ಕಲಾಪೀಠ ಕೋಟ(ರಿ.) ಇವರು ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಗುಂಡ್ಮಿ, ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಹಟ್ಟಿಯಂಗಡಿ ರಾಮಭಟ್ಟರ ಕೃತಿಯಾದ "ಶರಸೇತು ಬಂಧನ' ಎನ್ನುವ ಆಖ್ಯಾನವನ್ನು ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಪ್ರದರ್ಶಿಸಿದರು.
ಅತಿಯಾದ ಅಹಂಭಾವ ನಮ್ಮ ಅಧಃಪತನಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಈ ಪ್ರಸಂಗ ನಿದರ್ಶನವಾಗಿದೆ. ಕಳ್ಳರು ಅಗ್ರಹಾರವನ್ನು ಮುತ್ತಿಗೆ ಹಾಕಿ ಗೋವು ಗಳನ್ನು ಕದ್ದೊಯ್ಯುವಾಗ, ಪುರದ ಜನರು ಅರ್ಜುನನಲ್ಲಿ ಮೊರೆಹೋಗುತ್ತಾರೆ. ಆಯುಧಗಳಿಗಾಗಿ ಅರ್ಜುನನು ಧರ್ಮರಾಯನ ಶಯ್ನಾಗೃಹವನ್ನು ದಾಟ ಬೇಕಾಗಿರುತ್ತದೆ. ನಾರದರ ನಿರ್ಬಂಧದಂತೆ ಐವರಲ್ಲಿ ದ್ರೌಪದಿ ಯಾರ ಜತೆ ಶಯ್ನಾ ಗೃಹದಲ್ಲಿ ಇರುತ್ತಾಳ್ಳೋ ಆ ಸಮಯದಲ್ಲಿ ಉಳಿದವರು ದಾಟಿದರೆ ಒಂದು ವರುಷ ತೀರ್ಥಯಾತ್ರೆ ಕೈಗೊಳ್ಳಬೇಕು.
ಅಂತೆಯೇ ಅರ್ಜುನನು ತೀರ್ಥಯಾತ್ರೆ ಕೈಗೊಂ ಡಾಗ, ಪಶ್ಚಿಮ ಸಮುದ್ರ ತೀರದಲ್ಲಿ ತ್ರೇತಾಯುಗದ ಸೇತುವೆಯನ್ನು ಕಾಯುತ್ತಾ ಕುಳಿತಿದ್ದ ಮುದಿಕಪಿ(ಹನುಮಂತ)ಯ ಪರಿಚಯವಾಗುತ್ತದೆ. ಈರ್ವರೂ ಅಹಂಭಾವಗಳೊಂದಿಗೆ ತಮ್ಮ ತಮ್ಮ ಪರಿಚಯ ಮತ್ತು ಪರಾಕ್ರಮಗಳನ್ನು ಹೇಳಿ ಕೊಳ್ಳುತ್ತಾರೆ. ಮುಂದೆ ಇಬ್ಬರೊಳಗಿನ ಪಂಥಾಹ್ವಾನದಂತೆ ಅರ್ಜುನನು ತನ್ನ ಬಾಣದಿಂದ ಕಟ್ಟಿದ ಸೇತುವೆಯನ್ನು ಮೂರು ಬಾರಿಯೂ ಹನುಮನು ಮುರಿಯುತ್ತಾನೆ.
ಮಾತಿನಂತೆ ಅರ್ಜುನನು ಅಗ್ನಿ ಪ್ರವೇಶ ಮಾಡುವ ಸಂದರ್ಭದಲ್ಲಿ, ವೃದ್ಧ ಬ್ರಾಹ್ಮಣನ ವೇಷದಲ್ಲಿ ಬಂದ ಶ್ರೀ ಕೃಷ್ಣನು ಅರ್ಜುನನಿಗೆ ಮತ್ತೂಮ್ಮೆ ಸೇತುವೆ ನಿರ್ಮಿಸಲು ಹೇಳಿ, ಅಗೋಚರವಾಗಿ ಆಮೆಯ ರೂಪದಲ್ಲಿ ಸೇತುವೆಗೆ
ಆಧಾರವಾಗಿ ನಿಂತಾಗ ಹನುಮನು ಅದನ್ನು ಮುರಿಯುವಲ್ಲಿ ಸೋಲುತ್ತಾನೆ.
ದುಃಖೀತನಾದ ಹನುಮನಿಗೆ ಶ್ರೀ ಕೃಷ್ಣನು ರಾಮಾವತಾರವನ್ನು ತೋರಿ ಸಂತೈಸುವುದ ರೊಂದಿಗೆ ಹನುಮಾರ್ಜುನರ ಸ್ನೇಹ ಸೇತುವೆಗೂ ಕಾರಣನಾಗುತ್ತಾನೆ.
ಇಲ್ಲಿ ಅರ್ಜುನನಾಗಿ ಕೋಟ ಸುರೇಶ ಬಂಗೇರ, ಹನುಮನಾಗಿ ಪ್ರಸನ್ನ ಶೆಟ್ಟಿಗಾರ್ ಸೊಗಸಾದ ನೃತ್ಯಾಭಿನಯ ಮತ್ತು ಅಹಂಭಾವದ ಮಾತುಗಳ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಹಾಗೆಯೇ ದ್ವಾಪರದಲ್ಲೂ ಶ್ರೀ ರಾಮನನ್ನು ಕಂಡ ಹನುಮನ ಭಾವ ತೀವ್ರತೆಯನ್ನು ಶೆಟ್ಟಿಗಾರರು ಅಭಿವ್ಯಕ್ತಿಗೊಳಿಸಿದ ರೀತಿಯೂ ಮಾರ್ಮಿಕವಾಗಿತ್ತು. ವೃದ್ಧ ಬ್ರಾಹ್ಮಣನಾಗಿ ಸತೀಶ ಹಾಲಾಡಿಯವರು ಹಾಸ್ಯ ಲೇಪಿತ ಮಾತಿನ ಮೂಲಕ ಗಮನ ಸೆಳೆದರೆ, ಶ್ರೀರಾಮನಾಗಿ ಅನುಷಾ ಉರಾಳರ ಲವಲವಿಕೆಯ ಹೆಜ್ಜೆ ಮತ್ತು ಮಾತಿನ ಮೂಲಕ ಹನುಮಾರ್ಜುನರನ್ನು ಸಂತೈಸುವ ಪರಿ ಬಹಳ ಉತ್ತಮವಾಗಿ ಮೂಡಿ ಬಂದಿತ್ತು.
ಹಿಮ್ಮೇಳದಲ್ಲಿ ಭಾಗವತರಾಗಿ ಚಂದ್ರಕಾಂತ ಮೂಡುಬೆಳ್ಳೆಯವರ ಸುಂದರ ಸ್ವರ ಮಾಧುರ್ಯಕ್ಕೆ ಜತೆಯಾಗಿ ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಮತ್ತು ಚೆಂಡೆಯಲ್ಲಿ ವಾಗ್ವಿಲಾಸ ಭಟ್ಟ ಇವರುಗಳು ಅಷ್ಟೇ ಸೊಗಸಾಗಿ ಸಹಕರಿಸಿದರು. ವೇಷಭೂಷಣ ಗಜಾನನ ಯಕ್ಷಗಾನ ಸಂಘ, ಹಂದಾಡಿ, ಬ್ರಹ್ಮಾವರ ಇವರದ್ದಾಗಿತ್ತು. ಒಟ್ಟಾರೆ ಎರಡು ಗಂಟೆಗಳ ಅವಧಿಯ ಈ ಪ್ರಸಂಗ ಪ್ರೇಕ್ಷಕರ ಮನದೊಂದಿಗೆ ಭಾವ ಸೇತುವಾಯಿತು.
- l ಕೆ. ದಿನಮಣಿ ಶಾಸ್ತ್ರೀ, ಬ್ರಹ್ಮಾವರ

