Dailyhunt Logo
  • Light mode
    Follow system
    Dark mode
    • Play Story
    • App Story
ಕರ್ನಾಟಕ ಸಹಿತ ಎಲ್ಲ ರಾಜ್ಯದ ದಿನಕೂಲಿ ಮೊತ್ತದಲ್ಲಿ ಅಲ್ಪ ಏರಿಕೆ

ಕರ್ನಾಟಕ ಸಹಿತ ಎಲ್ಲ ರಾಜ್ಯದ ದಿನಕೂಲಿ ಮೊತ್ತದಲ್ಲಿ ಅಲ್ಪ ಏರಿಕೆ

ಉಡುಪಿ: ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೇಂದ್ರ ಸರಕಾರ ಮಹತ್ವದ ಬದಲಾವಣೆ ತಂದಿದ್ದು, ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಖಾತರಿ ಮತ್ತು ಅಜೀವಿಕಾ ಮಿಷನ್‌ (ವಿಬಿ ಜಿ-ರಾಮ್‌ ಜಿ) ಕಾಯ್ದೆ 2025ರ ಅನುಷ್ಠಾನ ಜು. 1ರಿಂದ ದೇಶಾದ್ಯಂತ ಜಾರಿಯಾಗಿದ್ದು, ಇದರನ್ವಯ ಎಲ್ಲ ರಾಜ್ಯಗಳ ದಿನಕೂಲಿಯನ್ನೂ ಹೆಚ್ಚಳ ಮಾಡಲಾಗಿದೆ.

2013ರಿಂದ ಜಾರಿಯಲ್ಲಿದ್ದ ನರೇಗಾ ಅಧಿಸೂಚನೆ ಬದಲಿಸಿ ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಹೊಸ ಯೋಜನೆಯಡಿ ಕರ್ನಾಟಕದಲ್ಲಿ ದಿನಗೂಲಿ 382 ನಿಗದಿಯಾಗಿದೆ. ಈವರೆಗೂ ನರೇಗಾ ದಿನಗೂಲಿ 370 ರೂ. ಇದ್ದು, ಈಗ 12 ರೂ. ಹೆಚ್ಚಿಸಲಾಗಿದೆ.

ದೇಶದಲ್ಲೇ ಎಲ್ಲಿದೆ ಅತೀ ಹೆಚ್ಚು?
ಸಾಮಾನ್ಯ ರಾಜ್ಯಗಳ ಪೈಕಿ ಹರಿಯಾಣದಲ್ಲಿ 409 ರೂ. ದಿನಗೂಲಿ ನಿಗದಿಯಾಗಿದ್ದು, ಮೊದಲ ಸ್ಥಾನದಲ್ಲಿದೆ. ಅನಂತರ ಗೋವಾ (406 ರೂ.), ಕೇರಳ (401 ರೂ.) ಮತ್ತು ಕರ್ನಾಟಕ (382 ರೂ.) ಅನಂತರದ ಸ್ಥಾನ ಪಡೆದಿವೆ.

ವಿಶೇಷ ಪ್ರದೇಶವಾಗಿ ಸಿಕ್ಕಿಂನ ಗ್ನಾಥಾಂಗ್‌, ಲಾಚುಂಗ್‌ ಮತ್ತು ಲಾಚೆನ್‌ ಗ್ರಾ.ಪಂ.ಗಳಿಗೆ 450 ರೂ. ದಿನಗೂಲಿ ನಿಗದಿಯಾಗಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಕೋಬಾರ್‌ ಜಿಲ್ಲೆಗೆ 367 ಅತೀ ಹೆಚ್ಚು ದಿನಗೂಲಿ ನಿಗದಿಯಾಗಿದೆ. ಉಳಿದಂತೆ ಹಿಮಾಚಲ ಪ್ರದೇಶ (ಪಂಗಡ ಪ್ರದೇಶ) 375 ರೂ., ಪಂಜಾಬ್‌ 360 ರೂ. ಅಂಡಮಾನ್‌ ಜಿಲ್ಲೆ 348 ರೂ., ಲಕ್ಷದ್ವೀಪ 348 ರೂ., ಪುದುಚೇರಿ 347 ರೂ., ತಮಿಳುನಾಡು 345 ರೂ., ದಾದ್ರಾ ಮತ್ತು ನಗರ ಹವೇಲಿ-ದಮನ್‌ ಮತ್ತು ದಿಯು 340 ರೂ., ಮಹಾರಾಷ್ಟ್ರ 317 ರೂ,, ಆಂಧ್ರಪ್ರದೇಶ 312 ರೂ., ತೆಲಂಗಾಣ 308 ರೂ., ಉಳಿದೆಲ್ಲ ರಾಜ್ಯಗಳಿಗೆ 300 ದಿನಗೂಲಿ ನಿಗದಿಯಾಗಿದೆ.

