ಮಂಗಳೂರು: ನಗರದ ಕಂಕನಾಡಿ ಸಮೀಪದ ನಾಗುರಿಯಲ್ಲಿ ಮನೆ ಮೇಲೆ ತಡೆಗೋಡೆ ಕುಸಿದು ಮೂವರ ಮೃತಪಟ್ಟ ಘಟನೆ ಮನಕಲುಕುವಂತಿತ್ತು. ಅಲ್ಲಿನ ಪ್ರತಿಯೊಂದು ದೃಶ್ಯವೂ ಕರುಳು ಹಿಂಡುವಂತಿತ್ತು.
ಇಲ್ಲಿನ ಎಲ್ಲರೂ ಬಡತನದಲ್ಲಿಯೇ ದಿನ ಸಾಗಿಸು ತ್ತಿದ್ದರು. ಲಾಲ್ ಬಾಬು ಕಾಪೆìಂಟರ್ ಆಗಿದ್ದರೆ, ಬಾಲಕೃಷ್ಣ ಅವರು ಅರ್ಧ ದೇಹದ ಸ್ವಾಧೀನವಿಲ್ಲ ದಿದ್ದರೂ ತ್ರಿಚಕ್ರ ವಾಹನದಲ್ಲಿ ಸಂಚರಿಸುತ್ತಾ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದರು.
ಶಾಂತಾ ಅವರು ಫ್ಯಾಕ್ಟರಿಯೊಂದರಲ್ಲಿ ದುಡಿಯುತ್ತಿದ್ದರು.
ಅಪಾಯದಲ್ಲಿ ಇನ್ನಷ್ಟು ಮನೆಗಳು
ತಡೆಗೋಡೆ ಕುಸಿದ ಜಾಗದ ಮೇಲ್ಭಾಗದಲ್ಲಿ ನಾರಣಪ್ಪ ಅವರಿಗೆ ಸೇರಿದ ಮನೆ ಇದೆ. ಆದರೆ ಅದರಲ್ಲಿ ಸದ್ಯ ಯಾರೂ ವಾಸಿಸುತ್ತಿಲ್ಲ. ಅದರ ಅಕ್ಕಪಕ್ಕದಲ್ಲಿ ಸುಜಾತಾ ಮತ್ತಿತರರ ಮನೆಗಳಿವೆ. ಇವುಗಳ ಸುರಕ್ಷೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಮನೆ ಬದಲಿಸಿದ್ದರು
ತಡೆಗೋಡೆ ಬಿದ್ದ ಬಾಡಿಗೆ ಮನೆಯ ಮುಂಭಾಗದಲ್ಲಿ ಅದೇ ಮಾಲಕರಿಗೆ ಸೇರಿದ ಇತರ ಸುಮಾರು 10 ಬಾಡಿಗೆ ಮನೆಗಳಿವೆ. ಇತ್ತೀಚೆಗೆ ಎದುರು ಭಾಗದ ಬಾಡಿಗೆ ಮನೆಗಳಿದ್ದ ಜಾಗವನ್ನು ಮಾಲಕರು ಮಾರಾಟಕ್ಕೆ ಮುಂದಾಗಿದ್ದರು. ಹಾಗಾಗಿ ಅದರಲ್ಲಿದ್ದ ಕುಟುಂಬಗಳು ಮನೆ ಖಾಲಿ ಮಾಡಿದ್ದರು. ಬಾಬು ರಾಮ್ ಕುಟುಂಬ ಕೂಡ ಮುಂಭಾಗದ ಬಾಡಿಗೆ ಮನೆಯಲ್ಲಿಯೇ ಇತ್ತು. ಬಳಿಕ ಈಗ ದುರಂತ ಸಂಭವಿಸಿದ ಮನೆಗೆ ಬಂದಿದ್ದರು.
ಸಿಡಿಲು ಬಡಿಯಿತು ಅಂದುಕೊಂಡೆ
ನಾನು ಮಲಗಿದ್ದೆ. ಅಮ್ಮ ಅಪ್ಪ ಕಿರುಚಿದರು. ನಾನು ಸಿಡಿಲು ಬಡಿಯಿತು ಎಂದುಕೊಂಡೆ. ಎದ್ದು ನೋಡುವಾಗ ಅಡುಗೆ ಕೋಣೆ ಬಳಿ ಕಲ್ಲುಗಳ ರಾಶಿ ಬಿದ್ದಿತ್ತು. ನಾನು ಎಲ್ಲರನ್ನು ಹೊರಗೆ ಎಳೆದುಕೊಂಡು ಬಂದೆ ಎಂದು ಅದೇ ಕಟ್ಟಡದ ನಾಲ್ಕನೇ ಬಾಡಿಗೆ ಮನೆಯಲ್ಲಿ ವಾಸವಿದ್ದ ಜಯರಾಮ್ ಅವರ ಪುತ್ರ ತರುಣ್ ತಿಳಿಸಿದ.
