Dailyhunt Logo
  • Light mode
    Follow system
    Dark mode
    • Play Story
    • App Story
ಕಾರಿನ ಮೇಲ್ಛಾವಣಿ ಏರಿ 40 ಕಿ.ಮೀ ಪ್ರಯಾಣಿಸಿದ ಪೊಲೀಸ್ ಪೇದೆ: ಆರೋಪಿಗಳ ಬಂಧನ

ಕಾರಿನ ಮೇಲ್ಛಾವಣಿ ಏರಿ 40 ಕಿ.ಮೀ ಪ್ರಯಾಣಿಸಿದ ಪೊಲೀಸ್ ಪೇದೆ: ಆರೋಪಿಗಳ ಬಂಧನ

ಕೊಯಮತ್ತೂರು/ತಿರುಪ್ಪೂರ: ತಮಿಳುನಾಡಿನ ಕೊಯಮತ್ತೂರು ಬಳಿ ನಿಷೇಧಿತ ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಹಿಡಿಯಲು ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಒಬ್ಬರು ಸಾಹಸ ಮೆರೆದಿದ್ದು, ಚಲಿಸುವ ಕಾರಿನ ಛಾವಣಿಯ ಮೇಲೆಯೇ ಸುಮಾರು 40 ಕಿಲೋಮೀಟರ್ ಪ್ರಯಾಣಿಸಿ ಆರೋಪಿಗಳ ಆಟಕ್ಕೆ ಇತಿಶ್ರೀ ಹಾಡಿದ ರೋಚಕ ಘಟನೆ ನಡೆದಿದೆ.

ಹೆಡ್ ಕಾನ್‌ಸ್ಟೇಬಲ್ ವೇಲ್ಮುರುಗನ್ ಎಂಬುವವರೇ ಈ ಸಾಹಸ ಮೆರೆದ ಧೈರ್ಯಶಾಲಿ ಪೇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬು ಧರಾ (27), ರಾಜೇಶ್ (23) ಮತ್ತು ಸುರೇಶ್ (20) ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಸುಮಾರು 300 ಕೆಜಿ ನಿಷೇಧಿತ ಗುಟ್ಕಾ ಉತ್ಪನ್ನಗಳು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಘಟನೆಯ ವಿವರ
ಕೊಯಮತ್ತೂರು ಸಮೀಪ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ವೇಗವಾಗಿ ಬಂದ ಕಾರೊಂದನ್ನು ತಡೆದು ನಿಲ್ಲಿಸಿದ್ದಾರೆ. ಕಾರಿನ ಹಿಂಭಾಗದಲ್ಲಿ ಅನುಮಾನಾಸ್ಪದ ಚೀಲಗಳು ಇರುವುದನ್ನು ಗಮನಿಸಿದ ಸಬ್-ಇನ್‌ಸ್ಪೆಕ್ಟರ್‌ ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಮೂವರು ಆರೋಪಿಗಳು ಪೊಲೀಸರನ್ನು ತಳ್ಳಿ, ಕಾರಿನ ಬಾಗಿಲುಗಳನ್ನು ಲಾಕ್ ಮಾಡಿಕೊಂಡು ವೇಗವಾಗಿ ಪರಾರಿಯಾಗಲು ಯತ್ನಿಸಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಹೆಡ್ ಕಾನ್‌ಸ್ಟೇಬಲ್ ವೇಲ್ಮುರುಗನ್ ಅವರು ಚಲಿಸುತ್ತಿದ್ದ ಕಾರಿನ ಮೇಲ್ಛಾವಣಿಯ (ರೂಫ್) ಮೇಲೆ ಜಿಗಿದು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.

