Dailyhunt Logo
  • Light mode
    Follow system
    Dark mode
    • Play Story
    • App Story
Kala Sampada: ಡಾ| ಸ್ನೇಹಾ ಆಚಾರ್ಯರ ಭಕ್ತಿಪೂರ್ಣ ನಾಟ್ಯಾರ್ಚನೆ

Kala Sampada: ಡಾ| ಸ್ನೇಹಾ ಆಚಾರ್ಯರ ಭಕ್ತಿಪೂರ್ಣ ನಾಟ್ಯಾರ್ಚನೆ

ಸುಮಾರು 9 ವರ್ಷಗಳಿಂದ ಉಡುಪಿಯ ಸೊಸೆಯಾಗಿ ಕೊಯಂಬತ್ತೂರಿನಿಂದ ಬಂದು ನೆಲೆಸಿರುವ, ವೃತ್ತಿಯಲ್ಲಿ ಫಿಸಿಯೋಥೆರಪಿಸ್ಟ್‌ ಆಗಿ ತೀವ್ರ ಅನುರಾಗ (Passion)ದಿಂದ ಭರತನಾಟ್ಯದ ಪ್ರಸಿದ್ಧ ನೃತ್ಯಾಂಗನೆಯಾಗಿರುವ ಡಾ| ಸ್ನೇಹಾ ಆಚಾರ್ಯ ಅವರು, ಇತ್ತೀಚೆಗೆ ಬಾರ್ಕೂರಿನ ಭಂಡಾರಿಕೇರಿ ಮಠದ ಶ್ರೀವಿದ್ಯೆàಶತೀರ್ಥ ಶ್ರೀಪಾದಂಗಳವರ 47ನೇ ಚಾತು ರ್ಮಾಸ ವ್ರತಾಚರಣೆಯ ಪ್ರಯುಕ್ತ, ಇಲ್ಲಿನ ಮಠದಲ್ಲಿ, ಪುಟ್ಟದಾಗಿ, ಸಂಪ್ರದಾಯಬದ್ಧ ಅಪರೂಪದ ನೃತ್ಯಬಂಧ ಗಳನ್ನು ಆಪ್ಯಾಯಮಾನವಾಗಿ ಪ್ರದರ್ಶಿಸಿದರು.

ವರಮಹಾಲಕ್ಷ್ಮೀ ವ್ರತದ ಪರ್ವದಿನದಂದು ಈ ನೃತ್ಯಪ್ರದರ್ಶನವು ಹೆಚ್ಚು ಕ್ಲಿಷ್ಟಕರವಲ್ಲದ, ಲಘುವಾದ, ನೃತ್ಯ, ಅಭಿನಯದ ಮೆರುಗು, ಸಂಚಾರಿಗಳಿರುವ ಉತ್ತಮ ನೃತ್ಯಬಂಧಗಳಿಂದ ಕೂಡಿತ್ತು.

ಪ್ರಾರ್ಥನಾ ರೂಪದ ನೃತ್ಯವಾಗಿ ಲಕ್ಷ್ಮೀಸ್ತೋತ್ರವು ಕಲ್ಯಾಣಿರಾಗ ದಲ್ಲಿದ್ದು, ಅಷ್ಟಲಕ್ಷ್ಮೀಯವರ ವರ್ಣನೆ, ವಿವಿಧ ಭಂಗಿ, ಚಾರಿಗಳಿಂದಾಗಿ, ಸಂದರ್ಭೋಚಿತವಾಗಿ ನಿರ್ವಹಿಸಲ್ಪ ಟ್ಟಿತು. ಶಿವರಂಜಿನಿ ರಾಗದ "ಯಾಕೆ ನಿರ್ದಯನಾದೆಯೋ' ದಾಸರ ಕೃತಿ ಪ್ರಾರಂಭದ ಉಗಾಭೋಗದಲ್ಲಿ ದ್ರೌಪದಿಯ ಅಳಲನ್ನು ಕೃಷ್ಣನಲ್ಲಿ ತೋಡಿಕೊಳ್ಳುವ ಘಟನೆಗಳನ್ನು ಸಂಕ್ಷಿಪ್ತವಾಗಿ, ಮನೋಜ್ಞವಾಗಿ ಪ್ರಸ್ತುತಿಗೊಳಿಸಿ, ರಸಿಕ ರನ್ನು ಮೆಚ್ಚಿಸಿದರು.