ಕೂಲಿ ಪಾವತಿಯಲ್ಲೂ ಬದಲಾವಣೆ
ಹೊಸ ಯೋಜನೆಯಲ್ಲಿ ದಿನಗೂಲಿ ದರ ಮಾತ್ರವಲ್ಲ, ಕೂಲಿ ಪಾವತಿ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆ ಆಗಿದೆ.ನರೇಗಾ ಯೋಜನೆಯಲ್ಲಿ ಕಾಮಗಾರಿ ಪೂರ್ಣಗೊಂಡ ಬಳಿಕ ಕೂಲಿ ಮೊತ್ತವನ್ನು ಕೇಂದ್ರ ಸರಕಾರದಿಂದ ನೇರವಾಗಿ ಉದ್ಯೋಗ ಚೀಟಿ ಹೊಂದಿದ ಫಲಾನುಭವಿಯ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಇದರಿಂದ ರಾಜ್ಯ ಸರಕಾರದ ಪಾಲು ಅಥವಾ ಖಜಾನೆ ಪ್ರಕ್ರಿಯೆಯಿಂದಾಗಿ ಕೂಲಿ ಪಾವತಿಯಲ್ಲಿ ಹೆಚ್ಚಿನ ವಿಳಂಬ ಉಂಟಾಗುವ ಸಾಧ್ಯತೆ ಕಡಿಮೆ ಇತ್ತು.

ಆದರೆ ವಿ ಬಿ ಜಿ-ರಾಮ್‌-ಜಿ ಕಾಯ್ದೆಯಡಿ ರಾಜ್ಯ ಸರಕಾರವೂ ಯೋಜನೆಯ ವೆಚ್ಚದಲ್ಲಿ ತನ್ನ ಪಾಲನ್ನು ಭರಿಸಬೇಕಾಗುತ್ತದೆ. ಕಾಮಗಾರಿಯ ಬಿಲ್‌ಗ‌ಳನ್ನು ಗ್ರಾ.ಪಂ.ಗಳು ಖಜಾನೆಗೆ ಸಲ್ಲಿಸಿದ ಬಳಿಕ ಪರಿಶೀಲನೆ ನಡೆಸಿ, ಕೇಂದ್ರ ಮತ್ತು ರಾಜ್ಯದ ಪಾಲನ್ನು ಒಟ್ಟುಗೂಡಿಸಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ರಾಜ್ಯದ ಪಾಲು ಅಥವಾ ಕೇಂದ್ರದ ಪಾಲು ಬಿಡುಗಡೆಯಲ್ಲಿ ವಿಳಂಬವಾದರೆ ಕೂಲಿ ಪಾವತಿಯೂ ತಡವಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
60:40 ಅನುಪಾತ ಸವಾಲು
ಹೊಸ ಕಾಯ್ದೆಯ ಮತ್ತೊಂದು ಪ್ರಮುಖ ಅಂಶವೆಂದರೆ 60:40 ಅನುಪಾತವನ್ನು ಕಡ್ಡಾಯವಾಗಿ ಪಾಲಿಸುವುದು. ಕಾಮಗಾರಿ ಗಳಲ್ಲಿ ಕಾರ್ಮಿಕ ವೆಚ್ಚ ಮತ್ತು ಸಾಮಗ್ರಿ ವೆಚ್ಚದ ಅನುಪಾತವನ್ನು ಎಲ್ಲ ಹಂತಗಳಲ್ಲೂ ಕಾಪಾಡಬೇಕಾಗುತ್ತದೆ.

ಗ್ರಾ.ಪಂ.ಗಳು ಕಾಮಗಾರಿಗಳನ್ನು ರೂಪಿಸು ವಾಗ, ಅನುಮೋದಿ ಸುವಾಗ ಹಾಗೂ ಬಿಲ್‌ ಸಲ್ಲಿಸುವಾಗ ಈ ಅನುಪಾತವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗುತ್ತದೆ. ಇದರಿಂದ ಯೋಜನೆ ರೂಪಿಸುವುದು ಮತ್ತು ಅನುಷ್ಠಾನಗೊಳಿಸು ವುದು ಹಿಂದಿನ ವ್ಯವಸ್ಥೆಗಿಂತ ಹೆಚ್ಚು ಆಡಳಿತಾತ್ಮಕ ಸವಾಲಾಗುವ ಸಾಧ್ಯತೆ ಇದೆ.

ಕರ್ನಾಟಕಕ್ಕೆ ಏನು ಲಾಭ?
ಕರ್ನಾಟಕದಲ್ಲಿ ದಿನಗೂಲಿ 382 ರೂ.ಗಳಿಗೆ ಏರಿಕೆಯಾಗಿರುವುದು ಗ್ರಾಮೀಣ ಕಾರ್ಮಿಕರಿಗೆ ಆದಾಯ ಹೆಚ್ಚಳದ ದೃಷ್ಟಿಯಿಂದ ಅನುಕೂಲಕರವಾಗಿದೆ. ಆದರೆ ಹೊಸ ಹಣಕಾಸು ಹಂಚಿಕೆ ವ್ಯವಸ್ಥೆ ಹಾಗೂ ಖಜಾನೆ ಆಧಾರಿತ ಪಾವತಿ ಪ್ರಕ್ರಿಯೆ ಜಾರಿಯಾದರೆ, ಕೂಲಿ ಸಮಯಕ್ಕೆ ಸಿಗುತ್ತದೆಯೇ ಎಂಬುದು ರಾಜ್ಯ ಸರಕಾರದ ಹಣ ಬಿಡುಗಡೆ ಮತ್ತು ಆಡಳಿತಾತ್ಮಕ ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani