ಕರಾವಳಿ ಭಾಗದ ಜನತೆಯ ಎರಡು ದಶಕಗಳ ಬೇಡಿಕೆ ಕೊನೆಗೂ ಫಲಿಸಿದೆ. ಮಂಗಳೂರು ರೈಲ್ವೇ ಪ್ರದೇಶವನ್ನು ನೈಋತ್ಯ ರೈಲ್ವೇಗೆ ಸೇರ್ಪಡೆ ಮಾಡಲಾಗಿದ್ದು, ಮಂಡಳಿಯ ಆದೇಶದಂತೆ ಅ. 1ರಿಂದ ಮಂಗಳೂರು ರೈಲ್ವೇ ಪ್ರದೇಶ ಮೈಸೂರು ವಿಭಾಗದಡಿ ಸೇರಿಕೊಳ್ಳಲಿದೆ. ಇದರೊಂದಿಗೆ ಕರಾವಳಿಯ ರೈಲ್ವೇ ಮೂಲಸೌಕರ್ಯ, ವೇಳಾಪಟ್ಟಿ ಎಲ್ಲದರಲ್ಲೂ ಹೆಚ್ಚಿನ ಆದ್ಯತೆ ಸಿಗುವುದೆಂಬ ನಿರೀಕ್ಷೆ ಸಹಜ.
ಆದರೆ ಇದರ ಬೆನ್ನಲ್ಲೇ ಕೇರಳದ ಲಾಬಿ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಆದೇಶವನ್ನು ಹಿಂಪಡೆಯಬೇಕೆಂಬ ಒತ್ತಡ ಬರತೊಡಗಿದೆ. ಇದಕ್ಕೆ ರೈಲ್ವೇ ಮಂಡಳಿ ತಲೆಬಾಗಬಾರದು. ನಮ್ಮ ಜನಾಗ್ರಹವನ್ನು ಮನದಟ್ಟು ಮಾಡುವುದಕ್ಕೆ, ಕರಾವಳಿಯ ಕನ್ನಡಿಗರು ಒಗ್ಗಟ್ಟಾಗುವುದಕ್ಕೆ ಇದು ಸಕಾಲ. ಈ ಹಿನ್ನೆಲೆಯಲ್ಲಿ ಉದಯವಾಣಿಯ ಅಭಿಯಾನವಿದು.
ಮಂಗಳೂರು: ಇದುವರೆಗೆ ಮಂಗಳೂರು ರೈಲ್ವೇ ಪ್ರದೇಶದ ಬಹುಭಾಗ ದಕ್ಷಿಣ ರೈಲ್ವೇಗೊಳಪಟ್ಟ ಪಾಲಕ್ಕಾಡ್ ವಿಭಾಗದಡಿ ಇತ್ತು. ಈ ವಿಭಾಗದಲ್ಲಿ ಅತೀ ಮುಖ್ಯವಾದ ಪ್ರದೇಶ ಮಂಗಳೂರು. ಇಲ್ಲಿನ ಎರಡು ಮುಖ್ಯ ರೈಲ್ವೇ ನಿಲ್ದಾಣಗಳು ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್. ಮಂಗಳೂರು ಸೆಂಟ್ರಲ್ ದೇಶದ ಐದು ಸೆಂಟ್ರಲ್ ನಿಲ್ದಾಣ ಗಳಲ್ಲಿ ಒಂದು ಕೂಡ.
ಹಾಗೆ ನೋಡಿದರೆ ಸದ್ಯ ನೈಋತ್ಯ ವಲಯ ಸೇರುತ್ತಿರುವ ಮಂಗಳೂರಿಗೆ ಸ್ವತಃ ಒಂದು ವಿಭಾಗವಾಗುವ ಎಲ್ಲ ಅರ್ಹತೆಗಳಿವೆ. ಅದೇ ಆಧಾರದಲ್ಲಿಯೇ ಕರಾವಳಿಗರು ಎರಡು ದಶಕಗಳಿಂದ ಮಂಗಳೂರು ಪ್ರತ್ಯೇಕ ರೈಲ್ವೇ ವಿಭಾಗವಾಗಲಿ ಎನ್ನುವ ಬೇಡಿಕೆಯನ್ನೇ ಇರಿಸಿದ್ದರು. ಅದು ನೆರವೇರದಿದ್ದರೆ ಕನಿಷ್ಠ ಮೈಸೂರು ವಿಭಾಗಕ್ಕಾದರೂ ಸೇರಲಿ ಎನ್ನುವುದು ಎರಡನೇ ಬೇಡಿಕೆಯಾಗಿತ್ತು, ಅದು ಸದ್ಯ ಈಡೇರಿದೆ.