ಟೋಲ್ ಪ್ಲಾಜಾ ದಾಟಿ ಅತಿವೇಗದ ಚಾಲನೆ
ವೇಲ್ಮುರುಗನ್ ಕಾರಿನ ಮೇಲಿದ್ದರೂ ಲೆಕ್ಕಿಸದ ಚಾಲಕ ಕಾರನ್ನು ಅತಿವೇಗವಾಗಿ ಓಡಿಸಿಕೊಂಡು ಹೋಗಿದ್ದಾನೆ. ಮಾರ್ಗಮಧ್ಯದಲ್ಲಿದ್ದ ಟೋಲ್ ಪ್ಲಾಜಾದಲ್ಲಿ ಫಾಸ್ಟ್ಯಾಗ್ (FASTag) ಮೂಲಕ ಹಣ ಪಾವತಿಸಿ ಬ್ಯಾರಿಕೇಡ್ ದಾಟಿಕೊಂಡು ಕಾರು ಮುಂದೆ ಸಾಗಿದೆ. ವೇಗವಾಗಿ ಚಲಿಸುತ್ತಿದ್ದ ಕಾರಿನ ಛಾವಣಿಯ ಮೇಲೆ ಪೇದೆ ಅಪಾಯಕಾರಿ ಸ್ಥಿತಿಯಲ್ಲಿ ನೇತಾಡಿಕೊಂಡು ಹೋಗುತ್ತಿರುವುದನ್ನು ಕಂಡ ಹಾದಿಹೋಕರು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.

40 ಕಿ.ಮೀ ಚೇಸ್, ಅಂಬುಲೆನ್ಸ್ - ಸಾರ್ವಜನಿಕರ ನೆರವು
ಘಟನೆಯ ಬಗ್ಗೆ ತಕ್ಷಣ ಮಾಹಿತಿ ಪಡೆದ ನೆರೆ ಜಿಲ್ಲೆಯಾದ ತಿರುಪ್ಪೂರ್ ಪೊಲೀಸರು ಹಾಗೂ ಅಂಬುಲೆನ್ಸ್ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಸುಮಾರು 40 ಕಿಲೋಮೀಟರ್‌ಗಳಿಗೂ ಹೆಚ್ಚು ಕಾಲ ನಡೆದ ಈ ಚೇಸಿಂಗ್ ಕೊನೆಗೆ ತಿರುಪ್ಪೂರ್‌ ಬಳಿ ಮುಕ್ತಾಯಗೊಂಡಿದೆ. ಪೊಲೀಸ್ ವಾಹನಗಳು ಹಾಗೂ ಅಂಬುಲೆನ್ಸ್‌ಗಳು ಕಾರನ್ನು ಸುತ್ತುವರಿದು ತಡೆದು ನಿಲ್ಲಿಸಿವೆ.ಕಾರು ನಿಲ್ಲುತ್ತಿದ್ದಂತೆ ಒಬ್ಬನನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಯಿತಾದರೂ, ಉಳಿದ ಇಬ್ಬರು ಪರಾರಿಯಾಗಲು ಯತ್ನಿಸಿದ್ದರು. ನಂತರ ಶೋಧ ಕಾರ್ಯಾಚರಣೆ ನಡೆಸಿ ಅವರಿಬ್ಬರನ್ನೂ ಬಂಧಿಸಲಾಯಿತು.

ವಿಚಾರಣೆ ವೇಳೆ ಬೆಂಗಳೂರಿನಿಂದ ಕೊಯಮತ್ತೂರಿಗೆ ಈ ಗುಟ್ಕಾ ಸರಕನ್ನು ತಲುಪಿಸಲು ತೆಗೆದುಕೊಂಡು ಹೋಗುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸಾಹಸ ಮೆರೆದ ಹೆಡ್ ಕಾನ್‌ಸ್ಟೇಬಲ್ ವೇಲ್ಮುರುಗನ್ ಅವರ ಧೈರ್ಯ ಹಾಗೂ ಪೊಲೀಸರಿಗೆ ನೆರವಾದ ಅಂಬುಲೆನ್ಸ್ ಸಿಬ್ಬಂದಿ ಮತ್ತು ಸಾರ್ವಜನಿಕರ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani