ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ಯ ಎಕ್ಸ್ (ಟ್ವಿಟರ್) ಖಾತೆಯ ಮೇಲಿನ ನಿರ್ಬಂಧವನ್ನು ತಕ್ಷಣವೇ ತೆರವು ಮಾಡುವಂತೆ ದೆಹಲಿ ಹೈಕೋರ್ಟ್ ಮಂಗಳವಾರ (ಜು.7) ಆದೇಶಿಸಿದೆ. ಪಕ್ಷದ ಸಂಸ್ಥಾಪಕ ಅಭಿಜಿತ್ ದಿಪ್ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ನೀಟ್ ಪರೀಕ್ಷೆಯ ಸಮಯದಲ್ಲಿ ಈ ಖಾತೆಯ ಪೋಸ್ಟ್‌ಗಳು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಹಾಗೂ ಆತಂಕ ಸೃಷ್ಟಿಸಬಹುದು ಎಂಬ ಕಾರಣಕ್ಕೆ ಖಾತೆಯ ಮೇಲೆ ನಿರ್ಬಂಧ ಹೇರಲಾಗಿತ್ತು" ಎಂದು ಕೋರ್ಟ್‌ಗೆ ತಿಳಿಸಿದರು.
ಈ ವಾದವನ್ನು ಆಲಿಸಿದ ಹೈಕೋರ್ಟ್, ಪ್ರಸ್ತುತ ನೀಟ್ ಪರೀಕ್ಷೆಯು ಈಗಾಗಲೇ ಯಶಸ್ವಿಯಾಗಿ ಮುಕ್ತಾಯಗೊಂಡಿರುವುದರಿಂದ ಕೇಂದ್ರ ಸರ್ಕಾರ ವ್ಯಕ್ತಪಡಿಸಿದ್ದ ಪ್ರಾಥಮಿಕ ಕಳವಳಕ್ಕೆ ಈಗ ಯಾವುದೇ ಆಧಾರವಿಲ್ಲ ಎಂದು ಅಭಿಪ್ರಾಯಪಟ್ಟಿತು. ಸಮಸ್ಯೆ ಬಗೆಹರಿದಿರುವ ಹಿನ್ನೆಲೆಯಲ್ಲಿ ಖಾತೆಯ ಮೇಲಿನ ನಿರ್ಬಂಧವನ್ನು ಕೂಡಲೇ ತರವುಗೊಳಿಸುವಂತೆ ಆದೇಶಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನ್ಯಾಯಾಲಯದ ವಿಚಾರಣೆ ವೇಳೆ ನಿರುದ್ಯೋಗಿ ಯುವಕರ ಕುರಿತು ನೀಡಿದ ಹೇಳಿಕೆ ರಾಜಕೀಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಬಳಿಕ ತಮ್ಮ ಹೇಳಿಕೆ ನಿರುದ್ಯೋಗಿ ಯುವಕರನ್ನು ಉದ್ದೇಶಿಸದ್ದಲ್ಲ, ನಕಲಿ ಪದವಿಗಳನ್ನು ಪಡೆದು ಸಮಾಜದಲ್ಲಿ ಗೊಂದಲ ಸೃಷ್ಟಿಸುವವರ ಬಗ್ಗೆ ಮಾತ್ರ ಎಂದು ಅವರು ಸ್ಪಷ್ಟನೆ ನೀಡಿದ್ದರು.
ಈ ಹೇಳಿಕೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿ ಮೇ 16 ರಂದು 'ಕಾಕ್ರೋಚ್ ಜನತಾ ಪಾರ್ಟಿ' ಅಸ್ತಿತ್ವಕ್ಕೆ ಬಂದಿತ್ತು. ಅಸ್ತಿತ್ವಕ್ಕೆ ಬಂದ ಕೇವಲ ಐದೇ ದಿನಗಳಲ್ಲಿ ಅತ್ಯಂತ ವೇಗವಾಗಿ ಬೆಳೆದ ಈ ಒಕ್ಕೂಟದ ಇನ್‌ಸ್ಟಾಗ್ರಾಮ್ ಖಾತೆಯು ಬಿಜೆಪಿಯ ಅಧಿಕೃತ ಪೇಜ್‌ಗಿಂತಲೂ ಹೆಚ್ಚಿನ ಅಂದರೆ 1.64 ಕೋಟಿಗೂ (16.4 ಮಿಲಿಯನ್) ಅಧಿಕ ಫಾಲೋವರ್ಸ್ ಗಳಿಸಿ ದೇಶಾದ್ಯಂತ ಟ್ರೆಂಡ್ ಸೃಷ್ಟಿಸಿತ್ತು. ಈ ಭಾರಿ ಯಶಸ್ಸಿನ ಬೆನ್ನಲ್ಲೇ ಮೇ 21 ರಂದು ಕೇಂದ್ರ ಸರ್ಕಾರ ಇದರ ಎಕ್ಸ್ ಖಾತೆಯನ್ನು ಭಾರತದಲ್ಲಿ ಬ್ಲಾಕ್ ಮಾಡಿತ್ತು.