ನೈಋತ್ಯ ರೈಲ್ವೇ ಸೇರ್ಪಡೆ ಯಾಕೆ ?
ನವಮಂಗಳೂರು ಬೃಹತ್ ಬಂದರು, ಮಂಗಳೂರು ಹಳೆ ಬಂದರು, ಎಂಆರ್‌ಪಿಎಲ್ ಪೆಟ್ರೋಲಿಯಂ ರಿಫೈನರಿ ಹಾಗೂ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್, ವಿಶೇಷ ಆರ್ಥಿಕ ವಲಯ, ಬಿಎಎಸ್ ಎಫ್ ಕೆಮಿಕಲ್ ಫ್ಯಾಕ್ಟರಿ, ವರ್ಷದಿಂದ ವರ್ಷಕ್ಕೆ ಸಮೃದ್ಧಗೊಳ್ಳುತ್ತಿರುವ ಈ ಭಾಗದ ಮಾಹಿತಿ ತಂತ್ರಜ್ಞಾನ ಹಾಗೂ ತತ್ಸಂಬಂಧಿ ಕ್ಷೇತ್ರ ಇವೆಲ್ಲವೂ ರೈಲ್ವೇ ಅಭಿವೃದ್ಧಿಗೆ ಪೂರಕ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇಲ್ಲಿದೆ. ಸಮುದ್ರ ತೀರಗಳು, ಪಶ್ಚಿಮ ಘಟ್ಟಗಳ ಸಾಮೀಪ್ಯ, ಯಾತ್ರಾಸ್ಥಳಗಳಿಂದಾಗಿ ನಿರಂತರ ಪ್ರವಾಸೀ ಅಭಿವೃದ್ಧಿ ಕಾಣುತ್ತಿರುವ ತಾಣ ಮಂಗಳೂರು.
ಈ ಅಭಿವೃದ್ಧಿಗೆ ಪೂರಕವಾಗಿ ಮಂಗಳೂರು ರೈಲ್ವೇ ಪ್ರದೇಶದ ಅಭಿವೃದ್ಧಿ ಯಾದಾಗ ಪ್ರದೇಶದ ಸಮಗ್ರ ಪ್ರಗತಿ ಸಾಧ್ಯ. ಆದರೆ ಪಾಲಕ್ಕಾಡ್ ರೈಲ್ವೇ ವಿಭಾಗ ಮಾತ್ರ ಸೂಕ್ತವಾಗಿ ಸ್ಪಂದಿಸದೆ ಇಲ್ಲಿನ ಆದಾಯದ ಪ್ರಮಾಣಕ್ಕೆ ಅನುಗುಣವಾಗಿ ಮೂಲಸೌಕರ್ಯ ಹಾಗೂ ರೈಲುಗಳ ನಿಯೋಜನೆಯನ್ನು ಮಾಡದೆ, ಈ ಭಾಗದ ರೈಲ್ವೇ ಬಳಕೆದಾರ ಪ್ರತಿನಿಧಿಗಳು, ಜನಪ್ರತಿನಿಧಿಗಳು ಇರಿಸುವ ನ್ಯಾಯಯುತ ಬೇಡಿಕೆಗಳಿಗೆ ಸಬೂಬು ಹೇಳುತ್ತ ಜಾರಿಕೊಳ್ಳುತ್ತ ಹೋದದ್ದೇ ಪಾಲಕ್ಕಾಡ್ ಇನ್ನು ಸಾಕು ಎನ್ನುವ ಭಾವನೆ ಹುಟ್ಟಲು ಕಾರಣ.
ನಿತೀಶ್ ಕುಮಾರ್ ಯತ್ನಿಸಿದ್ದರು!
ಮಂಗಳೂರನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸುವ ಮೊದಲ ಪ್ರಯತ್ನ ಮಾಡಿದ್ದು ನಿತೀಶ್ ಕುಮಾರ್. ಆದರೆ ಕೇರಳದಿಂದ ತೊಡಗಿ ದಿಲ್ಲಿಯ ರೈಲ್ವೇ ಮಂಡಳಿ ವರೆಗೆ ವ್ಯಾಪಿಸಿದ್ದ ಪ್ರಬಲ ಮಲಯಾಳಿ ಲಾಬಿ ಕೆಲಸ ಮಾಡುತ್ತ ಬಂದ ಕಾರಣವೋ ಏನೋ; 2003ರಲ್ಲೇ ಆಗಿನ ರೈಲ್ವೇ ಸಚಿವ ನಿತೀಶ್ ಕುಮಾರ್ ಸ್ವತಃ ಮಂಗಳೂರನ್ನು ನೈಋತ್ಯ ರೈಲ್ವೇಗೆ ಸೇರಿಸುವ ಘೋಷಣೆ ಮಾಡಿದ್ದರೂ ಅದು ಅಧಿಸೂಚನೆಯಾಗಿ ಬರಲಿಲ್ಲ.
ಈಗ ಮಂಗಳೂರು ಭಾಗದ ಸಾರ್ವಜನಿಕರು, ರೈಲ್ವೇ ಯಾತ್ರಿಕರು, ಜನಪ್ರತಿನಿಧಿಗಳ ಬೇಡಿಕೆ ಪ್ರಬಲವಾಗಿರುವುದನ್ನು ರೈಲ್ವೇ ಮಂಡಳಿ ಗಮನಿಸಿದೆ.
2020ರಲ್ಲಿ ನೈಋತ್ಯ ರೈಲ್ವೇ ಪತ್ರ
2020ರಲ್ಲಿ ನೈಋತ್ಯ ರೈಲ್ವೇಯ ಮಹಾಪ್ರಬಂಧಕ ಅಜಯ್ ಕುಮಾರ್ ಸಿಂಗ್ ಅವರು ಕೂಡ ರೈಲ್ವೇ ಮಂಡಳಿಗೆ ಅಧಿಕೃತ ಪತ್ರ ಬರೆದು ಮಂಗಳೂರು ಸೆಂಟ್ರಲ್, ಜಂಕ್ಷನ್ ಸಹಿತ ಮಂಗಳೂರು ರೈಲ್ವೇ ಕಾಂಪ್ಲೆಕ್ಸ್ (ಮಂಗಳೂರು ರೈಲ್ವೇ ಪ್ರದೇಶ) ಹಾಗೂ ತೋಕೂರು ರೈಲ್ವೇ ಸ್ಟೇಷನ್‌ಗಗಳನ್ನು ನೈಋತ್ಯ ರೈಲ್ವೇ ಅಧೀನಕ್ಕೆ ತಂದರೆ ಸರಿಯಾದ ನಿರ್ವಹಣೆ ಹಾಗೂ ನಿಲ್ದಾಣಗಳ ನಡುವೆ ಸುಲಲಿತ ಸಂಯೋಜನೆಗೆ ನೆರವಾಗಬಹುದು. ಕರಾವಳಿ ಭಾಗದ ಜನರಿಂದ ಹೊಸ ರೈಲುಗಳನ್ನು ಆರಂಭಿಸಬೇಕು ಹಾಗೂ ಕಾರವಾರಕ್ಕೂ ಕಳುಹಿಸಬೇಕು ಎನ್ನುವ ಬೇಡಿಕೆಗಳನ್ನು ಇರಿಸಲಾಗುತ್ತಿದೆ. ಆದರೆ ಇದಕ್ಕೆ ಕೊಂಕಣ ರೈಲ್ವೇ ಹಾಗೂ ದಕ್ಷಿಣ ರೈಲ್ವೇ ಸಹಕಾರ ನೀಡುತ್ತಿಲ್ಲ. ಹಾಗಾಗಿ ಇದಕ್ಕೆ ಮಂಗಳೂರು ಕಾಂಪ್ಲೆಕ್ಸ್ ಅನ್ನು ನೈಋತ್ಯ ರೈಲ್ವೇಗೆ ಹಸ್ತಾಂತರಿಸುವುದು ಸರಿಯಾದ ಪರಿಹಾರ. ಹಾಗಾಗಿ ಸೂಕ್ತ ಅಧಿಸೂಚನೆ ಹೊರಡಿಸಬೇಕು ಎಂದು ಪತ್ರ ಬರೆದಿದ್ದರು.
