Dailyhunt Logo
  • Light mode
    Follow system
    Dark mode
    • Play Story
    • App Story
ಕಾರವಾರ ವೈದ್ಯ ಕಾಲೇಜಿಗೆ ರಾಮಕೃಷ್ಣ ಹೆಗಡೆ ಹೆಸರು: ಸಿಎಂ ಡಿ.ಕೆ.ಶಿವಕುಮಾರ್

ಕಾರವಾರ ವೈದ್ಯ ಕಾಲೇಜಿಗೆ ರಾಮಕೃಷ್ಣ ಹೆಗಡೆ ಹೆಸರು: ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಕಾರವಾರ ಮೆಡಿಕಲ್ ಕಾಲೇಜಿಗೆ ರಾಮಕೃಷ್ಣ ಹೆಗಡೆ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಈ ಘೋಷಣೆ ಮಾಡಿದ್ದಾರೆ.

ಹಾಗೆಯೇ ರಾಜ್ಯದ ಅತ್ಯುತ್ತಮ ಪಂಚಾಯತ್‌ಗೆ ರಾಮಕೃಷ್ಣ ಹೆಗಡೆ ಜನ್ಮದಿನದಂದು 'ರಾಮಕೃಷ್ಣ ಹೆಗಡೆ ಶ್ರೇಷ್ಠ ಪಂಚಾಯಿತಿ ಪ್ರಶಸ್ತಿ' ನೀಡಲು ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿದ್ದೇನೆ. ಶಿವರಾಮ ಕಾರಂತ ಲೇಔಟ್‌ನ ಪ್ರಮುಖ ರಸ್ತೆಯೊಂದಕ್ಕೆ ಅವರ ಹೆಸರನ್ನು ಇಡಲಾಗುವುದು. ಹೆಗಡೆ ಅವರು ಮಾಡಿದ ಕೆಲಸ, ಸೇವೆ ಮತ್ತು ನಾಯಕತ್ವ ಶಾಶ್ವತವಾಗಿ ನೆನಪಿನಲ್ಲಿ ಉಳಿಯಬೇಕು ಎಂದು ಹೇಳಿದರು.

ಹೆಗಡೆ ಅವರ ಅಧಿಕಾರ ವಿಕೇಂದ್ರಿಕರಣ ಪರಿಕಲ್ಪನೆಯ ಬಗ್ಗೆ ರಾಜೀವ್ ಗಾಂಧಿ ಅವರೇ ನನ್ನ ಜೊತೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದು ನಾಯಕರನ್ನು ಸೃಷ್ಟಿಸುವ ಕಾರ್ಯಕ್ರಮ ಎಂದಿದ್ದರು. ಆ ಬಳಿಕ ರಾಜೀವ್ ಗಾಂಧಿ ಸಹ ಹೆಗಡೆ ಅವರ ಅಧಿಕಾರ ವಿಕೇಂದ್ರಿಕರಣದ ಮೂಲತತ್ವಗಳನ್ನು ಅಳವಡಿಸಿಕೊಂಡು ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿಯನ್ನು ತಂದರು. ಹೀಗಾಗಿ ಪಂಚಾಯಿತಿಯಿಂದ ಸಂಸತ್ತಿನವರೆಗೆ ಹೊಸ ನಾಯಕತ್ವವನ್ನು ಸೃಷ್ಟಿಸಿದ ನಾಯಕ ರಾಮಕೃಷ್ಣ ಹೆಗಡೆ. ಹೆಗಡೆ ಅವರು ಹಿಂಬಾಲಕರನ್ನು ಸೃಷ್ಟಿಸಲಿಲ್ಲ, ನಾಯಕರನ್ನು ಸೃಷ್ಟಿಸಿದರು. ಇಲ್ಲಿ ಕುಳಿತಿರುವ ನೂರಾರು ನಾಯಕರು ಅದಕ್ಕೆ ಸಾಕ್ಷಿ ಎಂದರು.

ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ್ದರು:

ಹೆಗಡೆ ಅವರ ಬದುಕು ಒಂದು ಡಿಕ್ಷನರಿಯಿದ್ದಂತೆ. ಅವರ ಆಚಾರ- ವಿಚಾರಗಳನ್ನು ನೋಡಿಕೊಂಡು ನಾವು ಅನೇಕ ವಿಚಾರಗಳನ್ನು ಕಲಿಯಬಹುದು. ಅಧಿಕಾರವನ್ನು ಶಕ್ತಿಯ ಸಂಕೇತವಾಗಿ ಅಲ್ಲ, ಜನಸೇವೆಗೆ ದೊರೆತ ಅವಕಾಶವಾಗಿ ನೋಡಬೇಕು ಎಂಬ ಸಂದೇಶವನ್ನು ಅವರು ನೀಡಿದ್ದರು. ಅವರು ಜಾತಿ ಆಧಾರಿತ ರಾಜಕಾರಣಕ್ಕೆ ಸೀಮಿತವಾಗದೆ ಮೌಲ್ಯಾಧಾರಿತ ರಾಜಕಾರಣ ಮತ್ತು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ್ದರು ಎಂದು ಸಿಎಂ ಹೇಳಿದರು.

ಶಿಕ್ಷಣದ ಖಾಸಗೀಕರಣಕ್ಕೆ ಆದ್ಯತೆ:

ಕರ್ನಾಟಕದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದ ವಿಸ್ತರಣೆಗೆ ಹೆಗಡೆ ಅವರ ನೀತಿಗಳು ಸಹಕಾರಿಯಾದವು. ಇಂದು ಕರ್ನಾಟಕದಲ್ಲಿ ವರ್ಷಕ್ಕೆ ಸುಮಾರು 13,940 ವೈದ್ಯರು ಹಾಗೂ 1.25 ಲಕ್ಷಕ್ಕೂ ಹೆಚ್ಚು ಎಂಜಿನಿಯರ್‌ಗಳು ರೂಪುಗೊಳ್ಳುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೂ ಹೆಗಡೆ ಕಾಲದ ನೀತಿಗಳು ದಾರಿ ಮಾಡಿಕೊಟ್ಟವು ಎಂದು ಸಿಎಂ ಹೇಳಿದರು.

ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ಶಿವಕುಮಾರ್, ಕನಕಪುರದಲ್ಲಿ ರಾಮಕೃಷ್ಣ ಹೆಗಡೆ ಮತ್ತು ಪಿಜಿಆರ್ ಸಿಂಧ್ಯಾ ಅವರ ಪ್ರಭಾವದ ನಡುವೆಯೇ ನಾನು ರಾಜಕೀಯಕ್ಕೆ ಬಂದೆ. ಹೆಗಡೆ ಅವರ ಪ್ರಭಾವದ ಕಾಲದಲ್ಲೇ ರಾಜಕೀಯ ಜೀವನವನ್ನು ಆರಂಭಿಸಿದೆ. ಒಂದು ಚುನಾವಣೆಯಲ್ಲಿ ಸೋತಿದ್ದೇನೆ. ಇಲ್ಲದಿದ್ದರೆ ಇಂದು 9ನೇ ಬಾರಿ ಶಾಸಕನಾಗಿರುತ್ತಿದ್ದೆ. ಕನಕಪುರದಿಂದ ನಿರಂತರವಾಗಿ ಜನರ ಆಶೀರ್ವಾದ ಪಡೆಯುತ್ತಿರುವುದು ನನ್ನ ಸೌಭಾಗ್ಯ ಎಂದರು.

ಪ್ರಧಾನಿಯಾಗುವ ಯೋಗ್ಯತೆ ಹೆಗಡೆಗಿತ್ತು: ರಾಮಕೃಷ್ಣ ಹೆಗಡೆ ಅವರಿಗೆ ದೇಶದ ಪ್ರಧಾನಿಯಾಗುವ ಯೋಗ್ಯತೆ ಮತ್ತು ಅವಕಾಶ ಎರಡೂ ಇತ್ತು. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಹೆಗಡೆ ಅವರು ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಅಧಿಕಾರದಲ್ಲಿದ್ದಾಗ ಹೃದಯ ಶ್ರೀಮಂತಿಕೆ ಇರಬೇಕು. ನಮ್ಮ ಸರ್ಕಾರ ಹೆಗಡೆ ಅವರ ಆಚಾರ-ವಿಚಾರಗಳನ್ನು ಮುಂದುವರಿಸಿಕೊಂಡು ಹೋಗಲಿದೆ ಎಂದು ಸಿಎಂ ಶಿವಕುಮಾರ್‌ ಹೇಳಿದರು.

ವೇದಿಕೆಯಲ್ಲಿ ಸಚಿವ ಬಸವರಾಜ ರಾಯರೆಡ್ಡಿ, ಶಾಸಕ, ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಮಾಜಿ ಸಂಸದ ಬಿ.ಎಲ್. ಶಂಕರ್, ರಾಷ್ಟ್ರೀಯ ನವನಿರ್ಮಾಣ ವೇದಿಕೆಯ ಅಧ್ಯಕ್ಷೆ, ರಾಮಕೃಷ್ಣ ಹೆಗಡೆ ಅವರ ಪುತ್ರಿ ಮಮತಾ ನಿಚಾನಿ, ಡಾ ಎಂ ಪಿ ನಾಡಗೌಡ, ಟಿ ಪ್ರಭಾಕರ್ ಇತರರು ಉಪಸ್ಥಿತರಿದ್ದರು.

ಹೆಗಡೆಗೆ ಪ್ರಧಾನಮಂತ್ರಿ ಆಗುವ ಸಾಮರ್ಥ್ಯವಿತ್ತು: ಸಿದ್ದರಾಮಯ್ಯ

ನಾನು ನೋಡಿದ ಮುಖ್ಯಮಂತ್ರಿಗಳಲ್ಲಿ ರಾಮಕೃಷ್ಣ ಹೆಗಡೆ ಅವರದ್ದು ಎತ್ತರದ ವ್ಯಕ್ತಿತ್ವ. ಅವರಲ್ಲಿ ಎಲ್ಲ ಗುಣಗಳಿತ್ತು. ಅವರಿಗೆ ಪ್ರಧಾನ ಮಂತ್ರಿಯಾಗುವ ಸಾಮರ್ಥ್ಯವಿತ್ತು. ಅವರು ಪ್ರಧಾನಿ ಆಗಲಿಲ್ಲ ಎಂಬ ಕೊರಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಾನು 1983ರಲ್ಲಿ ಮೊದಲ ಬಾರಿ ಗೆದ್ದಿದ್ದೆ. ಪಕ್ಷೇತರ ಶಾಸಕನಾಗಿದ್ದ ನನ್ನನ್ನು ರಾಮಕೃಷ್ಣ ಹೆಗಡೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದರು. ಕನ್ನಡದ ಮೇಲಿನ ನಿನ್ನ ಆಸಕ್ತಿಯನ್ನು ಗಮನಿಸಿ ಜವಾಬ್ದಾರಿ ನೀಡಿದ್ದೇನೆ ಎಂದಿದ್ದರು. ಆ ಬಳಿಕ 1984ರ ಆಗಸ್ಟ್‌ನಲ್ಲಿ ನನ್ನನ್ನು ರೇಷ್ಮೆ ಸಚಿವನನ್ನಾಗಿ ಮಾಡಿದ್ದರು. ಅವರದ್ದು ಬಲ, ಎಡ ಮತ್ತು ಪಕ್ಷೇತರ ಶಾಸಕರ ಬೆಂಬಲದಿಂದ ರೂಪಿಸಲಾಗಿದ್ದ ಸರ್ಕಾರವಾಗಿತ್ತು. ಆದರೂ ಎಲ್ಲರನ್ನೂ ಒಟ್ಟುಗೂಡಿಸಿ ಸರ್ಕಾರ ನಡೆಸಿದರು. ಬಳಿಕ 1985ರಲ್ಲಿ ಸರ್ಕಾರವನ್ನು ವಿಸರ್ಜಿಸಿ, ಬಹುಮತದೊಂದಿಗೆ ಅಧಿಕಾರಕ್ಕೆ ಬಂದರು ಎಂದು ಹೇಳಿದರು.

ಬಾಟ್ಲಿಂಗ್ ಹಗರಣ ಸಂಬಂಧ ರಾಜೀನಾಮೆ ನೀಡಿದವರನ್ನು ಮನವೊಲಿಸಲಾಯಿತು. ಆ ಬಳಿಕ ಟೆಲಿಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿದರು. ಆಗ ಅವರ ಮನವೊಲಿಸುವ ಪ್ರಯತ್ನ ಕೈಗೂಡಲಿಲ್ಲ. ಹೆಗಡೆ ಅವರು ಸೂಕ್ಷ್ಮಮತಿಗಳಾಗಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ಯಾರಿಗೆ ಸಾಮರ್ಥ್ಯವಿದೆಯೋ ಅವರನ್ನು ಗುರುತಿಸಿ ಬೆಳೆಸುತ್ತಿದ್ದರು. ತಾವು ನಂಬಿದ್ದ ಮೌಲ್ಯಕ್ಕೆ ಬದ್ಧರಾಗಿದ್ದರು. ಮೌಲ್ಯಧಾರಿತ ರಾಜಕಾರಣ ಮಾಡಿದವರು. ರಾಜಕಾರಣ ಎಂದರೆ ಕಾರ್ಯಕ್ರಮಗಳ ಜಾರಿ, ಜನಸೇವೆ ಮಾತ್ರವಲ್ಲ, ಜವಾಬ್ದಾರಿ ಮತ್ತು ಉತ್ತರದಾಯಿತ್ವ ಇರಬೇಕು ಎಂದು ನಂಬಿದ್ದರು ಎಂದು ಹೇಳಿದರು.

ಹೆಗಡೆ ಹೆಸರಲ್ಲಿ ಯೋಜನೆ ತನ್ನಿ

ಹೆಗಡೆ ಅವರದ್ದು ಸೂಜಿಗಲ್ಲಿನಂತೆ ಸೆಳೆಯುವ ವ್ಯಕ್ತಿತ್ವ. ಅವರ ಭಾಷಣ ಕೇಳಲು ನಾವು ಹೋಗುತ್ತಿದ್ದೇವು. ಅವರಿಗೆ ಎಂದಿಗೂ ರಾಜಿಯಾಗಿ ರಾಜಕಾರಣ ಮಾಡಿದವರಲ್ಲ. ಅದ್ಭುತವಾದ ಸಾಮಾಜಿಕ ಅಭಿಯಂತರರಾಗಿದ್ದರು. ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಯಾವುದಾದರು ಯೋಜನೆಗಳನ್ನು ಮುಖ್ಯಮಂತ್ರಿಗಳು ಜಾರಿಗೆ ತರಲಿ. - ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಉಪರಾಷ್ಟ್ರಪತಿ ರಾಧಾಕೃಷ್ಣನ್‌, ವೆಂಕಯ್ಯ ನಾಯ್ಡು, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಆರ್‌.ವಿ.ದೇಶಪಾಂಡೆ, ಪ್ರಹ್ಲಾದ್‌ ಜೋಶಿ, ಬಸವರಾಜ ರಾಯರಡ್ಡಿ, ಮಮತಾ ನಿಚ್ಚಾನಿ, ಬಿ.ಎಲ್‌.ಶಂಕರ್‌ ಇತರರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Udayavani