ಕಾಸರಗೋಡು: ಕೇರಳದ ಕೆಲವು ಜಿಲ್ಲೆಗಳಲ್ಲಿ ಶಿಗೆಲ್ಲ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಜನರು ಕೂಡ ಎಚ್ಚರಿಕೆ ವಹಿಸುವಂತೆ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ| ಸಂತೋಷ್ ಬಿ. ಮನವಿ ಮಾಡಿದ್ದಾರೆ.
ಶಿಗೆಲ್ಲ ಕಾಯಿಲೆ ಶಿಗೆಲ್ಲ ಬ್ಯಾಕ್ಟೀರಿಯಾವು ದೇಹವನ್ನು ಪ್ರವೇಶಿಸುವುದರಿಂದ ಉಂಟಾಗುವ ಕರುಳಿನ ಸೋಂಕು.
ಇದರ ಮುಖ್ಯ ಲಕ್ಷಣಗಳು ಅತಿಸಾರ ಮತ್ತು ವಾಂತಿ. ಬ್ಯಾಕ್ಟೀರಿಯಾಗಳು ಕರುಳಿನ ಒಳಪದರದ ಮೇಲೆ ಪರಿಣಾಮ ಬೀರಿ ಹಾನಿ ಮಾಡುತ್ತವೆ. ಇತರ ಅತಿಸಾರ ಕಾಯಿಲೆಗಳಿಗಿಂತ ಇದು ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ವಿಶೇಷ ಎಚ್ಚರಿಕೆ ವಹಿಸಬೇಕು.
ರೋಗ ಲಕ್ಷಣ
*ತೀವ್ರ ಜ್ವರದೊಂದಿಗೆ ಅತಿಸಾರ.
*ಮಲದಲ್ಲಿ ರಕ್ತ.
* ತೀವ್ರ ಹೊಟ್ಟೆ ನೋವು ಮತ್ತು ಹೊಟ್ಟೆಯ ಸೆಳೆತ.
*ವಾಕರಿಕೆ, ವಾಂತಿ.
*ತೀವ್ರ ಆಯಾಸ, ದೇಹ ನೋವು.
*ಮಲವಿಸರ್ಜನೆ ಮಾಡುವ ನಿರಂತರ ಪ್ರಚೋದನೆ.
ಹರಡುವುದು ಹೇಗೆ?
*ಕಲುಷಿತ ನೀರು ಕುಡಿಯುವುದರಿಂದ ಮತ್ತು ಕಲುಷಿತ ನೀರಿನಲ್ಲಿ ತಯಾರಿಸಿದ ಆಹಾರ ತಿನ್ನುವುದರಿಂದ ಈ ರೋಗವು ಹರಡುತ್ತದೆ.
* ರೋಗಿಯ ಮಲದಿಂದ ಬ್ಯಾಕ್ಟೀರಿಯಾಗಳು ಇನ್ನೊಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸಿದಾಗ ಈ ರೋಗ ಸಂಭವಿಸುತ್ತದೆ.
*ವೈಯಕ್ತಿಕ ನೈರ್ಮಲ್ಯದ ಕೊರತೆ ಮತ್ತು ಸೋಂಕಿತ ಜನರ ನೇರ ಸಂಪರ್ಕದ ಮೂಲಕ ಈ ರೋಗವು ಹರಡಬಹುದು.
*ತೆರೆದ ಪ್ರದೇಶಗಳಲ್ಲಿ ಮಲವಿಸರ್ಜನೆಯಿಂದ ನೊಣಗಳ ಮೂಲಕ ಬ್ಯಾಕ್ಟೀರಿಯಾಗಳು ಆಹಾರ ಮತ್ತು ಕುಡಿಯುವ ನೀರನ್ನು ಪ್ರವೇಶಿಸಿದಾಗಲೂ ಸೋಂಕು ಸಂಭವಿಸಬಹುದು.
ತಡೆಗಟ್ಟುವ ವಿಧಾನ
* ಆಹಾರವನ್ನು ಬೇಯಿಸುವ ಮೊದಲು, ಆಹಾರವನ್ನು ತಿನ್ನುವ ಮೊದಲು ಮತ್ತು ಮಲವಿಸರ್ಜನೆ ಮಾಡಿದ ಬಳಿಕ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು.
*ಕುಡಿಯಲು ಕುದಿಸಿದ ನೀರನ್ನೇ ಬಳಸಬೇಕು.
*ಯಾವಾಗಲೂ ಆಹಾರವನ್ನು ಮುಚ್ಚಿಡಬೇಕು. ಹಳಸಿದ, ತೆರೆದ ಆಹಾರ ಸೇವಿಸಬಾರದು.
*ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆದು ಹಣ್ಣು, ತರಕಾರಿಗಳನ್ನು ಉಪಯೋಗಿಸಬೇಕು.
*ರೋಗಲಕ್ಷಣ ಇರುವವರೊಂದಿಗೆ ನೇರ ಸಂಪರ್ಕ, ವೈಯಕ್ತಿಕ ವಸ್ತುಗಳ ಸಂಪರ್ಕ ತಪ್ಪಿಸಿ. ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ಸೌಲಭ್ಯ ಒದಗಿಸಬೇಕು.
*ಮಗುವಿನ ಡೈಪರ್ ಸುರಕ್ಷಿತ ವಿಲೇ ಮಾಡಬೇಕು.
* ವೈಯಕ್ತಿಕ ನೈರ್ಮಲ್ಯ, ಆಹಾರ, ಕುಡಿಯುವ ನೀರಿನ ನೈರ್ಮಲ್ಯ, ಪರಿಸರ ನೈರ್ಮಲ್ಯ ಕಾಪಾಡಿ, ತೆರೆದ ಮಲವಿಸರ್ಜನೆ ತಪ್ಪಿಸಬೇಕು.