ಆಶೋತ್ತರಗಳಿಗೆ ಸಿಗದ ಸ್ಪಂದನೆ
ಮಂಗಳೂರು ಸಹಿತ ಕರಾವಳಿ ಭಾಗದ ರೈಲ್ವೇ ಬಳಕೆದಾರರ ಆಶೋತ್ತರಗಳಿಗೆ ಪಾಲಕ್ಕಾಡ್ ವಿಭಾಗದಿಂದ ತಣ್ಣೀರಿನ ಸ್ಪಂದನೆ ವ್ಯಕ್ತವಾದದ್ದರಿಂದ ಇಲ್ಲಿ ಪ್ರತ್ಯೇಕ ವಿಭಾಗದ ಧ್ವನಿ ಕೇಳಿಬಂತು. ಮುಖ್ಯವಾಗಿ ಮಂಗಳೂರಿನಿಂದ ಕರಾವಳಿಗರು ಹೆಚ್ಚಾಗಿ ಪಯಣಿಸುವ ಮುಂಬಯಿ, ಬೆಂಗಳೂರು, ಮೈಸೂರು, ಧಾರವಾಡ, ಶಿವಮೊಗ್ಗ ಮುಂತಾದ ಪ್ರದೇಶಗಳಿಗೆ ರೈಲು ಆರಂಭಿಸಬೇಕು ಎನ್ನುವ ಬೇಡಿಕೆಗಳಿಗೆ ಕಿವಿಯಾಗದ್ದು, ಪಾಲಕ್ಕಾಡ್ ಆದಾಯದ ಶೇ 75ರಷ್ಟು ಮಂಗಳೂರು ಪ್ರದೇಶದಿಂದಲೇ ಬಂದಿದ್ದರೂ ಈ ಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡದೆ ನಿರ್ಲಕ್ಷಿಸಿದ್ದು, ಮುಖ್ಯವಾಗಿ ನಿಲ್ದಾಣವನ್ನು ನೇರವಾಗಿಯೇ ಮಲಯಾಳೀ ಕರಣ ಮಾಡುವ ಮೂಲಕ ಕನ್ನಡಿಗರು, ತುಳುವರ ಸ್ವಾಭಿಮಾನಕ್ಕೆ ಧಕ್ಕೆ ಕೊಟ್ಟದ್ದು ರೈಲ್ವೇ ಯಾತ್ರಿಗಳನ್ನು ಕೆರಳಿಸಿತು.
ಇದರಿಂದ ಕರಾವಳಿಯಲ್ಲಿ ರೈಲ್ವೇ ಬಳಕೆದಾರರ ವೇದಿಕೆಗಳಿಂದ ನಿರಂತರ ಅಭಿಯಾನಗಳು ನಡೆದವು. ಸಂಸತ್ತಿನಲ್ಲಿ ಸಂಸದರು ಒತ್ತಡ ಹೂಡಿದರು. ಈ ಬಾರಿ ರೈಲ್ವೇ ಸಹಾಯಕ ಸಚಿವ ವಿ. ಸೋಮಣ್ಣ, ಸಂಸದ ಕ್ಯಾ| ಬ್ರಿಜೇಶ ಚೌಟ ಅವರ ಪ್ರಯತ್ನಕ್ಕೂ ಫಲ ಸಿಕ್ಕಿದೆ. ಅಂತಿಮವಾಗಿ ಅ. 1ರಿಂದ ಅಧಿಕೃತವಾಗಿ ಮಂಗಳೂರು ನೈಋತ್ಯ ರೈಲ್ವೇ ವಲಯಕ್ಕೆ ಸೇರ್ಪಡೆಯಾಗುತ್ತಿದೆ.
- ವೇಣುವಿನೋದ್ ಕೆ.ಎಸ್.