ಶೀಟ್ ಮೇಲೆಯೇ ಬಿತ್ತು
3ನೇ ಬಾಡಿಗೆ ಮನೆಯಲ್ಲಿದ್ದ ನಾಝಿಮ್ ಅವರ ಕಾಲಿಗೆ ಗಾಯವಾಗಿದೆ. ನಾವು 5 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ತಡೆಗೋಡೆ ಕುಸಿದಾಗ ನಮ್ಮ ಮನೆಯ ಮೇಲ್ಛಾವಣಿ ನಮ್ಮ ಮೇಲೆಯೇ ಬಿತ್ತು. ನಾನು, ಪತ್ನಿ, ಮಗು ಮಧ್ಯದ ಹಾಲ್‌ನಲ್ಲಿದ್ದೆವು. ಉಳಿದವರು ಹೊರಗಿನ ಹಾಲ್‌ನಲ್ಲಿದ್ದರು. ಮಳೆ ಕೂಡ ಜೋರಾಗಿತ್ತು ಎನ್ನುತ್ತಾರೆ ನಝೀಮ್.
ಮತ್ತೆ ಮಾತಾಡುತ್ತೇನೆ ಅಂದಿದ್ದಳು
ಲಾಲ್ ಬಾಬು ಕುಟುಂಬದವರು ಈ ಹಿಂದೆ ವಾಸ್ತವ್ಯವಿದ್ದ ರೂಮಿನ ಬಳಿ 10 ವರ್ಷಗಳ ಕಾಲ ಇದ್ದೆ. ಸಣ್ಣವಳೂ ತುಳುವಿನಲ್ಲೇ ಮಾತನಾಡುತ್ತಿದ್ದಳು. ಇತ್ತೀಚೆಗೆ ಲಾಲ್ ಬಾಬು ತಾಯಿಗೆ ವೀಡಿಯೋ ಕಾಲ್ ಮಾಡುವಾಗ ತನು, "ಮತ್ತೆ ಮಾತಾಡ್ತೇನೆ ಆಂಟಿ" ಅಂತ ಹೇಳಿದ್ದಳು. ಆದರೆ ಈಗ ಅವಳಿಲ್ಲ ಎಂದು ಗದ್ಗದಿತರಾದವರು ಮಾಲತಿ.
ವೈದ್ಯರ ದಿನಾಚರಣೆಗೆ ಸಿದ್ಧತೆ
ಬುಧವಾರ ಪ್ರಿಸ್ಕೂಲ್‌ನಲ್ಲಿ ವೈದ್ಯರ ದಿನಾಚರಣೆಗೆ ಯಾವ ಡ್ರೆಸ್ ಹಾಕಬೇಕೆಂದು ತನು ಕೇಳುತ್ತಿದ್ದಳು. ತುಂಬಾ ಚುರುಕಿನವಳು. ಕನ್ನಡ, ಹಿಂದಿ, ಇಂಗ್ಲಿಷ್ ಮಾತನಾಡುತ್ತಿದ್ದಳು ಎಂದು ಆಕೆ ಕಲಿಯುತ್ತಿದ್ದ ಪಡೀಲಿನ ಪರಿಶ್ರವಿ ಪ್ರೀಸ್ಕೂಲ್‌ನ ಆಡಳಿತಾಧಿಕಾರಿ ಸಫಿಯಾ ಹಾಗೂ ಶಿಕ್ಷಕಿ ರಾಜೇಶ್ವರಿ ಹೇಳುತ್ತಾರೆ.
ಪೊಲೀಸರಿಗೂ ಅಚ್ಚುಮೆಚ್ಚು
ಇವರ ಮನೆ ಪೊಲೀಸ್ ಠಾಣೆಯ ಹಿಂಭಾಗದಲ್ಲಿಯೇ ಇದೆ. ಮಕ್ಕಳು ಪದೇ ಪದೆ ಪೊಲೀಸ್ ಠಾಣೆಗೂ ಬಂದು ಆಟವಾಡುತ್ತಿದ್ದರು. ಪೊಲೀಸರಿಗೂ ಅಚ್ಚುಮೆಚ್ಚಿನವರಾಗಿದ್ದರು. ಬುಧವಾರ ದುರಂತ ನಡೆದ ಬಳಿಕ ಪೊಲೀಸರೂ ಮಕ್ಕಳನ್ನು ನೆನೆದು ಗದ್ಗದಿತರಾದರು.
