ಕಾರ್ಕಳ: ಸಾಣೂರಿನ ರಾಷ್ಟ್ರೀಯ ಹೆದ್ದಾರಿ 169ರ ಸೋಫಿಯಾ ಆಸ್ಪತ್ರೆ ಪಕ್ಕದ ಟ್ರಾನ್ಸ್‌ಫಾರ್ಮರ್‌ನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡು ಅಗ್ನಿ ಅವಘಡ ಸಂಭವಿಸಿದೆ.
ಬೆಂಕಿಯ ಜ್ವಾಲೆ ಪಕ್ಕದ ಗಿಡಗಂಟೆಗಳಿಗೂ ವ್ಯಾಪಿಸಿ ಆತಂಕ ಸೃಷ್ಟಿಸಿತ್ತು. ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರಿಂದ, ಸಿಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಈ ಭಾಗದಲ್ಲಿ ಗಿಡಗಂಟಿಗಳು, ಕಟ್ಟಡ ತ್ಯಾಜ್ಯ ಅಪಾರ ಪ್ರಮಾಣದಲ್ಲಿದ್ದರಿಂದ ಬೆಂಕಿ ಅಧಿಕವಾಗಿ ವ್ಯಾಪಿಸಿ ದಟ್ಟ ಹೊಗೆ ಪರಿಸರದಲ್ಲಿ ಆವರಿಸಿಕೊಂಡಿತ್ತು. ಪರಿಸರದ ಸ್ಥಳೀಯರು ಆತಂಕಗೊಂಡಿದ್ದರು. ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಅಪಾಯ ತಪ್ಪಿದೆ. ಕಾರ್ಕಳ ಅಗ್ನಿಶಾಮಕ ದಳದ
ಪ್ರಭಾರ ಠಾಣಾಧಿಕಾರಿ ಚಂದ್ರಶೇಖರ್, ಪ್ರಮುಖರಾದ ಅಚ್ಯುತ ಕರ್ಕೇರ, ಲೊಕೇಶ್, ನಿತ್ಯಾನಂದ, ಬಸವರಾಜ್ ಕಾರ್ಯಾಚರಣೆಯಲ್ಲಿದ್ದರು.

