ಲಕ್ನೋ: ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಕ್ಕೀಡಾಗಿ ಪಲ್ಟಿಯಾಗಿದ್ದ ಕಾರಿನೊಳಗೆ ಸಿಲುಕಿದ್ದ ಐವರನ್ನು ಪೊಲೀಸ್ ಕಾನ್‌ಸ್ಟೆಬಲ್ ದಂಪತಿ ಸಮಯಪ್ರಜ್ಞೆ ಹಾಗೂ ಸಾಹಸದಿಂದ ರಕ್ಷಿಸಿದ್ದಾರೆ.
ಉತ್ತರ ಪ್ರದೇಶದ ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇಯ 171ನೇ ಕಿ.ಮೀ.
ತಿರುವಿನ ಬಳಿ ಘಟನೆ ನಡೆದಿದೆ. ಕಾನ್‌ಸ್ಟೆಬಲ್ ಅಮಿತ್ ತಿಯೋತಿಯಾ ಅವರು ಪತ್ನಿ ಅರ್ಚನಾ ಸಿಂಗ್ ಅವರೊಂದಿಗೆ ಸೌರಿಖ್‌ನಿಂದ ಕನೌಜ್ ಕಡೆಗೆ ತೆರಳುತ್ತಿದ್ದಾಗ ರಸ್ತೆ ಬದಿಯಲ್ಲಿ ಪಲ್ಟಿಯಾಗಿದ್ದ ಕಾರನ್ನು ಗಮನಿಸಿದ್ದಾರೆ. ಕೂಡಲೇ ವಾಹನ ನಿಲ್ಲಿಸಿದ ದಂಪತಿ, ಕಾರಿನೊಳಗೆ ಸಿಲುಕಿದ್ದವರ ನೆರವಿಗೆ ಧಾವಿಸಿದ್ದಾರೆ.
ಕಾರಿನೊಳಗಿನಿಂದ ಸಹಾಯಕ್ಕಾಗಿ ಕೂಗುತ್ತಿದ್ದ ಧ್ವನಿ ಕೇಳಿಬಂದ ಹಿನ್ನೆಲೆಯಲ್ಲಿ ಅಮಿತ್ ಅವರು ತಮ್ಮ ಸರ್ವಿಸ್ ರೈಫಲ್ ಬಳಸಿ ಕಾರಿನ ಗಾಜುಗಳನ್ನು ಒಡೆದಿದ್ದಾರೆ. ಬಳಿಕ ಸಾಕಷ್ಟು ಪ್ರಯತ್ನದ ನಂತರ ಕಾರಿನಲ್ಲಿದ್ದ ಐವರನ್ನೂ ಒಬ್ಬೊಬ್ಬರಾಗಿ ಹೊರತೆಗೆದು ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ಐವರನ್ನೂ ಸೌರಿಖ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಕಷ್ಟದ ಸಂದರ್ಭದಲ್ಲಿ ಸಮಯಪ್ರಜ್ಞೆ, ಧೈರ್ಯ ಹಾಗೂ ತತ್ ಕ್ಷಣದ ಸ್ಪಂದನೆ ತೋರಿದ ಪೊಲೀಸ್ ದಂಪತಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

