ಕಾರ್ಕಳ: ಮೂಡುಬಿದಿರೆ- ಕಾರ್ಕಳ ಸಂಪರ್ಕ ಕೊಂಡಿ ಚಿಲಿಂಬಿ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕ ಸಂಚಾರ ಸಂಕಷ್ಟದಿಂದ ಕೂಡಿದೆ. ಈ ಬಾರಿ ಸುರಿದ ಮೊದಲ ಮಳೆಗೇ ಚಿಲಿಂಬಿ ರಸ್ತೆಯ ಇತ್ತೀಚಿನ ಕಾಮಗಾರಿ ಸಂಪೂರ್ಣ ಕುಸಿದಿದೆ. ರಸ್ತೆಯ ಇಕ್ಕೆಲಗಳಲ್ಲಿ ಹಾಕಲಾಗಿದ್ದ ಜಲ್ಲಿ ಕಲ್ಲುಗಳೆಲ್ಲ ಮಳೆ ನೀರಿಗೆ ಕೊಚ್ಚಿ ಬಂದು ರಸ್ತೆಯ ಮಧ್ಯದಲ್ಲೇ ರಾಶಿ ಬಿದ್ದಿವೆ.
ಇದು ದ್ವಿಚಕ್ರ ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.
ಈಗಾಗಲೇ ಜಲ್ಲಿ ಕಲ್ಲುಗಳ ಮೇಲೆ ವಾಹನ ಜಾರಿ ಹಲವು ಅಪಘಾತಗಳು ಸಂಭವಿಸಿದ್ದು, ಸಾರ್ವಜನಿಕರು ಗಾಯಗೊಂಡಿರುವುದು ಆತಂಕ ಮೂಡಿಸಿದೆ. ಹಗಲಿನಲ್ಲೇ ಸಂಚಾರ ದುಸ್ತರ ಎನ್ನುವಂತಿರುವ ಈ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಚಲಾಯಿಸುವುದು ಜೀವಕ್ಕೆ ಆಪಾಯ.
ರಸ್ತೆಯಲ್ಲಿ ಸಮರ್ಪಕ ಬೀದಿ ದೀಪದ ವ್ಯವಸ್ಥೆಯೂ ಇಲ್ಲದ ಕಾರಣ, ಮುಂದಿರುವ ಬೃಹತ್ ಗುಂಡಿಗಳು ಸವಾರರಿಗೆ ಕಾಣಿಸು ವುದೇ ಇಲ್ಲ. ಪರಿಣಾಮವಾಗಿ ದಿನನಿತ್ಯ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮರ್ಪಕವಾದ ಚರಂಡಿ ವ್ಯವಸ್ಥೆಯೇ ಇಲ್ಲದಿರುವುದು ಸಮಸ್ಯೆ ಮತ್ತಷ್ಟು ಜಟಿಲಗೊಳಿಸಿದೆ. ಮಳೆ ಬಂದಾಗ ರಸ್ತೆ ತುಂಬಾ ಕೆಸರು ನೀರು ನಿಂತು ವಾಹನಗಳು ಕೆಟ್ಟು ನಿಲ್ಲುತ್ತವೆ. ಇನ್ನು ಮಳೆ ನಿಂತು ಬಿಸಿಲು ಬಂದರೇ ಮತ್ತೂಂದು ಸಂಕಷ್ಟ. ಧೂಳಿನಿಂದಾಗಿ ಅಂಗಡಿ-ಮುಂಗಟ್ಟು, ಮನೆಗಳ ಒಳಗೆ ಕುಳಿತುಕೊಳ್ಳದಷ್ಟು ಕೆಟ್ಟ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದಾಗಿ ಪಾದಚಾರಿಗಳು, ಶಾಲಾ ಮಕ್ಕಳು ಹಾಗೂ ವಯೋವೃದ್ಧರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.
ಕಾರ್ಕಳ-ಮೂಡುಬಿದಿರೆ ಮಾರ್ಗವಾಗಿ ಸಾಕಷ್ಟು ವಾಹನಗಳು ಓಡಾಡುತ್ತಿದ್ದು, ಶಿಕ್ಷಣ, ಉದ್ಯೋಗ ಇನ್ನಿತರೆ ಕೆಲಸಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಂತ ವಾಹನಗಳಲ್ಲಿಯೂ ಜನರು ಓಡಾಡುತ್ತಾರೆ.
ತತ್‌ಕ್ಷಣ ಕ್ರಮವಹಿಸಲು ಒತ್ತಾಯ
ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಇಲಾಖೆ ಎಂಜಿನೀಯರ್ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಬೇಕು. ಕಳಪೆ ಕಾಮಗಾರಿಗೆ ಕಾರಣರಾದ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಶಾಶ್ವತ, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ರಸ್ತೆಯ ಇಕ್ಕೆಲಗಳಲ್ಲಿ ವೈಜ್ಞಾನಿಕ ಚರಂಡಿ ವ್ಯವಸ್ಥೆ ಕಲ್ಪಿಸುವುದು ತುರ್ತು ಅಗತ್ಯವಾಗಿದೆ ಎಂದು ರಾಧಿಕಾ ಬೈಲೂರು, ವಿನೋದ್ ಶೆಟ್ಟಿ ಆಗ್ರಹಿಸಿದ್ದಾರೆ.

