ಕಾರ್ಕಳ: ಸಚಿವ ನಾಗೇಂದ್ರ ರಾಜೀನಾಮೆ ನೀಡಿರುವ ಬೆಳವಣಿಗೆಗೆ ಪ್ರತಿಕ್ರಿಯೆಯಾಗಿ ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ, ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದರು.
ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವನ್ನು ಮುಂದಿಟ್ಟ ಕಾಂಗ್ರೆಸ್ ಕಾರ್ಯಕರ್ತರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸುನಿಲ್ ಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸುನಿಲ್ ಕುಮಾರ್ ಅವರ ಕಚೇರಿಗೆ ತೆರಳಿ ಸ್ಟಿಕರ್ ಅಂಟಿಸುವ ಮೂಲಕ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದರು. ಆದರೆ ಕಚೇರಿಗೆ ತೆರಳುವ ಮಾರ್ಗ ಮಧ್ಯೆಯೇ ಪೊಲೀಸರು ಕಾರ್ಯಕರ್ತರನ್ನು ತಡೆದು ವಶಕ್ಕೆ ಪಡೆದರು.
ಕಾರ್ಕಳದ ಸರ್ವಜ್ಞ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಕೆಲಕಾಲ ಹೈಡ್ರಾಮ ನಡೆಯಿತು.ಪ್ರತಿಭಟನಾಕಾರರು ಸರ್ಕಾರ ಹಾಗೂ ಶಾಸಕ ಸುನಿಲ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸಾಧ್ಯತೆಯನ್ನು ಗಮನಿಸಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಸುನಿಲ್ ಕುಮಾರ್ ಕಚೇರಿ, ಮನೆಯಲ್ಲಿ ಜಮಾಯಿಸಿದ ಕಾರ್ಯಕರ್ತರು
ಕಾಂಗ್ರೆಸ್ ಸ್ಟಿಕ್ಕರ್ ಅಭಿಯಾನದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಶಾಸಕ ವಿ. ಸುನಿಲ್ ಕುಮಾರ್ ಅವರ ಕಚೇರಿ ಹಾಗೂ ನಿವಾಸದ ಬಳಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ ಘಟನೆ ನಡೆಯಿತು.
ಕಾಂಗ್ರೆಸ್ ಕಾರ್ಯಕರ್ತರು ಬೆಳಗ್ಗೆ 10 ಗಂಟೆ ಸುಮಾರಿಗೆ ಶಾಸಕರ ಕಚೇರಿ ಹಾಗೂ ಮನೆಗೆ ತೆರಳಿ ಸ್ಟಿಕ್ಕರ್ ಅಂಟಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಸ್ಥಳಕ್ಕೆ ಆಗಮಿಸಿ ಶಾಸಕರ ಪರ ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶುಭದ ರಾವ್ ವಿರುದ್ಧವೂ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಶಾಸಕರ ಕಚೇರಿ ಹಾಗೂ ನಿವಾಸದ ಸುತ್ತ ಬಿಗಿ ಭದ್ರತೆ ಕಲ್ಪಿಸಿತ್ತು. ಸರ್ವಜ್ಞ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ 100ಕ್ಕೂ ಅಧಿಕ ಪೊಲೀಸ್ ಸಿಬಂದಿಯನ್ನು ನಿಯೋಜಿಸಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಲಾಯಿತು.
ಕಾರ್ಕಳ ಉಪವಿಭಾಗದ ಎಎಸ್‌ಪಿ ಇಶಿತಾ ಗುಪ್ತಾ ನೇತೃತ್ವದಲ್ಲಿ ವಿವಿಧ ಠಾಣೆಗಳ ಅಧಿಕಾರಿಗಳು ಬಂದೋಬಸ್ತ್ ವ್ಯವಸ್ಥೆ ಮೇಲ್ವಿಚಾರಣೆ ನಡೆಸಿದರು.

