ಮುಂಡರಗಿ(ಗದಗ): ತಾಲೂಕಿನ ಕಲಕೇರಿ, ಮುಷ್ಠಿಕೊಪ್ಪ, ವಿರುಪಾಪುರ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಭೂಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಮಂಗಳವಾರ ರಾತ್ರಿ 8.25 ರ ಸುಮಾರಿಗೆ ಕ್ಷಣಕಾಲ ದೊಡ್ಡ ಶಬ್ಧ ಕೇಳಿಸಿದ್ದು, ಬಳಿಕ ಭೂಮಿ ಕಂಪಿಸಿದ ಅನುಭವವಾಗಿದೆ. ಹಳೇ ಮಣ್ಣಿನ ಮನೆಗಳ ಮೇಲ್ಛಾವಣಿಯಿಂದ ಅಲ್ಲಲ್ಲಿ ಮಣ್ಣು ಉದುರಿದೆ.
ಕಪ್ಪತ್ತಗುಡ್ಡದ ಸೆರಗಿನಿಲ್ಲಿರುವ ಈ ಗ್ರಾಮಗಳಲ್ಲಿ ಈ ಹಿಂದೆ ಯಾವತ್ತೂ ಇಂತಹ ಅನುಭವಗಳಾಗಿರಲಿಲ್ಲ. ಆದರೆ, ಗ್ರಾಮಗಳ ಸುತ್ತಮುತ್ತ ಐದಾರು ಕೆರೆಗಳಿವೆ. ಇತ್ತೀಚೆಗೆ ಉತ್ತಮ ಮಳೆಯಾಗಿದ್ದರಿಂದ ಎಲ್ಲ ಕೆರೆಗಳು ಸಂಪೂರ್ಣ ಭರ್ತಿಯಾಗಿದೆ. ಗ್ರಾಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದರಿಂದ ನಾಲ್ಕೈದು ಅಡಿ ತೆಗ್ಗು ತೆಗೆದರೂ, ನೀರು ಬರುತ್ತಿದೆ. ಭೂಮಿ ಕಂಪಿಸಲು ಇದೂ ಒಂದು ಕಾರಣ ಆಗಿರಬಹುದು. ಆದರೂ, ಈ ಬಗ್ಗೆ ತಜ್ಞರು ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕು ಎನ್ನುತ್ತಾರೆ ಗ್ರಾಮಸ್ಥರು.