ಕಪಿತಾನಿಯೋ ಶಾಲೆಗೆ ರಜೆ
ಅನಾಮಿಕಾ ನಮ್ಮ ಶಾಲೆಯಲ್ಲಿ ಓದುತ್ತಿದ್ದಳು. ಚೆನ್ನಾಗಿ ಕಲಿಯುತ್ತಿದ್ದಳು. ಅಲ್ಕಾ ಮತ್ತು ಅನುಷ್ಕಾ ಕೂಡ ನಮ್ಮ ಶಾಲೆಯಲ್ಲೇ ಕಲಿಯುತ್ತಿದ್ದಾರೆ. ಅನಾಮಿಕಾ ಸಾವಿನ ಶೋಕಾರ್ಥ ಗುರುವಾರ ಶಾಲೆಗೆ ರಜೆ ಘೋಷಿಸಲಾಯಿತು ಎಂದು ಸಂಚಾಲಕಿ ಸಿಸ್ಟರ್ ಪ್ರಸಿಲ್ಲಾ ಮಿನೇಜಸ್ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯಿಂದ ಪರಿಹಾರ
ಶಾಲಾ ಶಿಕ್ಷಣ ಇಲಾಖೆಯ ಮಕ್ಕಳ ಕಲ್ಯಾಣ ನಿಧಿಯಿಂದ ಪರಿಹಾರ ನೀಡಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ ಡಿಡಿಪಿಐ ಶಶಿಧರ್ ತಿಳಿಸಿದ್ದಾರೆ.
ಮಕ್ಕಳ ಸುರಕ್ಷೆಗೆ ಆದ್ಯತೆ
ಮಕ್ಕಳ ಸುರಕ್ಷೆಗೆ ಮೇಲಧಿಕಾರಿಗಳಿಂದ ಕಡ್ಡಾಯ ಸೂಚನೆ ಇದೆ. ಹಳೆಯ ಕಾಂಪೌಂಡ್, ಕೊಠಡಿ, ಮರದ ಕೆಳಗೆ ನಿಲ್ಲಬಾರದು. ರಿಪೇರಿಗೆ ಇರುವ ಕಟ್ಟ ಡದ ಬಳಿ ರೆಡ್ ರಿಬ್ಬನ್ ಕಟ್ಟಲು ಸೂಚಿಸಲಾಗಿದೆ. ಎಲ್ಲ ಸುರಕ್ಷ ಕ್ರಮ ಕೈಗೊಳ್ಳುತ್ತಿದ್ದೇವೆ ಎನ್ನುತ್ತಾರೆ ಮಂಗಳೂರು ದಕ್ಷಿಣ ವಲಯ ಬಿಇಒ ಈಶ್ವರ್.
ತನಿಖೆ ನಡೆಸಿ ಕ್ರಮ: ಪೊಲೀಸ್ ಆಯುಕ್ತರು
ಮೇಲ್ನೋಟಕ್ಕೆ ಕಾಂಪೌಂಡ್ ಗೋಡೆಯು ಮನೆಯ ಮೇಲಕ್ಕೆ ಕುಸಿದು ಬಿದ್ದದ್ದು ಮನೆಯ ಹಿಂಭಾಗದ ಗೋಡೆ ಕುಸಿಯಲು ಕಾರಣ ಎನ್ನಲಾಗಿದೆ. ಲ್ಯಾಟರೈಟ್ ಅಥವಾ ಅಂತಹ ಗುಡ್ಡಗಾಡು ಪ್ರದೇಶವನ್ನು ಅಗೆದು ತಡೆಗೋಡೆ ನಿರ್ಮಿಸುವಾಗ, ಆ ಗೋಡೆಯ ಅಡಿಪಾಯವನ್ನು ಗಟ್ಟಿಯಾದ ಬಂಡೆಯ ಪದರಕ್ಕೆ ಜೋಡಿಸಬೇಕು ಅಥವಾ ಅದರ ರಚನಾತ್ಮಕ ಭದ್ರತೆ ಖಚಿತಪಡಿಸಿಕೊಳ್ಳಲು ಸೂಕ್ತ ಆಳಕ್ಕೆ ಕೊಂಡೊಯ್ಯಬೇಕು ಎಂಬುದು ಮುಖ್ಯ. ಹಾಗೆಯೇ ನೀರು ಒಳನುಗ್ಗುವುದನ್ನು ತಡೆಯಲು ವೈಜ್ಞಾನಿಕವಾಗಿ ಸೂಕ್ತ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಗಟ್ಟಿಯಾದ ಅಡಿಪಾಯ ಅಥವಾ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದೆ ಕೇವಲ ನೆಲದ ಮಟ್ಟದಲ್ಲಿ ತಡೆಗೋಡೆ ನಿರ್ಮಿಸುವುದರಿಂದ, ಮಳೆಯ ಸಮಯದಲ್ಲಿ ನೀರಿನ ಒತ್ತಡ ಹೆಚ್ಚಾಗಿ ಗೋಡೆ ಕುಸಿಯುತ್ತದೆ. ಗೋಡೆ ಕುಸಿತಕ್ಕೆ ನಿಖರ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕಳಪೆ ಕಾಮಗಾರಿ ಮತ್ತು ಅನಧಿಕೃತ ಉತVನನಕ್ಕೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ತನಿಖೆಯ ಭಾಗವಾಗಿ ತಜ್ಞರ ಅಭಿಪ್ರಾಯ ಪಡೆಯ ಲಾಗುವುದು. ಎಲ್ಲವನ್ನೂ ಗಮನಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಪಕ್ಕದಲ್ಲಿ ತಂಗಿಯರಿದ್ದಾರೆ, ರಕ್ಷಿಸಿ...!
ಅಗ್ನಿಶಾಮಕ ಸಿಬಂದಿ ಕಾರ್ಯಾಚರಣೆ ಆರಂಭಿಸಿದಾಗ ಅಲ್ಕಾ ಮಾತ್ರ ಕಾಣಿಸುತ್ತಿದ್ದಳು. ಅವಳ ಅರ್ಧ ದೇಹ ಕಲ್ಲು ಮಣ್ಣುಗಳಿಂದ ತುಂಬಿತ್ತು. ಉಳಿದ ದೇಹ ಕಾಣಿಸುತ್ತಿತ್ತು. ಉಳಿದ ಮಕ್ಕಳು ಮಣ್ಣು, ಕಲ್ಲುಗಳ ಅಡಿಯಲ್ಲಿದ್ದರು.
"ಪಕ್ಕದಲ್ಲಿ ತಂಗಿಯರಿದ್ದಾರೆ. ಅವರನ್ನು ರಕ್ಷಿಸಿ...' ಎಂದು ಅಲ್ಕಾಳೇ ಹೇಳಿದಳು. ಹಾಗಾಗಿ ಮೊದಲು ತಂಗಿಯರನ್ನು ಮಣ್ಣಿನಿಂದ ಹೊರಗೆ ತೆಗೆಯಲಾಯಿತು. ಕೊನೆಗೆ ಅಲ್ಕಾಳನ್ನು ರಕ್ಷಿಸಲಾಯಿತು. ಮತ್ತೂಂದು ಮನೆಯಲ್ಲಿದ್ದ ಬಾಲಕೃಷ್ಣ ಅವರನ್ನು ಮೊದಲು ಹೊರತೆಗೆದು ರಕ್ಷಿಸಲಾಯಿತು. ಶಾಂತಾ ಅವರ ತಲೆಮೇಲೆಯೇ ಕಲ್ಲು ಬಿದ್ದಿದ್ದರಿಂದ ಮೃತಪಟ್ಟರು. 5.15ರಿಂದ 7 ಗಂಟೆಯವರೆಗೂ ನಿರಂತರ ಕಾರ್ಯಾಚರಣೆ ನಡೆಸಲಾಯಿತು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಮ್ಮದ್ ಜುಲ್ಫಿàಕರ್, ಕದ್ರಿಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಮೋದ್, ಪಾಂಡೇಶ್ವರ ಅಗ್ನಿಶಾಮಕ ಠಾಣೆ ಅಧಿಕಾರಿ ಪ್ರವೀಣ್ ಕೆ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.
ನೀರಿನ ಒತ್ತಡಕ್ಕೆ ಕುಸಿತ?
