ಬೆಂಗಳೂರು: ರಾಜ್ಯದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕುಸಿದು ಬಿದ್ದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಆಯೋಜಿಸಿದ್ದ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರ ಅಭಿನಂದನಾ ಸಮಾರಂಭದಲ್ಲಿ 85 ವರ್ಷದ ನ್ಯಾ.ಸಂತೋಷ್ ಹೆಗ್ಡೆ ಅವರು ಏಕಾಏಕಿ ಕುಸಿದು ಬಿದ್ದುದರಿಂದ ಆತಂಕ ಉಂಟಾಯಿತು.
ಈ ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಾತು ಆರಂಭಿಸಿದ ಹೆಗ್ಡೆ ಕೇವಲ 1 ನಿಮಿಷ 58 ಸೆಕೆಂಡ್‌ನಲ್ಲಿ ತಮ್ಮ ಭಾಷಣ ನಿಲ್ಲಿಸಿ ಶಾಸಕ ಸುರೇಶ್ ಕುಮಾರ್ ಅವರ ಬಳಿಯ ಆಸನದಲ್ಲಿ ಬಂದು ಕುಳಿತರು. ಈ ವೇಳೆ ಆರೋಗ್ಯ ಕೈ ಕೊಡುತ್ತಿರುವ ಬಗ್ಗೆ ಸುರೇಶ್ ಕುಮಾರ್ ಬಳಿ ಕೈ ಸನ್ನೆ ಮಾಡುತ್ತ ಹೇಳುತ್ತಿದ್ದರು. ಕೆಲ ನಿಮಿಷದಲ್ಲೇ ತಮ್ಮ ಬಟ್ಟೆಯ ಮೇಲೆ ವಾಂತಿ ಮಾಡಿಕೊಂಡರು. ಕೂಡಲೇ ಅವರನ್ನು ಕಳುಹಿಸಿಕೊಡುವ ಕಾರ್ಯ ನಡೆಯಿತು. ಸ್ಪೀಕರ್ ಕುಳಿತ ಆಸನದ ಬಳಿ ಕೈ ಮುಗಿಯುತ್ತ ಬರುತ್ತಿದ್ದಂತೆ ದಿಢೀರ್ ಕುಸಿದು ಬಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಸ್ಪೀಕರ್ ಯು.ಟಿ.ಖಾದರ್, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸಿದರು.
ಸ್ಪೀಕರ್ ವಾಹನದಲ್ಲೇ ಆಸ್ಪತ್ರೆಗೆ ರವಾನೆ:
ʼಕಾರ್ಯಕ್ರಮದ ಭಾಷಣ ಮಾಡುವ ಸಂದರ್ಭದಲ್ಲೇ ಸ್ವಲ್ಪಮಟ್ಟಿನ ಬಳಲಿಕೆ ಕಂಡು ಬಂದರು. ಸ್ವಲ್ಪ ಹೊತ್ತು ಭಾಷಣ ಮಾಡಿದ ಬಳಿಕ ಬಂದು ಕುಳಿತುಕೊಂಡ ಅವರು ಎರಡು ಬಾರಿ ವಾಂತಿಯಾಗಿ ತೀವ್ರ ಅಸ್ವಸ್ಥಗೊಂಡರು. ಅವರಿಗೆ ತಲೆ ಸುತ್ತು ಬಂದು ಅಲ್ಲೇ ಕುಸಿದು ಬಿದ್ದರು. ಅಲ್ಲಿದ್ದವರು ನೀರು ಕುಡಿಸಿದರೂ ಚೇತರಿಕೆ ಕಾಣಲಿಲ್ಲ. ಆಗಲೇ ಅವರಿಗೆ ಅಲ್ಲೇ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಕಾರ್ಯಕ್ರಮಕ್ಕೆ ಬಂದಿದ್ದ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರ ಸರ್ಕಾರಿ ವಾಹನದಲ್ಲಿ ತಕ್ಷಣವೇ ಸಂತೋಷ್ ಹೆಗ್ಡೆ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಆಂಬ್ಯುಲೆನ್ಸ್ ಮೂಲಕ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಯಿತು ಎಂದು ಕಾರ್ಯಕ್ರಮದಲ್ಲೇ ಇದ್ದ ವೈದ್ಯ ರಮೇಶ್ ಬಾಬು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಸಂತೋಷ್ ಹೆಗ್ಡೆ ಅವರನ್ನು ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಬಳಿಕ ಸಂತೋಷ್ ಹೆಗ್ಡೆ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮನೆಯಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕುಸಿದು ಬಿದ್ದಿದ್ದು ಏಕೆ?:
ಸಂತೋಷ್ ಹೆಗ್ಡೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅವರಿಗೆ ಯಾವುದೇ ಹೃದಯಾಘಾತ ಸಂಭವಿಸಿಲ್ಲ. ಸುಸ್ತಾದ ಹಿನ್ನೆಲೆಯಲ್ಲಿ ತಲೆಸುತ್ತು ಉಂಟಾಗಿ ಕುಸಿದುಬಿದ್ದಿದ್ದಾರೆ. ಪ್ರಸ್ತುತ ಅವರ ಬಿಪಿ ಮತ್ತು ಶುಗರ್ ಎಲ್ಲವೂ ನಾರ್ಮಲ್ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈಗ ಚೇತರಿಸಿಕೊಂಡಿದ್ದಾರೆ: ಯು.ಟಿ.ಖಾದರ್
ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆಯವರು ಭಾಷಣದ ಬಳಿಕ ಸ್ವಲ್ಪಹೊತ್ತು ಕುಳಿತುಕೊಂಡ ವೇಳೆ ವಾಂತಿ ಮಾಡಿದರು. ಮನೆಗೆ ತೆರಳುತ್ತೇನೆ ಎಂದು ಹೊರಡುವಾಗ ವೇದಿಕೆಯಲ್ಲಿ ಅಸ್ವಸ್ಥಗೊಂಡು ಕುಸಿದು ಬಿದ್ದರು. ಅಲ್ಲೇ ಇದ್ದ ವೈದ್ಯ ರಮೇಶ್ ಬಾಬು ಅವರು ಪ್ರಥಮ ಚಿಕಿತ್ಸೆ ನೀಡಿದರು ಬಳಿಕ ಸಂತೋಷ್ ಹೆಗ್ಡೆ ಅವರನ್ನು ನನ್ನ ವಾಹನದಲ್ಲೇ ಆಸ್ಪತ್ರೆಗೆ ರವಾನಿಸಲಾಗಿದೆ. ಈಗ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾಹಿತಿ ನೀಡಿದರು.
ಘಟನೆಗೂ ಮುನ್ನ ಮಾತನಾಡಿದ್ದ ಸಂತೋಷ್ ಹೆಗ್ಡೆ
ಇದಕ್ಕೂ ಮೊದಲು ಮಾತನಾಡಿದ ಎನ್. ಸಂತೋಷ ಹೆಗ್ಡೆ , ಸಮಾಜಲ್ಲಿ ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಸಮಾಜದ ಕರ್ತವ್ಯವಾಗಿದೆ. ಆ ಕೆಲಸವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳು ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು. ಜೀವನದಲ್ಲಿ ಪ್ರಶಸ್ತಿ ಪಡೆಯುವುದು ಸುಲಭವಲ್ಲ. ಸಿಂಧ್ಯ ಅವರು ತಾವು ಮಾಡಿರುವ ಕೆಲಸದಿಂದಾಗಿ ಈ ಪ್ರಶಸ್ತಿ ಪಡೆದಿದ್ದಾರೆ. ಅದಕ್ಕೆ ಅವರಿಗೆ ನನ್ನ ಅಭಿನಂದನೆಗಳು ಎಂದರು. ಸಿಂಧ್ಯ ಅವರನ್ನು ತುರ್ತು ಪರಿಸ್ಥಿತಿಯ ಸಂದರ್ಭದಿಂದಲೂ ನೋಡುತ್ತಿದ್ದೇನೆ. ಅವರು ಮಾಡಿದ ಕೆಲಸ ನಾನು ನೋಡಿದ್ದೇನೆ. ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವುದಾಗಿ ಹೇಳಿದರು.