ಶ್ರೀಕೃಷ್ಣನ ಕುರಿತಾದ ರಾಗಮಾಲಿಕೆ ಯಲ್ಲಿ ರಚಿಸಲ್ಪಟ್ಟ ಗೋವಿಂದ ಒಸೈ ವಿರಚಿತ ತಮಿಳು ಪದಂ ಆಗಿದ್ದು, ಶ್ರೀಕೃಷ್ಣನ ಕೊಳಲ ನಾದಕ್ಕೆ ಮೋಹಿತರಾಗಿ ರುವ ಹಸುಗಳು, ನವಿಲು, ಗೋಪಿಕೆಯರ ವೈವಿಧ್ಯ ಮಯ ಅಡವುಗಳೊಂದಿಗೆ ನೃತ್ಯ ಸಂಯೋಜಿಸಲ್ಪಟ್ಟಿದ್ದು, ಕೊನೆಗೆ ʼಕಾಳೀಯಮರ್ದನ'ದ ನೃತ್ಯದೊಂದಿಗೆ ಚೆನ್ನಾಗಿ ಮೂಡಿಬಂದವು.

ರಾಮನಾರಾಯಣ ಎಂಬ ಲಕ್ಷ್ಮಣ ಆಚಾರ್ಯರ ಸಂಸ್ಕೃತ ಕೃತಿಗೆ ರಾಮಾಯಣದ ಪ್ರಮುಖ ಘಟನೆಗಳನ್ನು ಕಥಾನಿರೂಪಣೆ (Story Telling) ಯ ನೃತ್ಯವು ಸ್ನೇಹಾರವರು ಪುಟ್ಟದಾದ ಕಥಾ ಸನ್ನಿವೇಶಗಳಿಂದ ಅಭಿವ್ಯಕ್ತಗೊಳಿಸಿ, ಭೇಷ್‌ ಅನ್ನಿಸಿಕೊಂಡರು. ಮುಂದಿನ ಜಗದೋದ್ಧಾರನ ದಾಸರ ಪದ ಕೃಷ್ಣ ಯಶೋದೆಯರ ವಾತ್ಸಲ್ಯಭಾವವನ್ನು ಪ್ರಕಟಿಸಿದರೆ, ರುಸ್ಲಿ ರಾಧಾ ಎಂಬ ಅಭಂಗ್‌ವು ಕೃಷ್ಣರಾಧೆಯರ ಮುನಿಸು, ಛಲವನ್ನೂ, ಕೊನೆಗೆ ಅವರಲ್ಲಿ ಯಾರು ಮಣಿಯುತ್ತಾರೋ ಎಂಬ ಕುತೂಹಲವನ್ನೂ ಸ್ನೇಹ, ಮುದ್ದಾಗಿ ಅಭಿವ್ಯಕ್ತಗೊಳಿಸಿದರು.

ಬಾಲಮುರಲಿ ಕೃಷ್ಣರವರ ಕದನ ಕುತೂಹಲರಾಗದ ತಿಲ್ಲಾನ, ಜಂಜೂಟ ರಾಗದ ಹನುಮಾನ್‌ ಕಾವಡಿ ಜಾನಪದ ಶೈಲಿಯ ನೃತ್ಯವು ಭರತನಾಟ್ಯದ ಝಲಕನ್ನೂ ಸೇರ್ಪಡೆಗೊಂಡು, ಹನುಮಂತನಿಗೆ ಶ್ರೀರಾಮನ ಮೇಲಿರುವ ಭಕ್ತಿ, ಸೇವೆ ಹಾಗೂ ಶರಣಾಗತಿಯ ಭಾವವನ್ನು ನರ್ತನದಿಂದ ಹೃದ್ಯವಾಗಿ ವಿವರಿಸಿತು. ಮಂಗಳದೊಂದಿಗೆ ಈ ಪ್ರದರ್ಶನ ಸಂಪನ್ನಗೊಂಡಿತು.

ಡಾ| ಸ್ನೇಹಾರವರ ಈ ಕಾರ್ಯಕ್ರಮದಲ್ಲಿ ಹಲವಾರು ವಿಶೇಷತೆಗಳು ಗೋಚರಿಸಿದವು. ನೃತ್ಯಬಂಧಗಳ ಆಯ್ಕೆಯಲ್ಲಿನ ಜಾಣ್ಮೆ, ಸಾಮಾನ್ಯವಾಗಿ ಪ್ರದರ್ಶನಗಳಲ್ಲಿ ಕಾಣಬರದೆ ಕೆಲವು ಅಪೂರ್ವ ನೃತ್ಯಬಂಧಗಳು, ಕೊಯಂಬತ್ತೂರಿನ ನೃತ್ಯಶೈಲಿಯ ಸೊಗಸು, ಅಡವುಗಳ ಬಳಕೆ, ಕ್ಷಿಪ್ರವಾದ ಸಂಚಾರಿ ಅಭಿನಯಗಳು, ಕಥಾ ನಿರೂಪಣೆಯ ಶೈಲಿಯ ಸಂಯೋಜನೆ ಇತ್ಯಾದಿ.

ವೇದಿಕೆಯಲ್ಲಿರಿಸಿದ ದೇವರ ಮಂಟಪ, ದೊಡ್ಡದಾದ ಪರದೆಯ ಬ್ಯಾನರ್‌ಗಳು ನೋಡುಗರಿಗೆ ನೃತ್ಯವೀಕ್ಷಣೆಗೆ ತೊಡಕಾಗಿ ಕಂಡುಬಂದರೂ, ಸ್ನೇಹಾ ಇವೆಲ್ಲವನ್ನೂ ನಗಣ್ಯವಾಗಿರಿಸಿ, ವೇದಿಕೆಯನ್ನು ಪರಿಪೂರ್ಣವಾಗಿ ಬಳಸಿ, ತಮ್ಮ ಸುಂದರ ನೃತ್ಯಾರ್ಪಣವನ್ನು ಯಶಸ್ವಿ ಗೊಳಿಸಿದರು. ಸಹಜ (ಲೈವ್‌) ಹಿಮ್ಮೇಳದ ಕೊರತೆ, ಬಳಸಿದ ರೆಕಾರ್ಡಿನ ಬೇರೆ ಬೇರೆಯವರ ಗಾಯನ, ವಾದನದ ಹರಿವಿನ ಹಿನ್ನೆಲೆ ಸಂಗೀತ ರಸಿಕರಿಗೆ ತುಸು ಬೇಸರ ತಂದದ್ದೂ ಸತ್ಯ.

ಮುಂದಿನ ದಿನಗಳಲ್ಲಿ ಡಾ| ಸ್ನೇಹಾ ತಮ್ಮ ನೃತ್ಯ ಪ್ರದರ್ಶನಗಳಿಗೆ ಲೈವ್‌ ಹಿಮ್ಮೇಳವನ್ನೇ ಬಳಸುವುದು ಅವರ ನೃತ್ಯಕ್ಕೆ ಸಖತ್‌ ಪೋಷಣೆ ಕೊಡಬಲ್ಲದು. ಕನಿಷ್ಠ ತಾವೇ ಆಯ್ದು ಹಿಮ್ಮೇಳ ಕಲಾವಿದರನ್ನು ಬಳಸಿ, ಸ್ಟುಡಿಯೋ ಧ್ವನಿತಟ್ಟೆಯನ್ನೂ ಅನಿವಾರ್ಯತೆಯಲ್ಲಿ ಬಳಸಿದರೇ ಒಳಿತು.

- ವಿ| ಪ್ರತಿಭಾ ಎಂ.ಎಲ್‌. ಸಾಮಗ, ಮಲ್ಪೆ

Dailyhunt
Disclaimer: This content has not been generated, created or edited by Dailyhunt. Publisher: Udayavani