ಜಿಯೋ, ತನ್ನದೇ ತಂತ್ರಜ್ಞಾನವನ್ನು ಜಾಗತಿಕ ಆಪರೇಟರ್‌ಗಳಿಗೆ ಮಾರಾಟ ಮಾಡಲು ಸಿದ್ಧವಾಗಿದೆ.
ಕೇವಲ ಪ್ರಯೋಗಾಲಯಗಳಲ್ಲಿ ಮಾತ್ರವಲ್ಲದೆ, ವಾರ್ಷಿಕ 241 ಎಕ್ಸಾಬೈಟ್‌ಗಳಷ್ಟು (Exabytes) ಬೃಹತ್ ಡೇಟಾ ಟ್ರಾಫಿಕ್ ಅನ್ನು ನಿಭಾಯಿಸುವ ಮೂಲಕ ನೈಜ ಜಗತ್ತಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ತಂತ್ರಜ್ಞಾನವನ್ನು ಜಿಯೋ ಜಗತ್ತಿಗೆ ನೀಡುತ್ತಿದೆ.
ಮತ್ತೊಂದೆಡೆ "ಎಲ್ಲರಿಗೂ, ಎಲ್ಲೆಡೆ ಕೃತಕ ಬುದ್ಧಿಮತ್ತೆ" (AI Everywhere, For Everyone) ಎಂಬ ಧ್ಯೇಯದೊಂದಿಗೆ, ಭಾರತೀಯರ ಆರ್ಥಿಕತೆಗೆ ಮತ್ತು ಜನಸಂಖ್ಯೆಗೆ ಹೊಂದುವಂತಹ ಎಐ (AI) ವ್ಯವಸ್ಥೆಯನ್ನು ನಿರ್ಮಿಸಿ, ಬಳಿಕ ಅದನ್ನು ಇತರ ದೇಶಗಳಿಗೂ ವಿಸ್ತರಿಸುವ ಯೋಜನೆಯನ್ನು ಕಂಪನಿ ಹೊಂದಿದೆ.
ಹಿಂದೆಲ್ಲ ಹೊಸ ಮೊಬೈಲ್ ತಂತ್ರಜ್ಞಾನಗಳು ಜಗತ್ತಿನೆಲ್ಲೆಡೆ ಬಳಕೆಗೆ ಬಂದ ಬಹಳ ವರ್ಷಗಳ ನಂತರವಷ್ಟೇ ಭಾರತಕ್ಕೆ ಕಾಲಿಡುತ್ತಿದ್ದವು. ಆದರೆ ಭವಿಷ್ಯದ 6G ತಂತ್ರಜ್ಞಾನದ ವಿಚಾರದಲ್ಲಿ ಜಿಯೋ ಈಗಲೇ ಪೇಟೆಂಟ್‌ಗಳನ್ನು ಹೊಂದಿದ್ದು, ಜಾಗತಿಕ ಮಾನದಂಡಗಳನ್ನು ರೂಪಿಸುವಲ್ಲಿ ಸಕ್ರಿಯವಾಗಿದೆ.
ಮುಂಬರುವ 10 ವರ್ಷಗಳಲ್ಲಿ ಕೇವಲ ಭಾರತಕ್ಕೆ ಮಾತ್ರ ಇಂಟರ್ನೆಟ್ ಒದಗಿಸುವುದರ ಆಚೆಗೆ, ಭಾರತದಲ್ಲೇ ನವೀನ ತಂತ್ರಜ್ಞಾನವನ್ನು ನಿರ್ಮಿಸಿ, ಅದನ್ನು ಜಗತ್ತಿಗೆ ಪೂರೈಸುವ ವಿಶ್ವದ ಪ್ರಮುಖ 'ತಂತ್ರಜ್ಞಾನದ ಮೂಲ'ವಾಗಿ ಜಿಯೋ ಹೊರಹೊಮ್ಮುತ್ತಿದೆ.