ಬಾಡಿಗೆ ಮನೆ ಮತ್ತು ತಡೆಗೋಡೆ ಇದ್ದ ಜಾಗದ ಮಾಲಕರು ಬೇರೆ ಬೇರೆಯವರು. ತಡೆಗೋಡೆ ಯನ್ನು 8 ವರ್ಷಗಳ ಹಿಂದೆ ಬಂಡೆಕಲ್ಲು ಮತ್ತು ಕೆಂಪುಕಲ್ಲಿನಿಂದ ನಿರ್ಮಿಸಲಾಗಿತ್ತು. 20-25 ಅಡಿ ಸದೃಢವಾಗಿಯೇ ಇದ್ದ ಈ ತಡೆಗೋಡೆ ಏಕಾಏಕಿ ಕುಸಿದಿದೆ. ತಡೆಗೋಡೆಯ ಕೆಳಭಾಗದಲ್ಲಿ ದುರಂತ ಸಂಭವಿಸಿದ ಬಾಡಿಗೆ ಮನೆಗಳಿದ್ದರೆ, ಮೇಲ್ಭಾಗದಲ್ಲಿ ಸುಮಾರು 15 ಸೆಂಟ್ಸ್‌ನಷ್ಟು ಖಾಲಿ ಜಾಗವಿದೆ. ಅನಂತರ ಒಂದು ಮನೆ ಇದೆ. ಮನೆಯ ಎದುರು ಮತ್ತೂಂದು ಹಂತದಲ್ಲಿ ಮನೆಗಳಿವೆ. ಈ ಮನೆ, ಖಾಲಿ ಜಾಗದಿಂದ ನೀರು ರಭಸವಾಗಿ ತಡೆಗೋಡೆಯ ಕಡೆಗೆ ಹರಿಯುತ್ತದೆ. ಇದರಿಂದ ತಡೆಗೋಡೆ ಕುಸಿದಿದೆ ಎನ್ನಲಾಗುತ್ತಿದೆ. ಜೇಡಿಮಿಶ್ರಿತ ಮಣ್ಣಿನಿಂದ ತಡೆಗೋಡೆ ಬದಿ ತುಂಬಿಸಿದ್ದು, ಅದರ ಬುಡಭಾಗದಲ್ಲಿ ಮಳೆನೀರಿನ ತೋಡು ಕೂಡ ಹರಿಯುತ್ತಿತ್ತು.
ಚೂಟಿ ಮಕ್ಕಳು
ಮೃತಪಟ್ಟ ಇಬ್ಬರು ಮಕ್ಕಳು ತುಂಬಾ ಚೂಟಿ ಇದ್ದರು. ಹತ್ತಿರದ ಮನೆ ಮಂದಿಯೊಂದಿಗೆ ಬೆರೆಯುತ್ತಿದ್ದರು. ಇಂಥಾ ಘಟನೆ ನಡೆದೀತೆಂದು ಕನಸಲ್ಲೂ ಎಣಿಸಿರಲಿಲ್ಲ. ಮುಂಜಾನೆ ನಿದ್ದೆಗಣ್ಣಲ್ಲಿ ದ್ದಾಗ ದೊಡ್ಡ ಶಬ್ದ ಕೇಳಿತೆಂದು ಎದ್ದು ನೋಡು ವಾಗ ಹೆಂಚಿನ ಪುಡಿ ನಮ್ಮ ಮೇಲೆ ಬಿತ್ತು. ಅಡುಗೆ ಕೋಣೆಗೆ ಪೂರ್ತಿ ಕಲ್ಲು ಬಿದ್ದು, ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಆದರೂ ಹೇಗೋ ಹೊರಬಂದೆವು. ಕೊನೆಯ ಮನೆಗೂ ಮಣ್ಣು ಬಿದ್ದು, ದಂಪತಿ ಹೊರಗೆ ಓಡಿ ಬರುವಲ್ಲಿ ಯಶಸ್ವಿಯಾದರು. ಮಕ್ಕಳ ಮೇಲೆ ಮಣ್ಣು ಬಿದ್ದಿತ್ತು. ಆದರೆ ಮತ್ತೂಂದು ಮನೆಯಲ್ಲಿ ದಂಪತಿಯ ಮೇಲೆ ಮಣ್ಣು ಬಿದ್ದು, ಬಾಗಿಲು ತೆಗೆಯಲಾಗಲಿಲ್ಲ. ಅರ್ಧ ಗಂಟೆಯೊಳಗೆ ಕಾರ್ಯಾಚರಣೆ ನಡೆಸಿದರೂ ಮೂವರನ್ನು ಉಳಿಸಿ ಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪಕ್ಕದ ಮನೆಯ ಗೀತಾ ಅವರು ಘಟನೆಯನ್ನು ವಿವರಿಸುತ್ತಾರೆ.
ಓಡಿ ಹೋಗಿದ್ದರಿಂದ ಜೀವ ಉಳಿಯಿತು
ಅಪಾಯದಿಂದ ಪಾರಾದ ಜಯರಾಮ್ ಅವರು ಘಟನೆ ಬಗ್ಗೆ ವಿವರಿಸಿ, ಮುಂಜಾನೆ ಸುಮಾರು 4.30ರ ಹೊತ್ತಿಗೆ ಘಟನೆ ಸಂಭವಿಸಿದೆ. ನಾವು ಮನೆ ಮಂದಿ ಮಲಗಿದ್ದ ವೇಳೆ ಒಮ್ಮೆಲೇ ದೊಡ್ಡ ಶಬ್ದ ಕೇಳಿತು. ಕೂಡಲೇ ನಾವೆಲ್ಲ ಹೊರಗೆ ಓಡಿದೆವು. ಪಕ್ಕದ ಎರಡು ಮನೆಗಳಲ್ಲಿ ರಕ್ಷಣೆಗೆ ಕೂಗುತ್ತಿದ್ದರು. ಒಂದು ಮನೆಯ ಚಿಲಕ ಹಾಕಿದ್ದರಿಂದ ಕೂಡಲೇ ರಕ್ಷಣೆಗೆ ಧಾವಿಸಲು ಸಾಧ್ಯವಾಗಲಿಲ್ಲ. ಹತ್ತಿರವೇ ಪೊಲೀಸ್ ಠಾಣೆ ಇದ್ದು, ಮಾಹಿತಿ ನೀಡಿದೆ. ಅವರು ಬಂದು ಅಗ್ನಿಶಾಮಕದಳವನ್ನು ಕರೆಸಿದರು. ಸಾರ್ವಜನಿಕರೂ ಸಹಕರಿಸಿದರು. ನಾವು ಸುಮಾರು 12 ವರ್ಷಗಳಿಂದ ಇದೇ ಮನೆಯಲ್ಲಿ ವಾಸಿಸುತ್ತಿದ್ದೇವೆ. ಈವರೆಗೆ ಈ ರೀತಿಯ ಘಟನೆ ನಡೆದಿಲ್ಲ. ಎಂಟು ವರ್ಷಗಳ ಹಿಂದೆ ತಡೆಗೋಡೆ ಕಟ್ಟಿದ್ದರು.
ಮನ ಕದಡಿದ ಪುಸ್ತಕ, ಆಟಿಕೆ, ಭಾವಚಿತ್ರಗಳು...!
ಮಕ್ಕಳ ಸ್ಕೂಲ್ ಬ್ಯಾಗ್, ಪುಸ್ತಕ, ಆಟಿಕೆಗಳು, ಭಾವಚಿತ್ರಗಳು ಕೋಣೆಯ ಕಪಾಟಿನಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು. ಇನ್ನು ಕೆಲವು ಆಟಿಕೆಗಳು ಮಣ್ಣಿನಡಿ ಬಿದ್ದಿದ್ದವು. ಬಟ್ಟೆಗಳು, ಮನೆಯ ಇತರ ಪರಿಕರಗಳು ದುರಂತಕ್ಕೆ ಸಾಕ್ಷಿಯಂತಿದ್ದವು. ಇನ್ನೊಂದು ಮನೆಯ ಅಡುಗೆ ಗ್ಯಾಸ್ ಸಿಲಿಂಡರ್‌ಗಳು ಕೂಡ ಮಣ್ಣಿನಡಿ ಹುದುಗಿ ಹೋಗಿದ್ದವು. ಪಾರಾದ ಮನೆಯವರು ಅಳಿದುಳಿದ ಸೊತ್ತುಗಳನ್ನು ಹೊರಗೆ ಎತ್ತಿ ತರುತ್ತಿದ್ದ ದೃಶ್ಯ ಮನಸ್ಸು ಕದಡುವಂತಿತ್ತು.
ಬೆಚ್ಚಿಬಿದ್ದ ಜನತೆ
ತಡೆಗೋಡೆ ಕುಸಿದು ಮೂವರು ಮೃತಪಟ್ಟ ಘಟನೆಯ ಸುದ್ದಿ ಹರಡುತ್ತಿದ್ದಂತೆಯೇ ಸಾರ್ವ ಜನಿಕರು ಘಟನ ಸ್ಥಳಕ್ಕೆ ಧಾವಿಸಿ ಬಂದರು. ಘಟನೆ ನಗರದ ಜನತೆ ಬೆಚ್ಚಿ ಬೀಳುವಂತೆ ಮಾಡಿತು. ಘಟನ ಸ್ಥಳವಾಗಿದ್ದ "ಮಾರಿಯಲ್ ಕಾಂಪೌಂಡ್' ಜನರಿಂದ ತುಂಬಿ ಹೋಯಿತು. ಈ ಹಿಂದೆ ಅಲ್ಲಿನ ಬಾಡಿಗೆ ಮನೆಗಳಲ್ಲಿ ವಾಸವಿದ್ದು ಅನಂತರ ಅಲ್ಲಿಂದ ಬೇರೆ ಕಡೆಗೆ ಹೋಗಿದ್ದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ತಮ್ಮ ಜತೆ ವಾಸವಿದ್ದವರ, ಮಕ್ಕಳ ಅಗಲಿಕೆ ತಾಳಲಾರದೆ ಕೆಲವರು ಕಣ್ಣೀರು ಹಾಕಿದರು. ಶಿಕ್ಷಕರು, ಶಾಲಾ ಮುಖ್ಯಸ್ಥರು, ಧರ್ಮಗುರುಗಳು ದುಃಖ ವ್ಯಕ್ತಪಡಿಸಿದರು. ಮೃತಪಟ್ಟ ಇಬ್ಬರು ಮಕ್ಕಳ ಹೆತ್ತವರು ಬಿಹಾರ ಮೂಲದವರಾಗಿದ್ದರೂ ಅವರು ಮತ್ತು ಅವರ ಮಕ್ಕಳು ಸ್ಥಳೀಯರಂತೆಯೇ ಎಲ್ಲರೊಂದಿಗೆ ಒಡನಾಟ ಹೊಂದಿದ್ದರು. ಅಲ್ಲದೆ ಇತರ ಬಾಡಿಗೆ ಮನೆಗಳಲ್ಲಿ ಇದ್ದವರು ಕೂಡ ಜನಸ್ನೇಹಿಗಳಾಗಿದ್ದರು. ಹಾಗಾಗಿ ಪರಿಚಯಸ್ಥರು, ಗೆಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಪರಿಹಾರದ ಚೆಕ್ ವಿತರಣೆ
ನಾಗುರಿಯಲ್ಲಿ ತಡೆಗೋಡೆ ಕುಸಿತ ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ತಲಾ 5 ಲಕ್ಷ ರೂ. ಪರಿಹಾರ ಮೊತ್ತದ ಚೆಕ್‌ಗಳನ್ನು ವಿತರಿಸಲಾಯಿತು. ದುರಂತದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸುವುದಾಗಿ ತಿಳಿಸಲಾಗಿದೆ.
ಬುಧವಾರದಂದು ಹೊಸದಿಲ್ಲಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಸಚಿವ ಯು.ಟಿ. ಖಾದರ್‌ಅವರು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮಂಗಳೂರಿಗೆ ಆಗಮಿಸಿ ಘಟನ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ಎಚ್ಚರಿಕೆಯ ಗಂಟೆ. ಇಂತಹ ಘಟನೆಗಳು ಆಗಬಾರದು. ಘಟನೆಯ ವೇಳೆ ಸ್ಥಳೀಯ ನಾಗರಿಕರು, ಪೊಲೀಸರು, ಇತರ ಇಲಾಖೆಗಳ ರಕ್ಷಣಾ ಕಾರ್ಯಾಚರಣೆಗೆ ಕೃತಜತೆ ಸಲ್ಲಿಸುವೆ. ಅಪಾಯಕಾರಿ ಸ್ಥಳಗಳನ್ನು ಅಧಿಕಾರಿಗಳು ಗುರುತಿಸಿ ಎಚ್ಚರಿಕೆ ನೀಡಬೇಕು. ಜನರು ಸ್ವಯಂಪ್ರೇರಿತರಾಗಿ ಎಚ್ಚರ ವಹಿಸಬೇಕು ಎಂದು ಹೇಳಿದರು.
ನೋಟಿಸ್‌ಗೆ ಸೂಚನೆ: ಡಿಸಿ
ಪ್ರಕೃತಿ ವಿಕೋಪ ನಿರ್ವಹಣೆ ಬಗ್ಗೆ ಮುಂಗಾರು ಪೂರ್ವದಲ್ಲಿಯೇ ಸಭೆಗಳನ್ನು ನಡೆಸಿ ಸೂಚನೆ ನೀಡಲಾಗಿದೆ. ಬುಧವಾರ ಮತ್ತೂಮ್ಮೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಚಿವ ಯು.ಟಿ. ಖಾದರ್ ಕೂಡ ಸಭೆ ನಡೆಸಿ ಸೂಚನೆ ನೀಡಿದ್ದಾರೆ. ಕಂಕನಾಡಿಯಲ್ಲಿ ಬುಧವಾರ ನಡೆದ ಘಟನೆಯಲ್ಲಿ ಕ್ಷಿಪ್ರಸ್ಪಂದನೆಯಿಂದ 3 ಜೀವಗಳು ಉಳಿದಿವೆ. ಅಪಾಯಕಾರಿ ತಡೆಗೋಡೆ ಅಥವಾ ಯಾವುದೇ ಅಪಾಯ ಉಂಟಾಗುವಂತಹುದು ಖಾಸಗಿ ಸ್ಥಳದಲ್ಲಿದ್ದರೂ ವಿಪತ್ತು ನಿರ್ವಹಣೆಯಡಿ ನೋಟಿಸ್ ನೀಡಿ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.
ಪ್ರಮುಖರ ಭೇಟಿ
ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಪರಿಷತ್ ಸದಸ್ಯರಾದ ಐವನ್ ಡಿ'ಸೋಜಾ, ಮಂಜುನಾಥ ಭಂಡಾರಿ, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಪದ್ಮರಾಜ ಆರ್. ಪೂಜಾರಿ, ವಿಶ್ವ ಹಿಂದೂ ಪರಿಷತ್‌ನ ಶರಣ್ ಪಂಪ್‌ವೆಲ್, ಪುನೀತ್ ಅತ್ತಾವರ, ನಿಕಟಪೂರ್ವ ಕಾರ್ಪೋರೆಟರ್‌ಸಂದೀಪ್ ಗರೋಡಿ, ಜಿಲ್ಲಾಧಿಕಾರಿ ದರ್ಶನ್ ಎಚ್. ವಿ., ಪೊಲೀಸ್ ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಡಿಡಿಪಿಐ ಶಶಿಧರ್, ಬಿಇಒ ಈಶ್ವರ್‌ವೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು.
ಪುನರ್ವಸತಿ ಕಲ್ಪಿಸಲು ಕ್ರಮ
ಭಾರೀ ಮಳೆಗೆ ನಾಗುರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೂವರು ಸಾವನ್ನಪ್ಪಿರುವ ವಿಚಾರ ತಿಳಿದು ದುಃಖವಾಗಿದೆ. ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ತಡಮಾಡದೇ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
- ಕ್ಯಾ| ಬ್ರಿಜೇಶ್ ಚೌಟ, ದ. ಕ. ಸಂಸದರು
ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಲಿ
ನಾಗುರಿ ಘಟನೆಗೆ ಸಂಬಂಧಿಸಿ ಸೂಕ್ತ ಪರಿಹಾರ ಲಭಿಸುವಂತೆ ಈಗಾಗಲೇ ಡಿಸಿ ಜತೆ ಚರ್ಚಿಸಿರುವೆ. ಮಳೆಯ ಪ್ರಮಾಣ ಇನ್ನೂ ಮುಂದುವರಿಯಲಿದ್ದು, ಈಗಾಗಲೇ ಅಪಾಯಕಾರಿ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ವಾಸಿಸುವ ಜನರ ಬಗ್ಗೆ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.
- ಡಿ. ವೇದವ್ಯಾಸ ಕಾಮತ್, ಶಾಸಕರು
ಇಂತಹ ಘಟನೆ ಮರುಕಳಿಸಬಾರದು
ರಕ್ಷಣ ಕಾರ್ಯಾಚರಣೆ, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಹಾಗೂ ಎಲ್ಲ ತುರ್ತು ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಪಾಯ ಸಾಧ್ಯತೆಯಿರುವ ಪ್ರದೇಶಗಳನ್ನು ಕೂಡಲೇ ಗುರುತಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿರುವೆ.
-ಐವನ್ ಡಿ'ಸೋಜಾ, ವಿಧಾನ ಪರಿಷತ್ ಸದಸ್ಯ
ತುರ್ತು ಪರಿಹಾರ ಒದಗಿಸಲು ಕ್ರಮ
ಮೃತರ ಕುಟುಂಬಕ್ಕೆ ಸರಕಾರದಿಂದ ಸಿಗಬೇಕಾದ ಗರಿಷ್ಠ ಪರಿಹಾರ ಹಾಗೂ ಅಗತ್ಯವಿರುವ ಎಲ್ಲ ನೆರವು ಆದಷ್ಟು ಬೇಗನೆ ಒದಗಿಸಲು ಪ್ರಯತ್ನಿಸುವೆ.
-ಪಿ.ವಿ. ಮೋಹನ್, ವಿಧಾನ ಪರಿಷತ್ ಸದಸ್ಯ

